ಬೆಂಗಳೂರು: ನಗರದ ಯಶವಂಶಪುರ ಹಾಗೂ ಕೆಂಪೇಗೌಡ ಬಸ್ ನಿಲ್ದಾಣಗಳಲ್ಲಿ ಲಭ್ಯವಿರುವ ಇಂದಿರಾ ಸಾರಿಗೆ ಚಿಕಿತ್ಸಾಲಯ ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಮುಂದಿನ ದಿನಗಳಲ್ಲಿ ನಗರದ ಪ್ರಮುಖ ಬಿಎಂಟಿಸಿ ನಿಲ್ದಾಣಗಳಲ್ಲಿ ಚಿಕಿತ್ಸಾಲಯ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಯಾಣಿಕರಿಗೆ ತುರ್ತು ಆರೋಗ್ಯ ಸೇವೆ ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಯೋಗಿಕವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬಿಬಿಎಂಪಿ ಸಹಯೋಗದಿಂದ ಈ ಸಾರಿಗೆ ಚಿಕಿತ್ಸಾಲಯ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಜನ ದಟ್ಟಣೆ ಇರುವ ಬನಶಂಕರಿ, ಜಯನಗರ ಹಾಗೂ ಶಾಂತಿನಗರ ಬಸ್ ನಿಲ್ದಾಣಗಳ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಚಿಕಿತ್ಸಾಲಯ ಪ್ರಾರಂಭಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
2017 ಡಿಸೆಂಬರ್‌ನಲ್ಲಿ ಪ್ರಾಯೋಗಿಕವಾಗಿ ನಗರ ಕೆಂಪೇಗೌಡ ಬಸ್‌ನಿಲ್ದಾಣ (ಮೆಜೆಸ್ಟಿಕ್)ಹಾಗೂ ಯಶವಂತಪುರಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹಾಗೂ ಸಾರಿಗೆ ನಿಗಮಗಳ ನೌಕರರಿಗೆ ಅಗತ್ಯವಿರುವ ಪ್ರಾಥಮಿಕ ಹಾಗೂ ತುರ್ತು ಆರೋಗ್ಯ ಸೇವೆ ಒದಗಿಸುತ್ತಾ ಬಂದಿದೆ. ಆರಂಭಿಸಿದ ಇಲ್ಲಿಯವರೆಗೂ ಪ್ರತಿ ತಿಂಗಳು 1500ಕ್ಕೂ ಹೆಚ್ಚು ಮಂದಿ ಆರಂಭದಿಂದ ಇಲ್ಲಿಯವರೆಗೂ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಈ ಚಿಕಿತ್ಸಾಲಯದಲ್ಲಿ ಆರೋಗ್ಯ ಸೇವೆ ಪಡೆದಿದ್ದಾರೆ ಎಂದು ಬಿಬಿಎಂಪಿ ರಾಷ್ಟ್ರೀಯ ನಗರ ಆರೋಗ್ಯ ಕಾರ್ಯಕ್ರಮದ ವ್ಯವಸ್ಥಾಪಕ ಡಾ. ಜಿ.ಕೆ. ಸುರೇಶ್ ತಿಳಿಸಿದರು.
ಉಚಿತ ಚಿಕಿತ್ಸೆ: ಇಂದಿರಾ ಸಾರಿಗೆ ಚಿಕಿತ್ಸಾಲಯದಲ್ಲಿ ಉಚಿತ ಸೇವೆ ಲಭ್ಯವಿದೆ. ಜತೆಗೆ ಅಗತ್ಯ ಔಷಧವನ್ನು ರೋಗಿಗೆ ಉಚಿತವಾಗಿಯೇ ನೀಡುತ್ತಾರೆ. ನಿತ್ಯ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಹಾಗೂ ಭಾನುವಾರದಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕ್ಲಿನಿಕ್ ತೆರೆದಿದ್ದು, ಒಬ್ಬ ವೈದ್ಯ, ಒಬ್ಬರು ಶುಶ್ರೂಷಕಿ, ಒಬ್ಬರು ಫಾರ್ಮಾಸಿಸ್ಟ್ ಮತ್ತು ಲ್ಯಾಬ್ ಟೆಕ್ನೀಷಿಯನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ ಚಿಕಿತ್ಸಾಲಯದಲ್ಲಿ ತುರ್ತು ಸೇವೆಗಳಾದ ಇಸಿಜಿ, ರಕ್ತದ ಒತ್ತಡ, ಮಧುಮೇಹ ಪರೀಕ್ಷೆ ಸೌಲಭ್ಯವಿದೆ. ಹೆಚ್ಚುವರಿ ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ತೀರಾ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು 108 ಆಂಬ್ಯುಲೆನ್ಸ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಈ ಚಿಕಿತ್ಸಾಲಯದಲ್ಲಿ ನಿತ್ಯ ಕನಿಷ್ಠ 50 ಮಂದಿ ಚಿಕಿತ್ಸೆ ಪಡೆಯುತ್ತಾರೆ. ‘ಪ್ರಯಾಣದಿಂದ ಆಯಾಸಗೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರಮುಖವಾಗಿ ಜ್ವರ, ತಲೆನೋವು, ವಾಂತಿ, ಕೆಮ್ಮು, ನೆಗಡಿ, ಸಣ್ಣಪುಟ್ಟ ಗಾಯಗಳು ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳೇ ಹೆಚ್ಚು ಬರುತ್ತಾರೆ ಎಂದು ಚಿಕಿತ್ಸಾಲಯ ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸಾಲಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ:
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ಬಹುತೇಕರಿಗೆ ರೋಗ ಕೊನೆಯ ಹಂತ ತಲುಪಿದಾಗಲೇ ಪತ್ತೆಯಾಗುತ್ತದೆ. ಹೀಗಾಗಿ, ಸಾರ್ವಜನಿಕರಿಗೆ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಜತೆಗೆ ಆರಂಭದಲ್ಲಿಯೇ ರೋಗ ಪತ್ತೆ ಅವಶ್ಯಕತೆಯೂ ಇದೆ. ಹೀಗಾಗಿ, ಇಂದಿರಾ ಚಿಕಿತ್ಸಾಲಯದ ಸೇವೆಯನ್ನು ಇನ್ನಷ್ಟು ಅಭಿವೃದ್ಧಿ ಪಡೆಸಿ ಕ್ಯಾನ್ಸರ್ ಪರೀಕ್ಷಾ ಸಲಕರಣೆಗಳನ್ನು ಒದಗಿಸಲು ಚಿಂತನೆ ನಡೆಸಿದೆ. ಪ್ರಮುಖವಾಗಿ ಜನಸಾಮಾನ್ಯರಲ್ಲಿ ಹೆಚ್ಚು ಕಂಡು ಬರುವ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕಂಟದ ಕ್ಯಾನ್ಸರ್ ತಪಾಸಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಇಂದಿರಾ ಚಿಕಿತ್ಸಾಲಯಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ, ನಗರದ ಇತರೆ ಭಾಗಗಳಲ್ಲೂ ಕೇಂದ್ರಗಳನ್ನು ಆರಂಭಿಸುವ ಚಿಂತನೆ ನಡೆಸಿ ಪ್ರಸ್ತಾವ ಸಲ್ಲಿಸಿದ್ದೇವೆ. ಚಿಕಿತ್ಸಾಲಯವನ್ನು ಇನ್ನಷ್ಟು ಅಭಿವೃದ್ಧಿ ಪಡೆಸಿ ಕ್ಯಾನ್ಸರ್ ಪತ್ತೆ ಹೆಚ್ಚು ಸೌಲಭ್ಯ ಕಲ್ಪಿಸಲಾಗುವುದು.
•ಡಾ. ಪ್ರಭುದೇವ್, ಆರೋಗ್ಯ ಮಿಷನ್‌ನ ರಾಜ್ಯ ನೋಡಲ್ ಅಧಿಕಾರಿ
● ಜಯಪ್ರಕಾಶ್ ಬಿರಾದಾರ್