ಬೆಂಗಳೂರು: ಕರಾವಳಿ ಭಾಗಕ್ಕೆ ಮರಳು ನೀತಿಯಲ್ಲಿ ಕೆಲವು ವಿನಾಯಿತಿ ಅಗತ್ಯವಿದ್ದು, ಕೆಂಪು ಕಲ್ಲು ಬಳಕೆಗೆ ವಿಧಿಸುತ್ತಿರುವ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಬಿಜೆಪಿಯ ಶಾಸಕ ಡಾ| ಭರತ್ ಶೆಟ್ಟಿ ಮನವಿ ಮಾಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ಕರಾವಳಿ ಭಾಗದಲ್ಲಿ ಎರಡು ಜಲಾಶಯಗಳಿದ್ದು, ಹೂಳು ತೆಗೆದು ಮರಳು ಪಡೆಯಲು ಅನುಮತಿ ನೀಡಲಾಗಿದೆ. ಆದರೆ ಡ್ರಿಜ್ಜಿಂಗ್ ಯಂತ್ರ ಬಳಕೆಯಿಂದ ತೀವ್ರ ತೊಂದರೆಯಾಗುತ್ತಿದ್ದು, ಈ ಯಂತ್ರ ಬಳಸದಂತೆ ಸೂಚಿಸಬೇಕು.
ಗಣಿ ಸಚಿವ ಹಾಲಪ್ಪ ಆಚಾರ್ ಉತ್ತರಿಸಿ. ಹೊಸ ಮರಳು ನೀತಿ- 2020, ಮರಳು ಗಣಿಗಾರಿಕೆ ಸಂಬಂಧ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತರಲು ಕರಡು ನಿಯಮ ಸಚಿವ ಸಂಪುಟ ಸಭೆ ಮುಂದೆ ಮಂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಕರಾವಳಿ ಜಿಲ್ಲೆಗಳಲ್ಲಿ ನೂತನ ಕಲ್ಲು ನೀತಿ ಜಾರಿಗೊಳಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ. ಹೊಸ ಮರಳು ನೀತಿ ಸಂಬಂಧ ಒಂದೂವರೆ ತಿಂಗಳಲ್ಲಿ ಎಲ್ಲ ವಿಚಾರಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ :
ಸುರತ್ಕಲ್ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ ಎಂದು ಡಾ| ಭರತ್ ಶೆಟ್ಟಿ ಆಗ್ರಹಿಸಿದ್ದಾರೆ. ಈಗಿರುವ 25ರಲ್ಲಿ 13 ಹುದ್ದೆಗಳು ಖಾಲಿ ಇದ್ದು, ಇದನ್ನು ಭರ್ತಿ ಮಾvಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್ ಕಮ್ಯೂನಿಟಿ ಹೆಲ್ತ್ ಸೆಂಟರ್ ಆಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.