Advertisement

ತನಿಖೆ ವಿಸ್ತರಿಸಿದರೆ ಮತ್ತಷ್ಟು ಅಕ್ರಮ ಬಯಲು: ಪ್ರಿಯಾಂಕ್‌

11:46 AM May 02, 2022 | Team Udayavani |

ಕಲಬುರಗಿ: ಪಿಎಸ್‌ಐ ಅಕ್ರಮ ಕಲಬುರಗಿಯಲ್ಲದೇ ಇತರೆಡೆಯೂ ನಡೆದಿದೆ ಎಂಬುದಾಗಿ ಮೊದಲಿನಿಂದಲೂ ಆರೋಪಿಸುತ್ತಾ ಬರಲಾಗಿದ್ದರೂ ಸರ್ಕಾರ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯತನದ ಪರಮಾವಧಿ ಆಗಿದೆ. ಅಲ್ಲದೇ ಪ್ರಕರಣದ ದಿಕ್ಕು ತಪ್ಪಿಸುವುದು ಹಾಗೂ ದಿಢೀರ್‌ನೇ ಮರು ಪರೀಕ್ಷೆ ಘೋಷಿಸುವ ಮುಖಾಂತರ ಪ್ರಕರಣ ಬೇಗ ಮುಗಿಸುವ ತಂತ್ರಗಾರಿಕೆ ಅಡಗಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಕುರಿತು ಬೆಳಗಾವಿಯಲ್ಲಿ ಎರಡು ಪ್ರಕರಣ ದಾಖಲಾಗಿದ್ದರ ಕುರಿತಾಗಿ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸಿಲ್ಲ. ಮುಖ್ಯವಾಗಿ ದೂರು ಬಂದಿರುವ ರಾಜ್ಯದ ಇತರೆಡೆಯೂ ತನಿಖೆ ಚುರುಕುಗೊಳಿಸಿ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ಕಿಂಗ್‌ಪಿನ್‌ಗಳು, ದೊಡ್ಡ-ದೊಡ್ಡ ಕುಳಗಳು ಹೊರ ಬರುತ್ತಾರೆ. ಆದರೆ ಸರ್ಕಾರಕ್ಕೆ ದೊಡ್ಡವರನ್ನು ಬಯಲಿಗೆ ತರುವ ಆಸಕ್ತಿ ಇರುವಂತೆ ಕಾಣುತ್ತಿಲ್ಲ ಎಂದರು.

ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಹಿಂದೆ ಕಳೆದ ಡಿಸೆಂಬರ್‌ದಲ್ಲಿ ನಡೆದ ಎಫ್ಡಿಸಿ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಕುರಿತಾಗಿ ದೂರು ಬಂದಿರುವುದನ್ನು ಜಿಲ್ಲಾಡಳಿತ ಈ ಹಿಂದೆ ಕೆಪಿಎಸ್ಸಿಗೆ ಪತ್ರ ಬರೆದಿರುವುದನ್ನು ಅವಲೋಕಿಸಿದರೆ ಇದರಲ್ಲೂ ಅಕ್ರಮ ನಡೆದಿದ್ದರಿಂದ ಜ್ಞಾನಜ್ಯೋತಿ ಕೇಂದ್ರದಲ್ಲಿ ನಡೆದಿರುವ ಎಲ್ಲ ಪರೀಕ್ಷೆಗಳ ಕುರಿತು ತನಿಖೆಯಾಗಬೇಕು. ಜತೆಗೆ ದಿವ್ಯಾ ಹಾಗರಗಿ ಬಂಧನ ದೊಡ್ಡ ಸಾಧನೆಯಲ್ಲ. ಇದರ ಹಿಂದೆ ಇನ್ನೂ ದೊಡ್ಡ ಕುಳಗಳಿವೆ. ಎಲ್ಲ ಕಡೆ ತನಿಖೆ ವಿಸ್ತಾರಗೊಳ್ಳಲಿ. ಬೆಂಗಳೂರಿನಲ್ಲೂ ಅಕ್ರಮ ನಡೆದಿರುವ ಕುರಿತಾಗಿ ಈ ಮೊದಲೇ ಆರೋಪಿಸಲಾಗಿತ್ತು. ಈಗ ದಾಳಿ ನಡೆಸಿ 12 ಜನರನ್ನು ಬಂಧಿಸಲಾಗಿದೆ ಎಂದರು.

ದೈಹಿಕ ಪರೀಕ್ಷೆಯನ್ನು ನಡೆಸಿ

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದಲ್ಲದೇ ದೈಹಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತಾಗಿ ಪ್ರಕರಣ ದಾಖಲಾಗಿದ್ದರಿಂದ ದೈಹಿಕ ಪರೀಕ್ಷೆಯನ್ನು ಮತ್ತೂಮ್ಮೆ ನಡೆಸುವಂತೆ ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

Advertisement

ಬೆಳಗಾವಿಯಲ್ಲಿ ದೈಹಿಕ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮಾಂತರ ಮತ್ತು ಮಾರ್ಕೆಟ್‌ ಠಾಣೆಯಲ್ಲಿ ಎರಡು ಕೇಸ್‌ಗಳು ದಾಖಲಾಗಿವೆ ಎಂದು ಅದರ ಎಫ್ಐಆರ್‌ ಪ್ರತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೈಹಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆ ಯಾವ ಹಂತದಲ್ಲಿದೆ ಎನ್ನುವುದನ್ನು ಸರ್ಕಾರ ಹೇಳಲಿ ಎಂದು ಒತ್ತಾಯಿಸಿದರು.

ಈಗ ನೇಮಕವಾಗಿರುವ 545 ಪಿಎಸ್‌ಐಗಳಲ್ಲಿ ಏಳೆಂಟು ಜನರು ಹಾಗೆ ಮಾಡಿರುವ ದೂರುಗಳಿವೆ. ಹೀಗಾಗಿ ಎಲ್ಲರನ್ನು ಮರು ದೈಹಿಕ ಪರೀಕ್ಷೆಗೆ ಒಳಪಡಿಸಬೇಕು. ಆಗ ಯಾರಾದರೂ ದೈಹಿಕ ಪರೀಕ್ಷೆಯಲ್ಲಿ ಪ್ರಭಾವ ಬಳಿಸಿಕೊಂಡು ಪಾಸಾಗಿದ್ದರೆ, ಅವರನ್ನು ಸಹ ಮರು ಪರೀಕ್ಷೆಯಿಂದ ದೂರವಿರಿಸಬೇಕು ಎಂದು ಆಗ್ರಹಿಸಿದರು.

ತನಿಖೆ ಇದುವರೆಗೂ ಕಲಬುರಗಿಯ ಜ್ಞಾನಜ್ಯೋತಿ ಕೇಂದ್ರವೊಂದಕ್ಕೆ ಸೀಮಿತವಾಗಿದೆ. ರಾಜ್ಯದ ಹಲವು ಕಡೆ ಈ ಅಕ್ರಮ ನಡೆದಿರುವಂತಿದೆ. ಸಿಐಡಿ ವರದಿ ಬರುವ ಮುನ್ನವೇ ಸರ್ಕಾರ ಪಿಎಸ್‌ಐ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ. ಆದರೆ, ಅದರಲ್ಲಿ ಸ್ಪಷ್ಟತೆ ಇಲ್ಲ. ಕೇವಲ ಲಿಖೀತ ಪರೀಕ್ಷೆ ನಡೆಸಲಾಗುತ್ತಿದೆಯೋ ಅಥವಾ ದೈಹಿಕ ಪರೀಕ್ಷೆ ಸಮೇತ ಮಾಡಲಾಗುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಕೆಪಿಸಿಸಿ ವಕ್ತಾರರಾಗಿರುವ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

ಕಲಬುರಗಿ ಜ್ಞಾನಜ್ಯೋತಿ ಕೇಂದ್ರದಲ್ಲಿ ಈ ಹಿಂದೆ ನಡೆದ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ಕುರಿತು ದೂರುಗಳು ಕೇಳಿ ಬಂದಿರುವುದರಿಂದ ಎಲ್ಲವು ತನಿಖೆಗೆ ಒಳಪಡಿಸಬೇಕು. ಇದರ ಹಿಂದೆ ಇನ್ನೂ ದೊಡ್ಡ ತಿಮಿಂಗಲಗಳಿವೆ ಎಂದು ಖರ್ಗೆ ಪುನರುಚ್ಚರಿಸಿದರು. ಮುಖಂಡರಾದ ಶಿವಾನಂದ ಪಾಟೀಲ ಮರತೂರ, ಡಾ| ಕಿರಣ ದೇಶಮುಖ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next