ಕಾಸರಗೋಡು: ಮಜೀರ್ಪಳ್ಳ ಬದಿಯೂರು ನಿವಾಸಿ ಮುಹಮ್ಮದ್ ಅವರ ಪುತ್ರ ಅಶ್ರಫ್ (44) ಸಾವಿನಲ್ಲಿ ಸಂಶಯವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ದಫನಗೈದ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲು ಆರ್.ಡಿ.ಒ. ಅನುಮತಿ ನೀಡಿದ್ದು, ಅದರಂತೆ ಪರೀಕ್ಷೆ ನಡೆಸಲು ಮಂಜೇಶ್ವರ ಸಿ.ಐ ಕೆ.ರಾಜೀವ್ ನೇತೃತ್ವದಲ್ಲಿ ಪೊಲೀಸರು ಕ್ರಮ ಆರಂಭಿಸಿದ್ದಾರೆ.
ಮೃತದೇಹ ದಫನಗೈದ ಕನ್ಯಾನದ ಮಸೀದಿ ಪರಿಸರಕ್ಕೆ ಪೊಲೀಸರು ಹಾಗೂ ಸಂಬಂಧಿಕರು ತೆರಳಿದ್ದಾರೆ.
ಅಶ್ರಫ್ ಮೇ 6ರಂದು ಬೆಳಗ್ಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 5ರಂದು ರಾತ್ರಿ ಮನೆಯಲ್ಲಿ ನಿದ್ರಿಸಿದ್ದ ಅವರು ಮರುದಿನ ಬೆಳಗ್ಗೆ ಎದ್ದಿರಲಿಲ್ಲ. ಮನೆಯವರು ಪರಿಶೀಲಿಸಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿದ್ದರು. ಬಳಿಕ ಮೃತದೇಹವನ್ನು ಕನ್ಯಾನದ ರಹ್ಮಾನಿಯ ಜುಮಾ ಮಸೀದಿಯ ಬಳಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.
ಮೃತರ ಸಹೋದರ, ಕನ್ಯಾನ ಮರಾಟಿಮೂಲೆಯಲ್ಲಿರುವ ಇಬ್ರಾಹಿಂ ಅವರು ಸಾವಿನಲ್ಲಿ ನಿಗೂಢತೆಗಳಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.