ನವಲಗುಂದ: ಶ್ರೀ ಅಜಾತ ನಾಗಲಿಂಗ ಸ್ವಾಮಿಗಳು ಪವಾಡ ಪುರುಷರಾಗಿದ್ದು ಅವರು ಮಾಡಿದ ಹಲವಾರು ಲೀಲೆಗಳು ಭಕ್ತರು ಮನದಲ್ಲಿ ಇನ್ನೂ ಬೇರೂರಿವೆ. ಶ್ರೀ ಅಜಾತ ನಾಗಲಿಂಗ ಸ್ವಾಮಿಗಳು ಸಂಚರಿಸುತ್ತ ನವಲಗುಂದಕ್ಕೆ ಆಗಮಿಸಿದಾಗ ಅಜ್ಜನವರು ಇಲ್ಲಿಯ ಮೌನೇಶ ಗುಡಿಯಲ್ಲಿ ಜ್ವರಪೀಡಿತರಾಗಿ ಮಲಗಿದಾಗ ಆರೈಕೆ ಮಾಡಲು ಬಂದ ಸಮಗಾರ ಭೀಮವ್ವನ ಎದೆ ಹಾಲನ್ನು ಕುಡಿದು ಮಹಿಮೆ ಮೆರೆದರು.
ಭೀಮವ್ವನ ಭಕ್ತಿಯನ್ನು ಪರೀಕ್ಷಿಸಲು ಭೀಮವ್ವನಿಗೆ ಬೆತ್ತಲೆಯಾಗಿ ಪೇಟೆಗೆ ಹೋಗಿ ಹಣ್ಣು-ಹಂಬಲ ತರಲು ಆಜ್ಞಾಪಿಸಿದರು. ಪರಮ ಭಕ್ತೆ ಭೀಮವ್ವ ನಾಗಲಿಂಗ ಸ್ವಾಮಿಗಳ ಹೇಳಿದಂತೆ ಪೇಟೆಗೆ ಬೆತ್ತಲೆಯಾಗಿಯೇ ಹೋದಳು ಆದರೆ ನೋಡುವವರ ಕಣ್ಣಿಗೆ ಮಾತ್ರ ಆಕೆ ಜರ್ದಾರಿ ಪೀತಾಂಬರ ಧರಿಸಿದಂತೆ ಕಂಡು ಬಂದದ್ದು ಪವಾಡ.
ಬ್ರಿಟಿಷರ ಕಾಲದಲ್ಲಿ ತಮ್ಮ ಧರ್ಮ ಗ್ರಂಥ ಬೈಬಲ್ ಪ್ರಚಾರಕ್ಕೆ ಗ್ರಾಮದೇವತೆ ಪೂಜಾರಿ ಮುಷ್ಟಿಗಿರಿ ಕಾಳಪ್ಪನಿಗೆ ನೀಡಿದ್ದರು. ಗುಡಿಯಲ್ಲಿ ಬೈಬಲ್ ಓದುತ್ತಿದ್ದಾಗ ನಾಗಲಿಂಗ ಸ್ವಾಮಿಗಳು ಆಗಮಿಸಿದರು. ಇದನ್ನು ನೋಡಿ ನಾಗಲಿಂಗ ಅಜ್ಜ ಬೈಯುತ್ತಾರೆಂದು ಬೈಬಲ್ ಅನ್ನು ಮುಚ್ಚಿಟ್ಟಿದ್ದರು. ಆದರೆ ನಾಗಲಿಂಗ ಅಜ್ಜನವರು ಪೂಜಾರಿ ತೆಗೆದಿಟ್ಟಿರುವ ಬೈಬಲ್ ತರಿಸಿ ಅದಕ್ಕೆ ಹಾರಿ ಮೂಲಕ ರಂಧ್ರ ಹಾಕಿ ಆ ರಂಧ್ರ ಮುಚ್ಚಿದಾಗ ಮತ್ತೆ ನಾನು ಭೂಮಿ ಮೇಲೆ ಆವತರಿಸುವೆ ಎಂದು ಹೇಳಿದ್ದರು. ಇವತ್ತಿಗೂ ಆ ಬೈಬಲ್ ನವಲಗುಂದ ಶ್ರೀ ಮಠದಲ್ಲಿ ಗದ್ದುಗೆ ಪೂಜೆಯ ಮೊದಲು ನೋಡಲು ಲಭ್ಯವಿದೆ. ರಂಧ್ರ ಚಿಕ್ಕದಾಗುತ್ತಾ ಬರುತ್ತಿರುವುದು ಪವಾಡವೇ ಆಗಿದೆ.
ಹೊಸಳ್ಳಿ ಬೂದಿ ಸ್ವಾಮಿಗಳು, ಗರಗದ ಮಡಿವಾಳಜ್ಜನವರು, ಹುಬ್ಬಳ್ಳಿಯ ಸಿದ್ದಾರೂಢರು, ಶಿಶುನಾಳ ಶರೀಫ ಸಾಹೇಬರು ಮೊದಲಾದ ಶರಣರು ಹಾಗೂ ಸಂತ ಮಹಾಂತರೊಡಗೂಡಿ ಸಾಕಷ್ಟು ಪವಾಡಗಳನ್ನು ಮಾಡಿರುವುದು ಇತಿಹಾಸದಲ್ಲಿ ಕೇಳಿ ಬರುತ್ತವೆ. ಇಂಥ ಹಲವಾರು ಲೀಲೆಗಳನ್ನು ಮಾಡಿದ ಶ್ರೀ ನಾಗಲಿಂಗ ಅಜ್ಜನವರು 1881ರಲ್ಲಿ ಜೀವಂತ ಸಮಾಧಿ ಹೊಂದಿದರು. ಅಂದಿನಿಂದ ಇಂದಿನವರೆಗೂ ಶ್ರೀ ನಾಗಲಿಂಗ ಅಜ್ಜನವರ ಪುಣ್ಯಸ್ಥಳಕ್ಕೆ ರಾಜ್ಯ-ಹೊರರಾಜ್ಯದಿಂದಲೂ ಭಕ್ತರು ಆಗಮಿಸಿ ದರ್ಶನ ಪಡೆದು ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳುವುದು ವಿಶೇಷ.
ಅಂತಹ ಮಹಾಮಹಿಮನ ಆರಾಧನಾ ಮಹೋತ್ಸವ ಲಕ್ಷಾಂತರ ಜನರಿಗೆ ಭಕ್ತಿ-ಶ್ರದ್ಧೆಗಳ ಸಮ್ಮೇಳನವಾಗಿದೆ. ಶ್ರೀಗಳ ಸಂಕಲ್ಪದಂತೆ ಇಂದಿನ ಪೀಠಾಧಿಪತಿ ಶ್ರೀ ವೀರಯ್ನಾ ಸ್ವಾಮೀಜಿ ಹಿಂದಿನ ಪರಂಪರೆಯನ್ನು ಪರಿಪಾಲಿಸುತ್ತ ಬಂದಿದ್ದಾರೆ. 141ನೇ ಆರಾಧನಾ ಮಹೋತ್ಸವದಲ್ಲಿ ನಾಗಲಿಂಗ ಅಜ್ಜನ ಮಾದಲಿ ಪೂಜೆ, ಪಲ್ಲಕ್ಕಿ-ಮೇಣಿ ಮಹೋತ್ಸವ ಎರಡು ದಿನ ವಿಜೃಂಭಣೆಯಿಂದ ಜರುಗಲಿದೆ.
ಜು. 3ರಂದು ಮಧ್ಯಾಹ್ನ 3 ಗಂಟೆಗೆ ಮಜಾರ ಪೂಜೆ, ಮಹಾಪ್ರಸಾದ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ನಾಗಲಿಂಗ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಗುವುದು. ಜು.4ರಂದು ಬೆಳಗ್ಗೆ 10 ಗಂಟೆಗೆ ಸಂಗೀತ ಸಭೆ, ಸಂಜೆ ನಾಗಲಿಂಗ ಅಜ್ಜನ ಪಲ್ಲಕ್ಕಿ, ಮೇಣೆ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.
*ಪುಂಡಲೀಕ ಮುಧೋಳೆ