Advertisement

ಕಾರವಾರ ವಾಣಿಜ್ಯ ಬಂದರು 2ನೇ ಹಂತದ ವಿಸ್ತರಣೆ ಅವೈಜ್ಞಾನಿಕ

04:31 PM Dec 16, 2019 | Suhan S |

ಕಾರವಾರ: ಇಲ್ಲಿನ ವಾಣಿಜ್ಯ ಬಂದರು ವಿಸ್ತರಣೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಮೀನುಗಾರರ ಮುಖಂಡ ಕೆ.ಟಿ. ತಾಂಡೇಲ್‌ ಆರೋಪಿಸಿದರು.

Advertisement

ಕಾರವಾರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕರಾವಳಿ ತೀರದಲ್ಲಿ 14,500 ಮೀನುಗಾರ ಕುಟುಂಬಗಳಿದ್ದು, ವಾಣಿಜ್ಯ ಬಂದರಿನ ಅವೈಜ್ಞಾನಿಕ ವಿಸ್ತರಣೆಯಿಂದ ಮೀನುಗಾರರ ವೃತ್ತಿಗೆ ತೊಂದರೆಯಾಗಲಿದೆ. ಇದರಿಂದ ಮೀನುಗಾರರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ. 43ಕಿಮೀ ಉದ್ದದ ಕಾರವಾರ ಕಡಲ ತೀರದ ಬಹುತೇಕ ಭಾಗವನ್ನು ಬಂದರು ಹಾಗೂ ನೌಕಾನೆಲೆ ಸ್ವಾಧೀನಕ್ಕೆ ನೀಡಲಾಗಿದೆ. ಈಗ ಇರುವ ಏಕೈಕ ಕಡಲ ತೀರವನ್ನು ಕಳೆದುಕೊಳ್ಳಲು ಯಾರು ಇಚ್ಚಿಸುವುದಿಲ್ಲ. ಅನೇಕ ಕಡಲ ತೀರಗಳು ಈಗಾಗಲೇ ಜಟ್ಟಿ, ತಡೆಗೋಡೆಗಳಿಂದ ನಾಶವಾಗಿದೆ. ಈಗಿರುವ ತೀರವನ್ನು ಉಳಿಸಿಕೊಳ್ಳಬೇಕಿದೆ. ಭಾರತದ ಕರಾವಳಿವಲಯ ಕಾಯ್ದೆ ಉಲ್ಲಂಘಿಸಿ ಬಂದರು ವಿಸ್ತರಣೆಯ ಸಂಚು ರೂಪಿಸಲಾಗಿದೆ. ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ದೂರಿದ ತಾಂಡೇಲ ಅವರು ಬಂದರು ಅಭಿವೃದ್ಧಿ ಹೆಸರಿನಲ್ಲಿ ಬಡ ಮೀನುಗಾರರನ್ನು ಒಕ್ಕಲೆಬ್ಬಿಸುವ ಮೂಲಕ ಸಂಕಷ್ಟಕ್ಕೆ ದೂಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರ ಮೇಲೆ ನೌಕಾನೆಲೆ ಅಧಿಕಾರಿಗಳು ಮೊದಲಿನಿಂದಲೂ ದಬ್ಟಾಳಿಕೆ ನಡೆಸುತ್ತಿದ್ದಾರೆ. ಇದೀಗ ಬಂದರು ವಿಸ್ತರಣೆ ಹೆಸರಿನಲ್ಲಿ ಸರ್ಕಾರವೂ ಮೀನುಗಾರರನ್ನು ಒಕ್ಕಲೆಬ್ಬಿಸುತ್ತಿದೆ. ಜಿಲ್ಲಾಡಳಿತ ಕಾಟಾಚಾರಕ್ಕಾಗಿ ದೂರ ದೂರದ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಿದ್ದು, ಕಡಲು ಇಲ್ಲದ ಪ್ರದೇಶದಲ್ಲಿ ಮೀನುಗಾರರು ಬದುಕುವುದು ಕಷ್ಟ. ಬಂದರು ವಿಸ್ತರಣೆಗಾಗಿ ಅನೇಕ ರೀತಿಯ ಕೆಲಸಗಳನ್ನು ಕಾನೂನು ಬಾಹಿರವಾಗಿ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಮೀನುಗಾರರ ದೋಣಿ ನಿಲುಗಡೆ, ಬಲೆ ಇರಿಸುವಿಕೆಗೂ ಜಾಗದ ಅಭಾವ ಕಾಡಲಿದೆ. ರೈಲ್ವೆ ಸಂಪರ್ಕ ಕೊಡುವುದಕ್ಕಾಗಿ ಹಲವು ಮನೆಗಳ ನೆಲ ಸಮ ಮಾಡಲಾಗುತ್ತದೆ. ಹೀಗಾಗಿ ಒಟ್ಟಾರೆಯಾಗಿ ಮೀನುಗಾರರ ಉಳಿವಿಕೆಗಾಗಿ ಬಂದರು ವಿಸ್ತರಣೆಯನ್ನು ಎಲ್ಲರೂ ವಿರೋಧಿಸಬೇಕು ಎಂದು ಕರೆ ನೀಡಿದರು. ಮೀನುಗಾರರ ಪ್ರಮುಖರಾದ ಗಣಪತಿ ಮಾಂಗ್ರೆ, ಡಾ| ಪ್ರಕಾಶ ಮೇಸ್ತಾ, ಸುಶೀಲ ಹರಿಕಂತ್ರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next