ದಾವಣಗೆರೆ: ಕೊರೊನಾ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿರುವವರು ಒಳಗೊಂಡಂತೆ ಎಲ್ಲರ ಜೀವನ ನಿರ್ವಹಣೆ ಅನುಕೂಲಕ್ಕಾಗಿ ನಗರ ಪ್ರದೇಶಕ್ಕೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ನೇತೃತ್ವದದಲ್ಲಿ ಸ್ಲಂ ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕೊಳಚೆ ಪ್ರದೇಶಗಳಲ್ಲಿನ ನಿವಾಸಿಗಳು, ಬಡವರು ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ದುಡಿದು ತಿನ್ನುವಂತಹವರರು ಉದ್ಯೋಗ ಸಿಗದೆ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಕೊರೊನಾ ವೈರಸ್ ಹಾವಳಿ, ಲಾಕ್‌ಡೌನ್ ಶೇ 70 ಕ್ಕೂ ಹೆಚ್ಚು ಜನರು ದುಡಿಯುವ ಅಸಂಘಟಿತ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಹೆಚ್ಚಾಗಿ
ದಿನಗೂಲಿ ಮಾಡುವವರು ಸಂಕಷ್ಟದಲ್ಲಿದ್ದಾರೆ. ನಗರ ಪ್ರದೇಶಗಳಲ್ಲೂ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸುವ ಮೂಲಕ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು
ಒತ್ತಾಯಿಸಿದರು.
ನಗರ ಪ್ರದೇಶಗಳಲ್ಲಿನ ಬೀದಿಬದಿಯ ವ್ಯಾಪಾರ ಮಾಡುವವರು, ಸ್ವಚ್ಚತೆ ಮಾಡುವವರು,ಚಿಂದಿ ಸಂಗ್ರಹಿಸುವರು, ಗಾರ್ಮೆಂಟ್, ಕಟ್ಟಡ, ವಲಸೆ ಕಾರ್ಮಿಕರು, ಮನೆಗೆಲಸದವರು ಸೇರಿದಂತೆ ಅನೇಕರು ಕಳೆದ 4 ತಿಂಗಳಿನಿಂದ ಕೆಲಸ ಇಲ್ಲದೆ ಪರಿತಪಿಸುತ್ತಿದ್ದಾರೆ. ಸರ್ಕಾರ ಕೋವಿಡ್-19 ಹಿನ್ನೆಲೆಯಲ್ಲಿ ಜಾರಿಗೆ ತಂದಿದ್ದ ಲಾಕ್‌ಡೌನ್ ತೆರವಿನ ನಂತರವೂ ಸ್ಲಂ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ನಗರ ಪ್ರದೇಶಗಳಲ್ಲೂ ಖಾತರಿ ಯೋಜನೆ ಜಾರಿ ಮಾಡಿದರೆ ಅನುಕೂಲವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ಮನವಿ ಸಲ್ಲಿಸಲಾಯಿತು.ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾಧ್ಯಕ್ಷ ಎಂ. ಶಬ್ಬೀರ್ ಸಾಬ್, ರೇಣುಕ ಯಲ್ಲಮ್ಮ ಹಾವೇರಿ, ಸಿ. ಬಸವರಾಜ್, ಬಾಲಪ್ಪ, ಕಣಿವೆ ಮಾರಕ್ಕ, ನೀಲಮ್ಮ, ಶಹೀನಾ ಬೇಗಂ, ಸುಹೀಲ್ ಬಾಷಾ ಇತರರು ಇದ್ದರು.