Advertisement

ಕುಡ್ಲ ಎಕ್ಸ್‌ಪ್ರೆಸ್‌ ಶೀಘ್ರ ಮಂಗಳೂರು ಸೆಂಟ್ರಲ್‌ಗೆ ವಿಸ್ತರಣೆ

02:25 PM Apr 28, 2017 | Team Udayavani |

ಮಂಗಳೂರು: ಮಂಗಳೂರು-ಬೆಂಗಳೂರು ನಡುವೆ ಇತ್ತೀಚೆಗೆ ಪ್ರಾರಂಭಗೊಂಡಿರುವ “ಕುಡ್ಲ ಎಕ್ಸ್‌ಪ್ರೆಸ್‌’ ಇಂಟರ್‌ ಸಿಟಿ ರೈಲು ಸಂಚಾರ ಶೀಘ್ರದಲ್ಲೇ ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಣೆಯಾಗುವ ಸಾಧ್ಯತೆಯಿದೆ.

Advertisement

ಪಾಲಾ^ಟ್‌ನಲ್ಲಿ ಗುರುವಾರ ನಡೆದ ವಿಭಾಗೀಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಕುಡ್ಲ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಕಂಕನಾಡಿ ಜಂಕ್ಷನ್‌ ನಿಂದ ಸೆಂಟ್ರಲ್‌ವರೆಗೆ ವಿಸ್ತರಿಸುವ ಜತೆಗೆ ವೇಳಾಪಟ್ಟಿ ಬದಲಿಸುವ ಬೇಡಿಕೆ ಕುರಿತಂತೆ ವಿಸ್ತೃತ ಚರ್ಚೆ ನಡೆದಿದೆ. ಕುಡ್ಲ ಎಕ್ಸ್‌ಪ್ರೆಸ್‌ ರೈಲು ಸದ್ಯ ಕಂಕನಾಡಿ ಜಂಕ್ಷನ್‌ನಿಂದ ಹೊರಟು ಬೆಂಗಳೂರು ಸಿಟಿ ಬದಲಿಗೆ ಯಶವಂತ 
ಪುರ ನಿಲ್ದಾಣ ತಲುಪುತ್ತಿದ್ದು, ಇದ ರಿಂದ ಪ್ರಯಾಣಿಕರಿಗೆ ತುಂಬಾ ಅನನುಕೂಲ ಆಗುತ್ತಿದೆ. ಈ ಕಾರಣದಿಂದ ಈ ರೈಲು ಜಂಕ್ಷನ್‌ ಬದಲು ಮಂಗಳೂರು ಸೆಂಟ್ರಲ್‌ನಿಂದ ಹೊರಟು ಬೆಂಗಳೂರು ಸೆಂಟ್ರಲ್‌ಗೆ ಸಂಚರಿಸುವಂತೆ ಬದಲಿಸಬೇಕೆಂದು ರೈಲ್ವೇ ಬಳಕೆದಾರರ ಸಮಿತಿ ಪರವಾಗಿ ಹನುಮಂತ್‌ ಕಾಮತ್‌ ಅವರು ಸಭೆಯಲ್ಲಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಕ್ಷಿಣ ರೈಲ್ವೇ ಡಿಆರ್‌ಎಂ ನರೇಶ್‌ ಲಾಲ್ವಾನಿ, ಕುಡ್ಲ ಎಕ್ಸ್‌ಪ್ರೆಸ್‌ ಸಂಚಾರ ಸಂಬಂಧ, ಒಂದು ವೇಳೆ ನೈಋತ್ಯ ರೈಲ್ವೇ ವಲಯವು ವೇಳಾಪಟ್ಟಿಯನ್ನು ಮಾರ್ಪಡಿಸುವುದಾದರೆ, ಈ ರೈಲು ಅನ್ನು ಮಂಗಳೂರು ಸೆಂಟ್ರಲ್‌ವರೆಗೆ ಓಡಿಸುವುದಕ್ಕೆ ತೊಂದರೆಯಿಲ್ಲ. ಅಲ್ಲದೆ, ಈ ರೈಲು ಸೆಂಟ್ರಲ್‌ವರೆಗೆ ವಿಸ್ತರಣೆ ಯಾಗಬೇಕಾದರೆ ನಿಲುಗಡೆಗೂ ಅಲ್ಲಿ ಫ್ಲ್ಯಾಟ್‌ಫಾರಂ ಒದಗಿಸಬೇಕಾಗುತ್ತದೆ. ಹೀಗಾಗಿ, ಬೇರೆ ರೈಲಿನ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡುವ ಮೂಲಕ ಕುಡ್ಲ ಎಕ್ಸ್‌ಪ್ರೆಸ್‌
ಅನ್ನು ಪ್ರಯಾಣಿಕರಿಗೆ ಹೆಚ್ಚು ಅನು ಕೂಲವಾಗುವಂತೆ ಮಂಗಳೂರು ಸೆಂಟ್ರಲ್‌ ಹಾಗೂ ಬೆಂಗಳೂರು ಸೆಂಟ್ರಲ್‌ ನಡುವೆ ಓಡಿಸುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಕಾರವಾರ – ಮಂಗಳೂರು – ಬೆಂಗಳೂರು ರೈಲನ್ನು ಹಾಸನ ಮಾರ್ಗವಾಗಿ ಓಡಿಸುವುದರಿಂದ ಬೆಂಗಳೂರಿಗೆ ಹೋಗುವವರಿಗೆ 3 ತಾಸು ಪ್ರಯಾಣದ ಅವಧಿ ಉಳಿತಾಯವಾಗುತ್ತದೆ. ಈ ರೈಲಿನ ಸಮಯ ಮತ್ತು ಮಾರ್ಗದ ಬದಲಾವಣೆ ಮಾಡಿದರೆ ಕುಡ್ಲ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಬದಲಾವಣೆ ಹಾಗೂ ಮಂಗಳೂರು ಸೆಂಟ್ರಲ್‌ನಲ್ಲಿ ಫ್ಲ್ಯಾಟ್‌ಫಾರಂನಲ್ಲಿ ಸ್ಥಳಾವಕಾಶ ದೊರೆಯಲಿದೆ ಎಂಬ ಸಲಹೆಯನ್ನೂ ಹನುಮಂತ್‌ ಕಾಮತ್‌ ಸಭೆಯಲ್ಲಿ ನೀಡಿದ್ದಾರೆ ಎನ್ನಲಾಗಿದೆ.

ಈ ಬೇಡಿಕೆ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ “ಉದಯವಾಣಿ ‘ ಪತ್ರಿಕೆಯು ಕುಡ್ಲ ಎಕ್ಸ್‌ಪ್ರೆಸ್‌ ರೈಲು ಸಂಚಾರದ ವೇಳಾಪಟ್ಟಿ ಅನನುಕೂಲದ ಬಗ್ಗೆ ಇತ್ತೀಚೆಗೆ ನಡೆಸಿದ್ದ ರಿಯಾಲಿಟಿ ಚೆಕ್‌ ವರದಿ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next