Advertisement

Exclusive: ಇತಿಹಾಸ ಕೇವಲ ರಾಜರ ಕಥೆಯಲ್ಲ, ಅದು ನಮ್ಮ ಜೀವನಶೈಲಿ: ಧರ್ಮೇಂದ್ರ ಕುಮಾರ್

06:01 PM Sep 26, 2024 | ಕೀರ್ತನ್ ಶೆಟ್ಟಿ ಬೋಳ |

“ನಮಸ್ಕಾರ ಸ್ನೇಹಿತರೇ…” ಎನ್ನುತ್ತಲೇ ಮರೆತುಹೋದ ಇತಿಹಾಸವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಹೇಳುವವರು ಧರ್ಮೇಂದ್ರ ಕುಮಾರ್ ಅರೇನಹಳ್ಳಿ. ಸಾಮಾಜಿಕ ಜಾಲತಾಣದಲ್ಲಿ ಇತರ ರೀಲ್ಸ್-‌ ವಿಡಿಯೋಗಳ ಮಧ್ಯೆ ಇತಿಹಾಸವನ್ನು ಜನಪ್ರಿಯಗೊಳಿಸಿದ ಮೇಷ್ಟ್ರು ಇವರು. ಅಂದಹಾಗೆ ಇವರು ವೃತ್ತಿಯಲ್ಲಿ ಮೇಷ್ಟ್ರಲ್ಲ. ಶೈಕ್ಷಣಿಕವಾಗಿ ಇತಿಹಾಸದಲ್ಲಿ ಪದವಿ ಪಡೆದವರಲ್ಲ. ಸಿವಿಲ್‌ ಇಂಜಿನಿಯರ್‌ ಆಗಿದ್ದು ಸುಮಾರು 20 ವರ್ಷಗಳ ಕಾಲ ಮಧ್ಯ ಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡಿದವರು ಧರ್ಮೇಂದ್ರ ಅವರು.

Advertisement

“ಮೈಸೂರಿನ ಕಥೆಗಳು” ಪೇಜ್‌ ಮೂಲಕ ಗತಕಾಲದ ಕಥೆಗಳನ್ನು ಎಳೆ ಎಳೆಯಾಗಿ ಹೇಳುವ ಧರ್ಮೇಂದ್ರ ಕುಮಾರ್‌ ಅವರು ಇತ್ತೀಚೆಗೆ ಉದಯವಾಣಿ ಡಾಟ್‌ ಕಾಮ್‌ ಗೆ ಮಾತಿಗೆ ಸಿಕ್ಕಿದ್ದರು. ಈ ವೇಳೆ ಇತಿಹಾಸದೆಡೆ ಅವರ ಸೆಳೆತ, ಪಠ್ಯಕ್ರಮದಲ್ಲಿ ಇತಿಹಾಸ, ಸಾಮಾಜಿಕ ಜಾಲತಾಣ… ಹೀಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.

ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ಸಂದರ್ಶನ ಇಲ್ಲಿದೆ.

ನೀವು ವೃತ್ತಿಯಲ್ಲಿ ಇಂಜಿನಿಯರ್‌, ಆದರೆ ಇತಿಹಾಸದ ಸೆಳೆತ ಹೇಗೆ?

ಅದಕ್ಕೆ ಕೆಲವು ಕಾರಣಗಳಿವೆ. ಪ್ರಮುಖವಾಗಿ ನಾನು ಮೈಸೂರಿನವನು. ಆ ಸಮಯದಲ್ಲಿ ಮೈಸೂರಿನಲ್ಲಿ ಹುಟ್ಟಿದವರಿಗೆ ಅರಮನೆಯ ನಿಕಟ ಸಂಪರ್ಕ ಇರುತ್ತದೆ. ನಮಗೆ ಸಿಕ್ಕಿದ ಅವಕಾಶ. ಪ್ರತಿ ಬೀದಿಯಲ್ಲಿ ಒಬ್ಬನಾದರೂ ಅರಮನೆಗೆ ಹೋಗಿ ಕೆಲಸ ಮಾಡುತ್ತಿರುತ್ತಾನೆ. ಆಗ ಭದ್ರತೆ, ಪೊಲೀಸ್‌ ಇರಲಿಲ್ಲ. ಹಾಗಾಗಿ ಅರಮನೆಯಲ್ಲಿ ಹತ್ತಿರದಿಂದ ಕಾಣುವ ಅವಕಾಶ ನಮಗಿತ್ತು. ಹೀಗಾಗಿ ಅರಮನೆ ನಮ್ಮನೆ ಎಂಬಂತಹ ಭಾವನೆ ಇತ್ತು. ನಾನು ಹೇಳುವ ಕಥೆಗಳು ನನ್ನ ವಯಸ್ಸಿನ ಎಲ್ಲಾ ಮೈಸೂರಿನವರಿಗೆ ಗೊತ್ತಿರುವಂತದ್ದೆ. ಆದರೆ ಈಗಿನವರಿಗೆ ಗೊತ್ತಿಲ್ಲ.

Advertisement

ಮತ್ತೊಂದು ಈ ಪರಿಸರ ಬೆಳೆದಂತೆ ಪರಿಸರಕ್ಕೆ ನಾವು ಏನು ಹಿಂದೆ ಕೊಡುತ್ತೇವೆ, ಯಾವ ರೀತಿ ಕೊಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಅವರವರಿಗೆ ತೋಚಿದ ರೀತಿಯಲ್ಲಿ ಅವರವರು ವಾಪಾಸು ಕೊಡುವ ಪ್ರಯತ್ನ ಮಾಡುತ್ತಾರೆ. ಇದು ನನಗೆ ತೋಚಿದ ರೀತಿ. ಹಲವು ರೀತಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಹಲವು ದೇವಸ್ಥಾನಗಳು, ಕಲ್ಯಾಣಿಗಳನ್ನು ಪುನರ್ ನವೀಕರಣ ಮಾಡಿದ್ದೇವೆ.

ಮೈಸೂರಿ ಕಥೆಗಳ ಜತೆ ಬೇರೆ ಊರಿನ ಕಥೆಗಳನ್ನೂ ಹೇಳುತ್ತೀರಲ್ಲ ಅದರ ಅಧ್ಯಯನ ಹೇಗೆ?

ಇದೆಲ್ಲಾ ನಾವು ಪ್ರಯತ್ನಪೂರ್ವಕವಾಗಿ ಮಾಡುವುದಲ್ಲ. ಅದಾಗಿಯೇ ಕರೆದುಕೊಂಡು ಹೋಗುತ್ತದೆ. ನೀವು ಕಲ್ಯಾಣಿಯೊಳಗೆ ಮೊದಲ ಮೂರು ಹೆಜ್ಜೆ ಇಳಿದರೆ ಮುಂದಿನ ಹೆಜ್ಜೆಗೆ ನಿಮ್ಮನ್ನು ಅದೇ ಕರೆದುಕೊಂಡು ಹೋಗುತ್ತದೆ. ಅದು ಆಕರ್ಷಣೆ. ಹೀಗಾಗಿ ವಿಚಾರದ ಒಳಗೆ ಹೋದಂತೆ ಬೇರೆ ಬೇರೆ ಆಯಾಮಗಳು ತಿಳಿಯುತ್ತದೆ. ಹಲವು ವಿಚಾರಗಳು ನಮಗೆ ಅರಿವಿಲ್ಲದಂತೆ ಕಲಿಯುತ್ತಾ ಹೋಗುತ್ತೇವೆ. ನಾವು ಯಾವುದನ್ನು ಓದಬೇಕು ಎನ್ನುವುದನ್ನು ಅದೇ ಸೂಚಿಸುತ್ತದೆ. ಮುಖ್ಯವಾಗಿ ನೀವು ಇದನ್ನು ಪ್ರೀತಿಸಬೇಕು. ತುಂಬಾ ಅಧ್ಯಯನ ಮಾಡುತ್ತೇನೆ, ಬೆಳಗ್ಗೆ ಎದ್ದು ಓದುತ್ತೇನೆ ಎಂದರೆ ಆಗುವುದಿಲ್ಲ. ಅದನ್ನು ಪ್ರೀತಿಸಬೇಕು. ಆಗ ಸಾಧ್ಯ.

ಸಾಮಾಜಿಕ ಜಾಲತಾಣಕ್ಕೆ ಹೇಗೆ ತೆರೆದುಕೊಂಡಿರಿ?

ನಮ್ಮ ಕಾಲಕ್ಕೆ ಸಾಮಾಜಿಕ ಜಾಲತಾಣ ಇರಲಿಲ್ಲ. ಆಗ ನಾನು ಎರಡು ಪುಸ್ತಕ ಬರೆದಿದ್ದೆ. ಆದರೆ ಪುಸ್ತಕಗಳ ಮೂಲಕ ಹತ್ತಿಪ್ಪತ್ತು ಪರ್ಸೆಂಟ್‌ ಜನರನ್ನು ನೀವು ತಲುಪಬಹುದು. ಹೀಗಾಗಿ ಹೆಚ್ಚಿನ ಜನರಿಗೆ ತಿಳಿಯಲಿ ಎಂಬ ಕಾರಣಕ್ಕೆ ಸೋಶಿಯಲ್‌ ಮೀಡಿಯಾಕ್ಕೆ ಬಂದೆ. 2018ರಲ್ಲಿ ಆರಂಭಿಸಿದ್ದೆ. ಮೊದಲ ವಿಡಿಯೋದಿಂದಲೇ ಅದ್ಭುತ ಪ್ರತಿಕ್ರಿಯೆ ಬಂತು.

ಸೋಶಿಯಲ್‌ ಮೀಡಿಯಾದಲ್ಲಿ ಎಲ್ಲಾ ಕಕ್ಕುವವರ ಮಧ್ಯೆ ಇತಿಹಾಸದ ಕಥೆಗಳನ್ನು ಹೇಳುವ ಪ್ರಯತ್ನದಲ್ಲಿ ನಿಮಗೆ ಆರಂಭದಲ್ಲಿ ಭಯವಿತ್ತಾ?

ಇದು ಎಂಟರ್ಟೈನ್ ಮೆಂಟ್‌ ರೀಲ್ಸ್‌ ಗಳನ್ನು ನೋಡುವ ವರ್ಗದ ಜನರಿಗಲ್ಲ. ಇದು ಯಾರಿಗೆ ಇಷ್ಟವಿದೆಯೋ ಅವರಿಗೆ. ಆದರೆ ಒಮ್ಮೆ ಇದರ ಸೆಳೆತಕ್ಕೆ ಸಿಕ್ಕಿದವರು ಮತ್ತೆ ಹೊರಬರಲ್ಲ. ನೀವು ಮಾಹಿತಿ ನೀಡುತ್ತಾ ಇರಬೇಕು. ಯಾರೋ ಒಬ್ಬ ಕೇಳಿಸಿದವನು ಮತ್ತೊಬ್ಬನಿಗೆ ಹೇಳುತ್ತಾನೆ. ಹೀಗೆ ಮುಂದುವರಿಯುತ್ತದೆ. ಇದರಿಂದ ಸಮಾಜಕ್ಕೆ ಏನಾದರೂ ಒಂದು ಮಾಹಿತಿ ಸಿಗುತ್ತದೆ.

ನಿಮ್ಮ ವಿಡಿಯೋಗಳಿಗೆ – ಮಾಹಿತಿಗಳಿಗೆ ಆಕ್ಷೇಪ ಬಂದಿದೆಯೇ?

ತುಂಬಾ ಬರುತ್ತದೆ. ಮೊದಲನೆಯದಾಗಿ ನಾನು ಯಾವುದೇ ಫೇಸ್‌ ಬುಕ್ ಕಾಮೆಂಟ್ಸ್‌ ಗಳಿಗೆ ಉತ್ತರಿಸುವುದಿಲ್ಲ. ಯಾಕೆಂದರೆ ಕಾಮೆಂಟ್‌ ಮಾಡುವವರಿಗೆ ಬೇರೆ ಅಜೆಂಡಾ ಸೇರಿ ಹಲವು ಹಿನ್ನೆಲೆ ಇರಬಹುದು. ಆದರೆ ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸುವವರು ನೇರವಾಗಿ ಬರುತ್ತಾರೆ. ಅವರಿಗೆ ಉತ್ತರ ನೀಡುತ್ತೇನೆ. ಕಾಮೆಂಟ್‌ ಬೇರೆ, ಚರ್ಚೆ ಬೇರೆ. ನಾನು ಹೇಳುವ ಪ್ರತಿ ವಿಚಾರದಲ್ಲೂ ಚರ್ಚೆಗೆ ನಾನು ಸಿದ್ದ. ಚರ್ಚೆಗೆ ಸಿದ್ದವಿರದೆ ಇರುವುದನ್ನು ನಾನು ಹೇಳುವುದೇ ಇಲ್ಲ.

ಪಠ್ಯಕ್ರಮದಲ್ಲಿ ಪರಿಣಾಮಕಾರಿ ಇತಿಹಾಸ ಅಳವಡಿಕೆ ಹೇಗೆ?

ಆರಂಭಿಕ ಹಂತದಲ್ಲಿ ಇತಿಹಾಸವನ್ನು ಪಠ್ಯದಲ್ಲಿ ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ಆಯ್ಕೆ ಕೊಡುವ (ಪಿಯು) ಸಂದರ್ಭದಲ್ಲಿ ಇಡಬಾರದು. ಇತಿಹಾಸ ಕಲಿತವರಿಗೆ ಕೆಲಸ ಸಿಗುವಂತಹ ಅವಕಾಶವನ್ನು ಸರ್ಕಾರ ಸೃಷ್ಟಿಸಬೇಕು. ಇತಿಹಾಸ ಓದುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದಾದರೆ ಯಾಕೆ ಓದುತ್ತಾರೆ. ಹೀಗಾಗಿ ಸರ್ಕಾರ ಇದರ ಬಗ್ಗೆ ಕೆಲಸ ಮಾಡಬೇಕು.

ಎಐ (AI) ಕಾಲದಲ್ಲಿ ಇತಿಹಾಸ ಪ್ರಸ್ತುತ ಹೇಗೆ?

ಹೇಗೆ ಪ್ರಸ್ತುತ ಎನ್ನುವುದನ್ನು ಮಕ್ಕಳಿಗೆ ಮನದಟ್ಟು ಮಾಡುವ ಕೆಲಸ ಆಗಬೇಕು. ಇತಿಹಾಸ ಎನ್ನುವುದು ಕೇವಲ ರಾಜ ಮಹಾರಾಜರ ಕಥೆಗಳಲ್ಲ. ನಮ್ಮ ತಾತ ಹೇಗೆ ಬದುಕಿದ್ದ ಎನ್ನುವುದು ಕೂಡಾ ಇತಿಹಾಸ. ನಮ್ಮ ಮನೆಯವರು ಹೇಗೆ ಬದುಕಿದ್ದರು ಎನ್ನುವ ಬಗ್ಗೆ ಗೊತ್ತಿದ್ದರೆ ನಮಗೆ ಬದುಕುವ ರೀತಿ ಕಲಿಯಬಹುದು. ಇದು ಜೀವನಶೈಲಿ. ನಮ್ಮ ಹಿಸ್ಟರಿ ನಮಗೆ ಗೊತ್ತಿಲ್ಲದಿದ್ದರೆ ನಾವು ಅಕ್ಕಪಕ್ಕದ ಬೇರೆಯವರನ್ನು ನೋಡಿ ಕಲಿಯಲು ಮುಂದಾಗುತ್ತೇವೆ. ಅದಕ್ಕೆ ನಮಗೆ ನಮ್ಮ ಇತಿಹಾಸ ಗೊತ್ತಿರಬೇಕು. ನಮ್ಮ ಉಡುಗೆ ತೊಡುಗೆ, ಆಹಾರ ಪದ್ದತಿ ಕೂಡಾ ಇತಿಹಾಸ. ಇತಿಹಾಸ ಎಂದರೆ ನಾವು ಬದುಕುವ ಶೈಲಿ. ಅದನ್ನೇ ನಾನು ಈಗ ವಿಡಿಯೋಗಳ ಮೂಲಕ ಮನದಟ್ಟು ಮಾಡುತ್ತಿದ್ದೇನೆ.

ನಮ್ಮ ಇತಿಹಾಸ ತಿಳಿದುಕೊಂಡರೆ ನಮಗೆ ನಮ್ಮ ಬಗ್ಗೆ ಹೆಮ್ಮೆ ಇರುತ್ತದೆ. ಇಲ್ಲದಿದ್ದರೆ ಬೇರೆ ಕಡೆ ವಾಲುತ್ತೇವೆ. ನಮ್ಮ ಹಿಸ್ಟರಿ ಬಗ್ಗೆ ಹೆಮ್ಮೆ ಇರದ ಕಾರಣ ಬೇರೆ ವಿಚಾರಗಳು ನಮಗೆ ಚಂದ ಕಾಣುತ್ತದೆ.

ಅಧಿಕಾರದಲ್ಲಿ ಪಕ್ಷಗಳು ಬದಲಾದ ಹಾಗೆ ಪಠ್ಯ ಕ್ರಮದಲ್ಲಿ ಇತಿಹಾಸ ಬದಲು ಮಾಡುತ್ತಿರುತ್ತಾರೆ. ಹಾಗಾದರೆ ನಿಜವಾದ ಇತಿಹಾಸ ಯಾವುದು?

ಇದು ಯಾವುದೂ ನಿಜವಾದ ಇತಿಹಾಸವಲ್ಲ. ನಿಜವಾದ ಇತಿಹಾಸ ಬೇರೆಯದೇ ಇದೆ. ಈ ತಿರುಚಿದ ಇತಿಹಾಸ ಜಾಸ್ತಿ ದಿನ ಬರುವುದಿಲ್ಲ. ನಿಜವಾಗಿರುವುದು ಮಾತ್ರ ಉಳಿದುಕೊಳ್ಳುತ್ತದೆ.

ಮಾನವನ ಬದುಕನ್ನು ಮೂರು ಜನ ನಿರ್ಧಾರ ಮಾಡುತ್ತಾರೆ. ಒಂದು ಸರ್ಕಾರ; ಅದು ಒಂದು ಸಿಲೆಬಸ್‌ ಮಾಡುತ್ತದೆ. ಅದರಲ್ಲಿ ಮಕ್ಕಳು ಓದುತ್ತಾರೆ. ಮತ್ತೊಂದು ಸಾಹಿತಿಗಳು ಬರೆಯುತ್ತಾರೆ. ಅದನ್ನು ಓದಿ ತಿಳಿದುಕೊಳ್ಳಬೇಕು. ಉಳಿದಿದ್ದು ಚಿತ್ರ ಸಾಹಿತಿಗಳು – ನಿರ್ದೇಶಕರು. ಸಿನಿಮಾ ಮೂಲಕ ಒಂದಷ್ಟು ಇತಿಹಾಸ ತಿಳಿಯಬಹುದು. ಮೂರು ಸೇರಿ ಸಮಾಜ ತಿದ್ದುವ ಕೆಲಸ ಮಾಡಬೇಕು. ಈಗ ಅದೆಲ್ಲಾ ಕಮರ್ಷಿಯಲ್‌ ಆಗಿ, ದುಡ್ಡಿನ ಹಿಂದೆ ಹೋಗಿ ಯಾವುದೇ ಗುರಿ ಇಲ್ಲದೆ, ಎಲ್ಲವೂ ಜಾಳು ಜಾಳಾಗಿದೆ. ಜಾತಿಯಲ್ಲಿ ಒಡೆದು ಹೋಗಿದೆ. ಆದರೆ ಮೂಲ ಎಲ್ಲೋ ಒಂದು ಉಳಿದುಕೊಂಡಿರುತ್ತದೆ. ಅದನ್ನು ಗ್ರಹಿಸಿದವರು ಉಳಿದವರಿಗೆ ಹಂಚಬೇಕು.

ಸಂದರ್ಶನ: ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next