Advertisement

ಅಪೂರ್ವ ನಾಲ್ಕು ಪೌರಾಣಿಕ ಪ್ರಸಂಗಗಳ ಪ್ರದರ್ಶನ

06:30 PM Jan 10, 2020 | mahesh |

ಸಾಲಿಗ್ರಾಮದಲ್ಲಿ ನಡೆದ ಹನುಮಗಿರಿ ಮೇಳದ ಪೌರಾಣಿಕ ಆಖ್ಯಾನ ಸೀತಾಪಹಾರ, ಚೂಡಾಮಣಿ, ಇಂದ್ರಜಿತು, ಮಹಿರಾವಣ ಕಾಳಗ ಪ್ರಸಂಗಗಳಿಗೆ ಸೇರಿದ್ದ ಅಪಾರ ಜನಸ್ತೋಮ ಪ್ರದರ್ಶನದ ಯಶಸ್ಸನ್ನು ಸಾಕ್ಷೀಕರಿಸಿತು.

Advertisement

ಚಿನ್ಮಯ ಕಲ್ಲಡ್ಕ ಭಾಗವತಿಕೆ, ಪಿ.ಟಿ. ಜಯರಾಮ ಭಟ್‌ ಮದ್ದಳೆ, ಪದ್ಯಾಣ ಶಂಕರನಾರಾಯಣ ಭಟ್‌ ಚೆಂಡೆಯಲ್ಲಿ ಸೀತಾಪಹಾರ ಪ್ರಸಂಗ ಪ್ರದರ್ಶನ ನಡೆಯಿತು. ರಾವಣನಾಗಿ ಶಿವರಾಮ ಜೋಗಿ, ಮಾರೀಚನಾಗಿ ಜಯಾನಂದ ಸಂಪಾಜೆ, ಶ್ರೀರಾಮನಾಗಿ ಪೆರ್ಲ ಜಗನ್ನಾಥ ಶೆಟ್ಟಿ, ಸೀತೆಯಾಗಿ ಸಂತೋಷ್‌ ಹಿಲಿಯಾಣ, ಲಕ್ಷ್ಮಣನಾಗಿ ಪ್ರಸಾದ್‌ ಸವಣೂರು, ರಾವಣ ಸನ್ಯಾಸಿಯಾಗಿ ಸೀತಾರಾಮ್‌ ಕುಮಾರ್‌, ಜಟಾಯುವಾಗಿ ಸದಾಶಿವ ಕುಲಾಲ್‌ ವೇಣೂರು ಅಭಿನಯಿಸಿದ್ದರು. ರಾವಣನಿಗೆ ಬುದ್ಧಿ ಹೇಳುವ ಸನ್ನಿವೇಶದಲ್ಲಿ ಮಾರೀಚ, ಇದು ನೈಜ ಮೃಗವಲ್ಲ ರಾಕ್ಷಸರ ಕಪಟ, ಜಿಂಕೆಗೆ ಗೊರಸುಗಳಿರುತ್ತವೆ ಬೆರಳುಗಳಿರುವುದಿಲ್ಲ ಎಂದು ಸೀತೆಗೆ ವಿವರಿಸುವ ರಾಮನ ಸಂಭಾಷಣೆ, ತಾನೇ ಹೋಗಿ ಜಿಂಕೆಯನ್ನು ಹಿಡಿದು ತರುತ್ತೇನೆ ಎನ್ನುವ ಲಕ್ಷ್ಮಣನಿಗೆ ಒಂದೊಮ್ಮೆ ಜಿಂಕೆಯನ್ನು ಜೀವಂತ ಹಿಡಿದು ತರಲಾಗದಿದ್ದರೆ ಜಿಂಕೆಯ ಚರ್ಮದಿಂದ ಕಂಚುಕವನ್ನು ಮಾಡಿ ಧರಿಸುತ್ತೇನೆ ಎಂದು ಸೀತೆ ಹೇಳಿದ್ದಾಳೆ. ಪತಿವ್ರತೆಗೆ ಕಂಚುಕವನ್ನು ಪತಿಯ ಹೊರತಾಗಿ ಇತರರು ಕೊಡಿಸಕೂಡದು ಎಂಬ ಮಾತುಗಳನ್ನಾಡುವ ಮೂಲಕ ತಾನೇ ಮಾಯಾ ಜಿಂಕೆಯ ಬೇಟೆಗೆ ಹೊರಡುವ ರಾಮನಾಗಿ ಪೆರ್ಲರದ್ದು ಅರ್ಥಗರ್ಭಿತವಾದ ಮಾತುಗಳು. ಚಿನ್ಮಯ ಕಲ್ಲಡ್ಕರ “ಇವನ ಕೈಯಲಿ ಸಾಯುವುದರಿಂದ ರಾಘವನ ಬಾಣದಿ ಮಡಿದೆನಾದರೆ ದಿವಿಜ ಲೋಕವನ್ನು ಪಾಲಿಸುವ ಶ್ರೀರಾಮ ತನಗೆಂದ…’ ಎಂಬ ಹಿಂದೋಳದ ಭಾಮಿನಿ ಸುಶ್ರಾವ್ಯವಾಗಿತ್ತು. ರಾವಣ ಜಟಾಯು ಜಟಾಪಟಿ ನಡೆದು ಜಟಾಯು ರಾಮನಿಗೆ ಸೀತಾಪಹಾರ ಮಾಡಿದ್ದು ರಾವಣ ಎಂದು ಸಮಾಚಾರ ತಿಳಿಸುವಲ್ಲಿಗೆ ಸೀತಾಪಹಾರವನ್ನು ಮುಗಿಸಿ ಎರಡನೆ ಪ್ರಸಂಗ ಆರಂಭಿಸಲಾಯಿತು.

ಚೂಡಾಮಣಿಯಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್‌, ಮದ್ದಳೆಯಲ್ಲಿ ಶ್ರೀಧರ ವಿಟ್ಲ, ಚೆಂಡೆಯಲ್ಲಿ ಚೈತನ್ಯಕೃಷ್ಣ ಪದ್ಯಾಣ ಅವರು ಅಚ್ಚುಕಟ್ಟಾಗಿ ಪ್ರಸಂಗವನ್ನು ನಡೆಸಿದರು. ಶೃಂಗಾರ ರಾವಣನಾಗಿ ಶಿವರಾಮ ಜೋಗಿ, ಹನೂಮಂತನಾಗಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ, ಸೀತೆಯಾಗಿ ಎಂ.ಕೆ. ರಮೇಶ ಆಚಾರ್ಯ, ದೂತನಾಗಿ ಬಂಟ್ವಾಳ ಜಯರಾಮ ಆಚಾರ್ಯ, ಅನುಕೂಲ ನಾರಿಯರಾಗಿ ಪ್ರಜ್ವಲ್‌ ಕುಮಾರ್‌ ಗುರುವಾಯನಕೆರೆ, ಪ್ರಕಾಶ್‌ ನಾಯಕ್‌ ಅಭಿನಯಿಸಿದರು. ಯಾವುದೇ ಶಿರೋಭೂಷಣ ಆಭರಣಗಳಿಲ್ಲದೇ ಅಶೋಕವನದಲ್ಲಿ ಶೋಕತಪ್ತಳಾಗಿ ಇರುವ ಸೀತೆಯಾಗಿ ರಮೇಶ ಆಚಾರ್ಯರ ಮಾತುಗಾರಿಕೆ, ಅಭಿನಯ ಜತೆಗೆ ಹನೂಮಂತನಾಗಿ ಪೆರ್ಮುದೆಯವರ ಜೋಡಿ ಕಾಲಮಿತಿಯ ಪ್ರಸಂಗದ ಚುರುಕುನಡೆಗೆ ಮತ್ತಷ್ಟು ಪುಷ್ಟಿಯೊದಗಿಸಿತು. ಕ್ಷೇಮವೇನೈ ಹನುಮ ಎಂಬ ಪದ್ಯಾಣರ ಸುಶ್ರಾವ್ಯ ಭಾವಗತಿಕೆ ಅದಕ್ಕೆ ಪೂರಕವಾಗಿ ರಮೇಶ ಆಚಾರ್ಯರ ಭಾವಪೂರ್ಣ ಮಾತುಗಾರಿಕೆ, ಚಿತ್ರಕೂಟದಲ್ಲಿ ನೀವು ಜಲಕ್ರೀಡೆಯಾಗುವಾಗ ಎಂಬ ಚಂದದ ಪದ್ಯಕ್ಕೆ ಪೆರ್ಮುದೆಯವರು ಸಂಭಾಷಣೆ ಮಾಡಿದ್ದು ಒಂದು ಆಪ್ತ ಸನ್ನಿವೇಶದ ಸೃಷ್ಟಿಗೆ ಕಾರಣವಾಯಿತು.

ಇಂದ್ರಜಿತು ಪ್ರಸಂಗದಿಂದ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆಯವರು ಮುನ್ನಡೆಸಿದರು. ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಅವರ ಕೈಚಳಕವಿತ್ತು. ಜಗದಭಿರಾಮ ಪಡುಬಿದ್ರೆ ಇಂದ್ರಜಿತುವಾಗಿ, ಹನೂಮಂತನಾಗಿ ಪೆರ್ಮುದೆ, ರಾಮನಾಗಿ ಪೆರ್ಲ, ಮಾಯಾಸೀತೆಯಾಗಿ ಪ್ರಕಾಶ್‌ ನಾಯಕ್‌, ಜಾಂಬವಂತನಾಗಿ ಸೀತಾರಾಮ ಕುಮಾರ್‌ ಕಟೀಲ್‌, ಲಕ್ಷ್ಮಣನಾಗಿ ದಿವಾಕರ ಸಂಪಾಜೆ , ವಿಭೀಷಣನಾಗಿ ಜಯಕೀರ್ತಿ ಅವರು ಪ್ರದರ್ಶನದ ಓಘವನ್ನು ಕಾಯ್ದುಕೊಂಡರು. ಮಹಿರಾವಣ ಕಾಳಗದಲ್ಲಿ ರಾವಣನಾಗಿ ಸದಾಶಿವ ಶೆಟ್ಟಿಗಾರ್‌ ಸಿದ್ಧಕಟ್ಟೆ, ಮಹಿರಾವಣನಾಗಿ ಶಬರೀಶ ಮಾನ್ಯ ರಂಗವನ್ನು ತುಂಬಿದರು. ದುರ್ದುಂಡಿಯಾಗಿ ರಕ್ಷಿತ್‌ ಶೆಟ್ಟಿ , ಮತ್ಸವಾನರನಾಗಿ ಶಿವರಾಜ್‌ ಬಜಕೋಡ್ಲು, ದೂತನಾಗಿ ಜಯರಾಮ ಆಚಾರ್ಯ, ಜಾಂಬವನಾಗಿ ಸೀತಾರಾಮ್‌, ಹನೂಮಂತನಾಗಿ ಸುಬ್ರಾಯ ಹೊಳ್ಳ ಅವರ ಅಭಿನಯ ಉತ್ಕೃಷ್ಟವಾಗಿತ್ತು. ಪದ್ಯಾಣಶೈಲಿ, ಅಗರಿಶೈಲಿ, ಬಲಿಪಶೈಲಿ ಎಂದು ಯಕ್ಷಗಾನದ ವಿವಿಧ ಮಟ್ಟುಗಳ ಜತೆಗೆ ಸ್ವಂತ ಶೈಲಿಯ ಹಾಡುಗಳನ್ನು ಹಾಡಿ ಹೊಸತನದಲ್ಲಿ ಭಾಗವತರಾಗಿ ರಂಜಿಸಿದವರು ಕನ್ನಡಿಕಟ್ಟೆಯವರು. ಇಂದ್ರಜಿತುವಿನಲ್ಲಿ “ನೋಡಿದೆಯಯ್ಯೋ ಹನುಮ ದಾನವ ನಿನಗೆ ಮಾಡುವ ಸಾಕ್ಷಿಯ ನಿಸ್ಸೀಮ’ ಮೊದಲಾದ ಹಾಡುಗಳನ್ನು ಭಾವಪೂರ್ಣವಾಗಿ ಹಾಡಿದರು.

ಲಕ್ಷ್ಮೀ ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next