ಮುಂಬೈ: ಕೋವಿಡ್ -19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರ ಸರ್ಕಾರ 15 ದಿನಗಳ ಲಾಕ್ ಡೌನ್ ರೀತಿಯ ಕರ್ಫ್ಯೂ ಹೇರಿದೆ. ಇದರಿಂದಾಗಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಇತರ ರಾಜ್ಯಗಳ ಕಾರ್ಮಿಕರು ಊರು ಸೇರಲು ಹೊರಟಿದ್ದಾರೆ.
ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ಸೇರಿದಂತೆ ರೈಲು ನಿಲ್ದಾಣಗಳ ಮೂಲಕ ತಮ್ಮ ತವರಿಗೆ ಹೊರಡುತ್ತಿದ್ದಾರೆ.
ಸುದ್ದಿಸಂಸ್ಥೆ ಎಎನ್ ಐ ಜೊತೆಗೆ ಮಾತನಾಡಿದ ಉತ್ತರ ಪ್ರದೇಶದ ವಾರಣಾಸಿ ಮೂಲದ ಕಾರ್ಮಿಕ ಶಿವಂ ಪಾಂಡೆ, ಕಳೆದ ಬಾರಿಯ ಲಾಕ್ ಡೌನ್ ನಲ್ಲಿ ತುಂಬಾ ಸಂಕಷ್ಟ ಅನುಭವಿಸಿದ್ದೇವೆ. ಈ ಬಾರಿ ನಾವು ಇದಕ್ಕೆ ಸಿದ್ದರಿಲ್ಲ. ಹಾಗಾಗಿ ಬೇಗನೇ ಮನೆಗೆ ಹೊರಟಿದ್ದೇವೆ ಎಂದಿದ್ದಾರೆ.
“ಈಗ ಮತ್ತೆ ಕರ್ಫ್ಯೂ ಹಾಕಿದ್ದಾರೆ. ನಾವಿಲ್ಲಿದ್ದುಕೊಂಡು ಏನು ಮಾಡಲಿ. ಏನನ್ನು ತಿನ್ನಬೇಕು. ಕಳೆದ ವರ್ಷ ಅನುಭವಿಸಿದ ನೋವನ್ನು ಈ ಬಾರಿ ಅನುಭವಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ನಗರವನ್ನು ಬಿಟ್ಟು ತೆರಳುತ್ತಿದ್ದೇವೆ” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮೇ.1ರ ವರೆಗೆ ಕರ್ಫ್ಯೂ ಜಾರಿಗೊಳಿಸಿ ಮಂಗಳವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆದೇಶಿಸಿದ್ದರು.