Advertisement
“ಇವರಿಗೆ ಬುದ್ಧಿ ಬರುವುದು ಯಾವಾಗ. ಎಷ್ಟು ಸಲ ಹೇಳಿದ್ದೇನೆ. ಆಚೆ ಹೋಗುವಾಗ ಫ್ಯಾನ್ ಸ್ವಿಚ್ ಆರಿಸಿ ಹೋಗಬಾರದೆ? ಇದೊಂದು ರಾಷ್ಟ್ರೀಯ ಸಂಪತ್ತಿನ ದುಂದುವೆಚ್ಚವಲ್ಲವೆ?” ಎಂದೆಲ್ಲ ಗೊಣಗಿಕೊಳ್ಳುತ್ತ ಅಮ್ಮ ಟಿ.ವಿ., ಫ್ಯಾನ್ ಸ್ವಿಚ್‌ಗಳನ್ನೆಲ್ಲ ಆರಿಸುತ್ತ ಬರುತ್ತಾಳೆ. “ಕರೆಂಟ್ ಬಿಲ್ ಯಾಕೆ ಈ ಬಾರಿ ಜಾಸ್ತಿ ಬಂತು ಎಂದು ನನ್ನನ್ನು ಕೇಳುವವರಿಗೆ ತಾವು ಮಾಡುವ ಈ ಬಗೆಯ ದುಂದುಗಾರಿಕೆ ಅರ್ಥವೇ ಆಗುವುದಿಲ್ಲವೇಕೆ”
Related Articles
Advertisement
ಒಂದು ಕಾಲದ ಪುರುಷ ಪ್ರಧಾನ ಸಮಾಜ ಕೂಡ ಗೃಹಸ್ಥನ ಸಮಸ್ತ ನಡವಳಿಕೆ, ಆಗುಹೋಗುಗಳ ಸ್ಫೂರ್ತಿಯ ಮೂಲ “ಗೃಹಿಣಿ’ ಎಂಬುದನ್ನು ಒಪ್ಪಿಕೊಂಡಿತ್ತು. ಈ ನಿಟ್ಟಿನಲ್ಲಿ ಗೃಹಿಣಿಯನ್ನು ಗೌರವಿಸುವುದರ ಜೊತೆಗೆ ಹೆಚ್ಚಿನ ಜವಾಬ್ದಾರಿಯನ್ನು ಆಕೆಯ ಮೇಲೆ ಹೊರಿಸಲಾಗಿತ್ತು. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎನ್ನುವ ಲೋಕೋಕ್ತಿ ಕೂಡ ಮನೆಯೊಡತಿ ಮನೆಯೊಡೆಯನ ಮಾತ್ರವಲ್ಲ ಇಡೀ ಮನೆಯ “ಕೀಲಿಕೈ’ ಆಗಿರುತ್ತಾಳೆ ಎನ್ನುವುದನ್ನು ಶ್ರುತಪಡಿಸುತ್ತದೆ.
ಕ್ಷಮಯಾ ಧರಿತ್ರಿಸಾಂಪ್ರದಾಯಿಕ ವಿವಾಹ ಸಮಾರಂಭದಲ್ಲಿ, ವಿವಾಹಿತ ಗೃಹಿಣಿಯ ನಡೆನುಡಿ ಹೇಗಿರಬೇಕು ಎಂಬುದನ್ನು ಪುರೋಹಿತರು ತುಸು ಹೆಚ್ಚೇ ಉಪದೇಶ ನೀಡುತ್ತಾರೆ. ಪತಿಯ ಸಕಲ ಕಾರ್ಯಗಳಲ್ಲೂ ಸಹಕರಿಸುವವಳೇ ಸಹಧರ್ಮಿಣಿ. ಕಾಯೇìಷು ದಾಸಿ, ಕರಣೇಷು ಮಂತ್ರಿ, ಕ್ಷಮಯಾ ಧರಿತ್ರಿ ಎಂಬೆಲ್ಲ ವಿಶೇಷ ಜವಾಬ್ದಾರಿಗಳನ್ನು ವಧುವಿಗೆ ಪರಿಚಯಿಸುತ್ತಾರೆ. ಇಷ್ಟೆಲ್ಲ ಕರ್ತವ್ಯಗಳು ಗೃಹಿಣಿಗಿರುವಾಗ, ಗೃಹಸ್ಥನಿಗೂ ಇರಲಿ ಎಂದು ಧರ್ಮೇಚ ಅರ್ಥೇಚ, ಕಾಮೇಚ ನಾತಿಚರಾಮಿ ಎಂದು ಹೇಳಿಸುತ್ತಾರೆ. ಇವೆಲ್ಲ ಗೃಹಿಣಿ ಗೃಹಸ್ಥನಿಂದ ಸಮಾಜ ಬಯಸುವ ಆದರ್ಶ ಸದಾಶಯಗಳು ಎನ್ನಬಹುದು. ಆದರೆ ಕ್ಷಮಯಾ ಧರಿತ್ರಿಯಂತಹ ಉಪದೇಶಗಳೆಲ್ಲ ಒಂದು ಮಿತಿಯಲ್ಲಿದ್ದರೆ ಸರಿ. ತನ್ನನ್ನೇ ಮೆಟ್ಟಿನಿಂತು ಕಡಿದು ಕೊಚ್ಚಿ ಹಿಂಸಿಸುವಾಗ ಭೂಮಾತೆಯೇ ಸಹಿಸಿಕೊಳ್ಳಲಾಗದೆ ಸ್ಫೋಟಗೊಳ್ಳುತ್ತಾಳೆ. ಇನ್ನು ಹೆಣ್ಣು ಮಾತ್ರ ತನ್ನ ಮೇಲೆ ಎಷ್ಟೇ ದೌರ್ಜನ್ಯವೆಸಗಿದರೂ ಕ್ಷಮಯಾ ಧರಿತ್ರಿಯಾಗಿರಬೇಕು ಎನ್ನುವುದು ಯಾವ ನ್ಯಾಯ. ಹೆಣ್ಣಾಗಿ, ಗೃಹಿಣಿಯಾಗಿ ಕ್ಷಮೆಗೂ ಒಂದು ಮಿತಿಯಿರುತ್ತದೆ. ಮಿತಿಮೀರಿದರೆ ಮಿಂಚೂ ಸಿಡಿಲಾಗಿ ಅಪ್ಪಳಿಸುತ್ತದೆ. ಬದಲಾದ ಕಾಲಗತಿಯಲ್ಲೂ ಗೃಹಿಣಿಗೆ ಕೆಲವು ಮೂಲಭೂತ ಜವಾಬ್ದಾರಿಗಳು ರಕ್ತಗತವಾಗಿಯೇ ಮೈಗೂಡಿದೆಯೇನೊ ಎನಿಸುತ್ತದೆ. ಮನೆಗಿಂತ ಅತ್ಯಂತ ಹೆಚ್ಚು ಸಾರ್ವಜನಿಕ ಸಂಪರ್ಕದಲ್ಲಿರುವ ಗೃಹಸ್ಥ ಹಲವಾರು ಸಮಸ್ಯೆ, ಗೊಂದಲ, ಅನಿರೀಕ್ಷಿತ ವಿಪತ್ತುಗಳನ್ನೆಲ್ಲ ತನ್ನದೇ ಕಾರಣದಿಂದಲೊ, ಅಥವಾ ಇನ್ನೊಬ್ಬರ ಕಾರಣದಿಂದಲೊ ಎದುರಿಸುತ್ತಲೇ ಇರಬೇಕಾದ ಪರಿಸ್ಥಿತಿ ಆಗಾಗ ಒದಗಿ ಬರಬಹುದು. ಖರ್ಚು ನಿಭಾಯಿಸಲಾಗದೆ ಸಾಲ ಮಾಡಬೇಕಾಗಿಯೂ ಬರಬಹುದು. ಅಂತಹ ಸಂದರ್ಭದಲ್ಲಿ ಸರಿ ಯಾವುದು ತಪ್ಪು ಯಾವುದು ಗೊತ್ತಾಗದೆ ಆತ ಪ್ರಶ್ನೆಗಳ ಸುಳಿಯಲ್ಲಿ ಚಡಪಡಿಸುತ್ತಾನೆ. ಆಗ ಆತನ ಸರಿತಪ್ಪುಗಳನ್ನು ವಿಶ್ಲೇಷಿಸಿ ಹೇಗೆ ಮುಂದುವರಿಯಬೇಕು, ಹೇಗೆ ಸಮಸ್ಯೆಗಳನ್ನು ಹೆಚ್ಚಿನ ಬದ್ಧತೆಯಿಂದ ಪರಿಹರಿಸಿಕೊಳ್ಳಬಹುದು ಎಂಬ ರಕ್ಷಣಾತ್ಮಕ ಸಲಹೆ ನೀಡಿ ಗೃಹಿಣಿ ಎಷ್ಟೋ ಸಂದರ್ಭದಲ್ಲಿ ಆತನನ್ನು ಆ ಕ್ಷಣದ ಸಂಕಷ್ಟದಿಂದ ಪಾರು ಮಾಡುತ್ತಾಳೆ. ಇಂತಹ ಉತ್ತಮ ಸಲಹೆ, ಮಾರ್ಗದರ್ಶನ ನೀಡುವ ಸಾಮರ್ಥ್ಯ ಆಕೆಗೆ ಇರವುದನ್ನು ನಮ್ಮ ವೈದಿಕ ಸಮಾಜ ಕೂಡ ಗುರುತಿಸಿತ್ತು. ಅದಕ್ಕೆ ಕರಣೇಷು ಮಂತ್ರಿ ಎಂಬ ಉಪದೇಶದ ಮೂಲಕ ಆಕೆಯ ಮುಂದಿಡುವ ಆರ್ತ ಕೋರಿಕೆಯೇ ಸಾಕ್ಷಿ. ಮನೆಯಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಗೃಹಿಣಿಯ ಕಾರ್ಯಗತಿ ಗಡಿಯಾರದ ಮುಳ್ಳಿನಂತೆ. ನೀರಲ್ಲಿ ಎಡೆಬಿಡದೆ ಸದಾ ಚಲಿಸುವ ಮೀನಿನಂತೆ. ಅಮೃತ ಬಿಂದುವಾಗಿ ಉದ್ಯಾನವನದಲ್ಲೆಲ್ಲ ಪರದಾಡುವ ಜೇನಿನಂತೆ. ಹಾಗಾಗಿ, ಮನೆಯೆಂಬ ಬಂಧಿತ ಉಸಿರಿನ ಬೀಗಮುದ್ರೆಯಲ್ಲಿ ಗೃಹಿಣಿಯೆಂಬ ಪ್ರೀತಿ, ಕಾಳಜಿಯ ಕೈ ಸಂಚಾರವಾದರೆ ಮಾತ್ರ ಕ್ರಿಯಾ ಶೀಲವಾದ, ಹೃದಯಸ್ಪರ್ಶಿ ಗೃಹಲೋಕ ತಾನಾಗಿ ತೆರೆದುಕೊಳ್ಳುತ್ತದೆ. -ವಿಜಯಲಕ್ಷ್ಮಿ ಶ್ಯಾನ್‌ಭೋಗ್