Advertisement
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡ ಹೋಬಳಿಯ ಕುಟುಂಬಗಳು ಎಕ್ಸಿಬಿಷನ್ ವೃತ್ತಿ ನಡೆಸುತ್ತಿದ್ದು ಪ್ರತೀವರ್ಷ ಊರಿನಿಂದ ಊರಿಗೆ ಜಾತ್ರೆಗಳಿಗೆ ತೆರಳಿ ತೊಟ್ಟಿಲು, ಜಾಯಿಂಟ್‌ವೀಲ್ ಸೇರಿದಂತೆ ಹತ್ತಾರು ಆಟೋಟ ಪರಿಕರಗಳನ್ನು ಅಳವಡಿಸಿ ಆದಾಯ ಗಳಿಸುತ್ತಾರೆ. ಕಳೆದ ವರ್ಷ ಲಾಕ್‌ಡ್‌ನ… ಪರಿಣಾಮ ಸಮಾರಂಭಗಳು ನಡೆಯದೆ ಆದಾಯವೇ ಇಲ್ಲದಂತಾಗಿತ್ತು. ಈ ವರ್ಷ ಗಂಗೊಳ್ಳಿ, ಮಂಗಳೂರಿನ ಎರಡು ಕಡೆಗಳಲ್ಲಿ ಪ್ರದರ್ಶನ ಏರ್ಪಡಿಸಿ ಅಲ್ಲಿಂದ ಪುತ್ತೂರು ಜಾತ್ರೆಗೆ ಬಂದಿದ್ದರು. ಇಲ್ಲಿ ಐದು ದಿವಸ ಎಕ್ಸಿಬಿಷನ್ ನಡೆಸುವ ಲೆಕ್ಕ ಚಾರದಲ್ಲಿದ್ದರೂ ಕೋವಿಡ್ ಮುನ್ನೆ ಚ್ಚರಿಕೆ ಕಾರಣದಿಂದ ಅವಕಾಶ ಸಿಕ್ಕಿ ರಲಿಲ್ಲ. ಅದಾಗ್ಯೂ ಎ. 17ರಂದು ಬ್ರಹ್ಮ ರಥೋತ್ಸವದಂದು ಪ್ರದರ್ಶನ ಏರ್ಪಡಿ ಸಿದ್ದರು. ಎ. 19ರಂದು ಸಂತೆ ಸಹಿತ ಎಲ್ಲ ಬಗೆಯ ವ್ಯವಹಾರಗಳನ್ನು ನಿಲ್ಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತು. ಬಳಿಕ ಲಾಕ್‌ಡೌನ್ ಮಾದರಿಯ ಕರ್ಫ್ಯೂ ಜಾರಿಯಾಗಿ ಈ ಕುಟುಂಬಗಳು ಜಾತ್ರೆ ಗದ್ದೆಯಲ್ಲೇ ಉಳಿದಿದೆ. ಅತ್ತ ಮನೆಗೆ ತೆರಳಲಾಗದೆ, ಇತ್ತ ಆದಾಯವು ಇಲ್ಲದೆ ಜೋಪಡಿಯಲ್ಲೇ ಕಾಲ ಕಳೆಯುವಂತ ಸ್ಥಿತಿ ಉಂಟಾಗಿದೆ.
Related Articles
Advertisement
ಜಾತ್ರೆಯಿಂದ ಜಾತ್ರೆಗೆ ಸಂಚರಿಸಿ ಪ್ರದರ್ಶನ ಏರ್ಪಡಿಸುವುದೇ ನಮ್ಮ ಕಾಯಕ. ಊರಿಗೆ ಹೋದರೂ ಬದುಕಲು ಬೇಕಾದ ವ್ಯವಸ್ಥೆ ಅಲ್ಲಿಲ್ಲ. ಎಕ್ಸಿಬಿಷನ್ ಸಾಮಗ್ರಿಗಳನ್ನು ಕೊಂಡುಹೋಗಲು ಕೆಲವು ಲಾರಿಗಳು ಬೇಕು. ಸಾವಿರಾರು ರೂ.ಬಾಡಿಗೆ ನೀಡಬೇಕು. ಅಷ್ಟು ದುಡ್ಡು ಇಲ್ಲ. ಒಂದು ಕಡೆ ಪ್ರದರ್ಶನ ಏರ್ಪಡಿಸಲು 1 ಲಕ್ಷ ರೂ. ಖರ್ಚು ತಗಲುತ್ತದೆ. ಈ ಬಾರಿ ಒಂದು ದಿನಕ್ಕೆ ಮಾತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಬಾಡಿಗೆ ಮೊತ್ತವು ಬಂದಿಲ್ಲ. ಇನ್ನು ಇಲ್ಲಿಂದ ಇದನ್ನು ಊರಿಗೆ ಕೊಂಡು ಹೋದರೂ ಅಲ್ಲಿ ಸಾಮಗ್ರಿ ಹಾಕಲು ಜಾಗ ಇಲ್ಲ. ಇನ್ನೊಂದು ಜಾತ್ರೆ ಬರುವ ತನಕ ನಮ್ಮದು ಇದೇ ಪಾಡು ಎಂದು ಅಳಲು ತೋಡಿಕೊಂಡರು ಎಕ್ಸಿಬಿಷನ್ ಮಾಲಕ ಜಗನ್ನಾಥ.
ಆಹಾರ ವ್ಯವಸ್ಥೆ ಮಾಡಿ :
ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಜಾಗ, ನೀರಿನ ಲಭ್ಯತೆ ಇದೆ. ಹಾಗಾಗಿ ಉಳಿದುಕೊಳ್ಳಲು ಸಮಸ್ಯೆ ಆಗಿಲ್ಲ. ಆದರೆ ನಮಗೆ ನಿತ್ಯ ಆಹಾರದ ವ್ಯವಸ್ಥೆಯ ಚಿಂತೆ ಉಂಟಾಗಿದೆ. ಮಕ್ಕಳು, ಗರ್ಭಿಣಿ ಇದ್ದು ದಿನಸಿ ಸಾಮಗ್ರಿಕೊಂಡು ತರುವಷ್ಟು ಆರ್ಥಿಕ ಶಕ್ತಿ ಇಲ್ಲ. ಈ ಬಗ್ಗೆ ಪುತ್ತೂರಿನ ಅಧಿಕಾರಿಗಳು, ಸಂಘ ಸಂಸ್ಥೆಗಳು ನೆರವು ನೀಡಿದರೆ ಜೀವನ ಸಾಗಿಸಬಹುದು ಎನ್ನುತ್ತಾರೆ ಅಕ್ಕುಬಾಯಿ ಹನಗೋಡ.
ಆಡಳಿತ ಗಮನ ಹರಿಸಬೇಕಿದೆ : ಕೆಲವು ದಿನಗಳಿಂದ ಅಕಾಲಿಕವಾಗಿ ಮಳೆಯಾಗುತ್ತಿದ್ದು ಜೋಪಡಿಯಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುಟುಂಬಗಳ ಆರೋಗ್ಯದ ಬಗ್ಗೆಯು ನಿಗಾ ಇರಿಸಬೇಕಿದೆ. ಪುಟ್ಟ ಮಕ್ಕಳು, ಗರ್ಭಿಣಿ, ವಯಸ್ಸಾದವರು ಇದ್ದು ಹೀಗಾಗಿ ಮುನ್ನೆಚ್ಚೆರಿಕೆ ವಹಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ತತ್‌ಕ್ಷಣ ಗಮನ ಹರಿಸಬೇಕಿದೆ.
-ಕಿರಣ್ ಪ್ರಸಾದ್ ಕುಂಡಡ್ಕ