Advertisement

ವಿಸ್ಮಿತ, ವಿಕಾಸ, ವಿನೋದ, ವಿಶಿಷ್ಟ, ವಿಖ್ಯಾತ ಗೋಷ್ಠಿ

09:31 PM Sep 24, 2019 | Lakshmi GovindaRaju |

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಈ ಬಾರಿಯೂ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗುತ್ತಿದ್ದು, ಪಂಚ ಕವಿಗೋಷ್ಠಿ ಎಂಬ ಉಪಶೀರ್ಷಿಕೆಯಡಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.

Advertisement

ಮುಡಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ 2019ರ ದಸರಾ ಕವಿಗೋಷ್ಠಿಯ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗದ ಜನರು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು, ಈ ವರ್ಷ ಕವಿಗೋಷ್ಠಿಯನ್ನು ವಿಭಿನ್ನವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಪಂಚ ಕವಿಗೋಷ್ಠಿ ಉಪಶೀರ್ಷಿಕೆಯಡಿ ನಡೆಯುವ ಕಾರ್ಯಕ್ರಮದಲ್ಲಿ ವಿಸ್ಮಿತ, ವಿಕಾಸ, ವಿನೋದ, ವಿಶಿಷ್ಟ ಹಾಗೂ ವಿಖ್ಯಾತ ಕವಿಗೋಷ್ಠಿಗಳು ನಡೆಯಲಿವೆ. ಕವಿಗೋಷ್ಠಿಯು ಅ.2ರಿಂದ 06ರವರೆಗೆ ನಗರದ ಜಗನ್ಮೋಹನ ಅರಮನೆಯಲ್ಲಿ ಪ್ರತಿದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಈ ಬಾರಿಯ ಕವಿಗೋಷ್ಠಿಯಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದ್ದು, 5 ವಿಷಯಗಳಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಈ 5 ವಿಷಯಗಳು ವರ್ತಮಾನವನ್ನು ಕಟ್ಟಿಕೊಡಲಿವೆ. ಜೊತೆಗೆ ಕವಿಗೋಷ್ಠಿಯಲ್ಲಿ ಪತ್ರಕರ್ತರಿಗೂ ಕವಿತೆ ವಾಚಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ದಸರಾ ಉಪವಿಶೇಷಾಧಿಕಾರಿ ಬಿ. ಮಂಜುನಾಥ್‌ ಮಾತನಾಡಿ, ಅ.2ರಂದು ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕವಿ ಡಾ.ದೊಡ್ಡರಂಗೇಗೌಡ ಅವರು ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉಪಸ್ಥಿತಿ ಇರಲಿದ್ದು, ಶಾಸಕ ಎಲ್‌. ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಇದಕ್ಕೂ ಮುನ್ನಾ ಗೀತಾಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

Advertisement

5.5 ಲಕ್ಷ ರೂ.ಕವಿ ಸಂಭಾವನೆ: ದಸರಾ ಕವಿಗೋಷ್ಠಿ ಆಯೋಜನೆಗೆ 16 ಲಕ್ಷ ರೂ. ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. 5.5 ಲಕ್ಷ ರೂ. ಕವಿಗಳ ಗೌರವ ಸಂಭಾವನೆಗೆ ಬೇಕಾಗಿದೆ. ಉಜ್ಜೀವನ್‌ ಬ್ಯಾಂಕ್‌, ಇಸ್ಕಾನ್‌ ಮೈಸೂರು ಸಹಕಾರ ನೀಡಿದ್ದಾರೆ. ಜಿಲ್ಲಾ ಪ್ರಕಾಶಕರ ಸಂಘ ಕವಿಗೋಷ್ಠಿ ಸ್ಮರಣಾ ಸಂಚಿಕೆ ತರಲು 1 ಲಕ್ಷ ರೂ. ನೀಡಿದೆ. ಸಂಚಿಕೆ ತರಲು ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ದಸರಾ ಕವಿಗೋಷ್ಠಿ ಉಪಸಮಿತಿ ಕಾರ್ಯಾಧ್ಯಕ್ಷೆ ಡಾ.ಎನ್‌.ಕೆ. ಲೋಲಾಕ್ಷಿ, ಕಾರ್ಯದರ್ಶಿ ಸಿ.ಆರ್‌. ಕೃಷ್ಣಮೂರ್ತಿ, ಅಧ್ಯಕ್ಷ ಎಂ.ಆರ್‌. ಬಾಲಕೃಷ್ಣ, ಉಪಾಧ್ಯಕ್ಷೆ ಚಿಕ್ಕಮ್ಮ ಬಸವರಾಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಸ್ಮಿತ ಕವಿಗೋಷ್ಠಿ: ಪಂಚಕವಿಗೋಷ್ಠಿ ಬಗ್ಗೆ ಮಾಹಿತಿ ನೀಡಿದ ದಸರಾ ಕವಿಗೋಷ್ಠಿ ಕಾರ್ಯಾಧ್ಯಕ್ಷೆ ಡಾ.ಎನ್‌.ಕೆ.ಲೋಲಾಕ್ಷಿ, ಅ.2ರಂದು 11.30ಕ್ಕೆ ವಿಸ್ಮಿತ ಕವಿಗೋಷ್ಠಿ ಆರಂಭವಾಗಲಿದ್ದು, ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್‌, ಪೊಲೀಸರು, ಪತ್ರಕರ್ತರು, ವಕೀಲರು, ಕಲಾವಿದರು, ಐಟಿಬಿಟಿ ಉದ್ಯೋಗಿಗಳು ಹವ್ಯಾಸಿಗಳು ಕವನ ವಾಚಿಸಲಿದ್ದಾರೆ ಎಂದು ತಿಳಿಸಿದರು.

ವಿಕಾಸ ಕವಿಗೋಷ್ಠಿ: ಅ.3ರಂದು ಹಾಸನ, ಮಂಡ್ಯ, ಮಡಿಕೇರಿ, ಚಾಮರಾಜನಗರ ಜಿಲ್ಲೆಗಳ ಪ್ರತಿಭಾವಂತ ಮಕ್ಕಳು, ಮಹಿಳೆಯರು, ಯುವಕ ಹಾಗೂ ಯುವತಿಯರು ಕವನ ಓದಲಿದ್ದಾರೆ. ಗೀತ ರಚನಕಾರ ಕವಿತಾರಾಜ್‌, ಕವಿ ಡಾ.ಹೇಮಾ ಪಟ್ಟಣಶೆಟ್ಟಿ, ಸಾಹಿತಿ ಪ್ರೊ.ಪ್ರಧಾನ ಗುರುದತ್‌ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ವಿನೋದ ಕವಿಗೋಷ್ಠಿ: ಹನಿಗವನಗಳು ಮತ್ತು ಚಟುಕಗಳ ಮೂಲಕ ಕಾವ್ಯ ರಸಾಯನ ಮತ್ತು ವಿನೋದ ಗೀತ ಗಾಯನ ನಡೆಯಲಿದೆ. ಪ್ರಸಿದ್ಧ 8 ಕವಿಗಳು ಭಾಗವಹಿಸಲಿದ್ದಾರೆ. ಕವಿ ಪ್ರೊ.ಅ.ರಾ.ಮಿತ್ರ, ಕವಿ ಸುಬ್ರಾಯ ಚೊಕ್ಕಾಡಿ, ಸಂಸ್ಕೃತಿ ಚಿಂತಕ ಡಾ.ಎಂ.ಮೋಹನ್‌ ಅಳ್ವ, ರಂಗಕರ್ಮಿ ಮಂಡ್ಯ ರಮೇಶ್‌ ಪಾಲ್ಗೊಳ್ಳಿದ್ದಾರೆ.

ವಿಶಿಷ್ಟ ಕವಿಗೋಷ್ಠಿ: ರೈತರು, ಆಟೋಚಾಲಕರು, ಪೌರಕಾರ್ಮಿಕರು, ವಿಚಾರಣಾಧೀನ ಕೈದಿಗಳು, ಕೂಲಿಕಾರ್ಮಿಕರು ತಮ್ಮ ಜೀವನದ ಸಿಹಿ-ಕಹಿ ಅನುಭವಗಳಿಗೆ ಕಾವ್ಯರೂಪ ನೀಡಲಿದ್ದಾರೆ. ಚಲನಚಿತ್ರ ನಿರ್ದೇಶಕ ಡಾ.ಟಿ.ಎಸ್‌.ನಾಗಭರಣ, ಶಾಸಕ ಎಸ್‌.ಎ.ರಾಮದಾಸ್‌, ವಾಗ್ಮಿ ಶಂಕರ್‌ ದೇವನೂರು, ಅಂಕಣಕಾರ ಗುಬ್ಬಿಗೂಡು ರಮೇಶ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಖ್ಯಾತ ಕವಿಗೋಷ್ಠಿ: ಕರ್ನಾಟಕದ ಎಲ್ಲಾ ಜಿಲ್ಲೆಗಳ ಮತ್ತು ಸಹವರ್ತಿ ಭಾಷೆಗಳನ್ನು ಪ್ರತಿನಿಧಿಸುವ ಕವಿಗಳ ಕಾವ್ಯದೌತಣವೇ ವಿಖ್ಯಾತ ಕವಿಗೋಷ್ಠಿ. 32 ಕವಿಗಳು ಕವನ ವಾಚಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌, ಕವಿ ಡಾ.ಎಚ್‌.ಎಲ್‌.ಪುಷ್ಪಾ, ಗೀತಾ ರಚನಕಾರ ಡಾ.ನಾಗೇಂದ್ರ ಪ್ರಸಾದ್‌ ಅತಿಥಿಗಳಾಗಿ ಪಾಲ್ಗೊಳ್ಳುವರು.ದರು.

Advertisement

Udayavani is now on Telegram. Click here to join our channel and stay updated with the latest news.

Next