ಹೊಸದಿಲ್ಲಿ:ಲೋಕಸಭಾ ಚುನಾವಣೆಗೂ ಮುನ್ನ ಭಾರೀ ಕುತೂಹಲ ಮೂಡಿಸಿರುವ ಪಂಚರಾಜ್ಯಗಳ ಚುನಾವಣೆ ತೆಲಂಗಾಣದಲ್ಲಿ ಗುರುವಾರ ಮತದಾನ ಮುಕ್ತಾಯವಾದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ. ಬಹುತೇಕ ಸಮೀಕ್ಷೆಗಳು ಜಿದ್ದಾಜಿದ್ದಿನ ಹೋರಾಟದ ಭವಿಷ್ಯ ನುಡಿದಿದ್ದು, 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ರೋಚಕ ಹಣಾಹಣಿಯ ಭವಿಷ್ಯ ನುಡಿದಿವೆ.
ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಮತ್ತು ಟಿವಿ9 ಭಾರತ್ ವರ್ಷ್ , ಜನ್ ಕಿ ಬಾತ್ ಸಮೀಕ್ಷೆಯು ರಾಜ್ಯದಲ್ಲಿ ಅತ್ಯಂತ ನಿಕಟ ಹೋರಾಟವನ್ನು ಊಹಿಸಿದ್ದು, ಕಾಂಗ್ರೆಸ್ 102-125 ಸ್ಥಾನಗಳನ್ನು ಮತ್ತು ಬಿಜೆಪಿ 100-123 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.
ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 118-130 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್‌ಗಿಂತ ಮುನ್ನಡೆ ಸಾಧಿಸಲಿದೆ. ಕಾಂಗ್ರೆಸ್ 97-107 ಸ್ಥಾನಗಳನ್ನು ಗೆಲ್ಲಬಹುದು, ಇತರ ಪಕ್ಷಗಳು 2 ಸ್ಥಾನಗಳನ್ನು ಪಡೆಯುತ್ತವೆ ಎಂದು ಹೇಳಿದೆ.
ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢದಲ್ಲಿ ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಕಾಂಗ್ರೆಸ್‌ಗೆ 40-50 ಮತ್ತು ಬಿಜೆಪಿಗೆ 36-46 ಸ್ಥಾನಗಳ ಭವಿಷ್ಯ ನುಡಿದಿದೆ. ಟಿವಿ5 ನ್ಯೂಸ್ ಎಕ್ಸಿಟ್ ಪೋಲ್ ಬಿಜೆಪಿಗೆ 29-39 ಮತ್ತು ಕಾಂಗ್ರೆಸ್‌ಗೆ 54-64 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೇರುವ ಭವಿಷ್ಯ ನುಡಿದಿದೆ. ಜನ್ ಕಿ ಬಾತ್ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ 42-53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ ಮತ್ತು ಬಿಜೆಪಿ 34-45 ಸ್ಥಾನಗಳನ್ನು ಗಳಿಸಲಿದೆ.
ಛತ್ತೀಸ್‌ಗಢ 90 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು ಬಹುಮತಕ್ಕೆ 46 ಸ್ಥಾನಗಳು. 200 ಸ್ಥಾನಗಳಿರುವ ರಾಜಸ್ಥಾನದಲ್ಲಿ ಬಹುಮತಕ್ಕೆ 101. ಮಧ್ಯಪ್ರದೇಶದಲ್ಲಿ ಬಹುಮತಕ್ಕೆ 116 ಸ್ಥಾನಗಳು ಮಿಜೋರಾಂನಲ್ಲಿ 21 ಮತ್ತು ತೆಲಂಗಾಣದಲ್ಲಿ ಬಹುಮತಕ್ಕೆ 60 ಸ್ಥಾನಗಳು ಗೆಲ್ಲಬೇಕಿದೆ.
ತೆಲಂಗಾಣದಲ್ಲಿ ತೆಲಂಗಾಣಕ್ಕೆ CNN ಎಕ್ಸಿಟ್ ಪೋಲ್ ಭವಿಷ್ಯ ಕಾಂಗ್ರೆಸ್ 56 ಸ್ಥಾನ ಗೆದ್ದು ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿದೆ. ಆಡಳಿತಾರೂಢ ಬಿಆರ್ ಎಸ್ 48, ಬಿಜೆಪಿ 10 ಮತ್ತು ಓವೈಸಿ ಅವರ AIMIM 5 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ಜನ್ ಕಿ ಬಾತ್ ಸಮೀಕ್ಷೆಯು ರಾಜಸ್ಥಾನದಲ್ಲಿ ಬಿಜೆಪಿಗೆ ಗೆಲುವಿನ ಮುನ್ಸೂಚನೆ ನೀಡಿದೆ, ಪಕ್ಷ 100-122 ಸ್ಥಾನಗಳಲ್ಲಿ ಜಯಗಳಿಸಲಿದೆ ಮತ್ತು ಆಡಳಿತಾರೂಢ ಕಾಂಗ್ರೆಸ್ 62-85 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
ಟಿವಿ9 ಭಾರತ್ ವರ್ಷ್ ಎಕ್ಸಿಟ್ ಪೋಲ್ ಬಿಜೆಪಿಗೆ ಇದೇ ರೀತಿಯ ಭವಿಷ್ಯ ನುಡಿದಿದ್ದು 110-110 ಸ್ಥಾನಗಳಲ್ಲಿ ಗೆಲ್ಲುತ್ತದೆ, ಕಾಂಗ್ರೆಸ್ 90-100 ಸ್ಥಾನಗಳನ್ನು ಗಳಿಸಬಹುದು, ಬಿಜೆಪಿಯೊಂದಿಗೆ ನಿಕಟ ಹೋರಾಟವನ್ನು ಮಾಡುತ್ತದೆ ಎಂದು ಹೇಳಿದೆ.