Advertisement

ಚನ್ನಮ್ಮನ ನಾಡಿನಲ್ಲಿ ಸಂಭ್ರಮ

06:41 PM Nov 09, 2021 | Team Udayavani |

ಚನ್ನಮ್ಮನ ಕಿತ್ತೂರ: ವೀರ ರಾಣಿ ಕಿತ್ತೂರು ಚನ್ನಮ್ಮ, ಕಿತ್ತೂರು ನಾಡಿನ ವೀರರ ಸ್ಮರಣೆಯಲ್ಲಿ ರಾಜ್ಯ ಸರಕಾರ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವನ್ನಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಕಿತ್ತೂರಿನ ಜನತೆ ಸಂತಸದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.

Advertisement

ಇಲ್ಲಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಸ್ವಯಂಸ್ಫೂರ್ತಿಯಿಂದ ಸೇರಿದ ಸಾವಿರಾರು ಜನರು ವಾದ್ಯಗಳನ್ನು ನುಡಿಸುತ್ತ ಪಟಾಕಿ ಸಿಡಿಸಿದ್ದಲ್ಲದೇ ತಾಯಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಕರ್ನಾಟಕಕ್ಕೆ ಜೈಘೋಷ ಹಾಕಿದರು. ಚನ್ನಮ್ಮ ವರ್ತುಳದಲ್ಲಿ ದೀಪಗಳ ಮೂಲಕ ಕಿತ್ತೂರು ಕರ್ನಾಟಕ ಎಂದು ಬರೆದು ಪಕ್ಷಾತೀತವಾಗಿ ಸಂತಸ ಹಂಚಿಕೊಂಡು ಕುಣಿದು ಕುಪ್ಪಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ಜೈಕಾರ ಹಾಕುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.

ರಾಣಿ ಚನ್ನಮ್ಮಾಜಿ ಪ್ರತಿಮೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಶಾಸಕ ಮಹಾಂತೇಶ ದೊಡಗೌಡರ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಕಿತ್ತೂರಲ್ಲಿ ಇಂದು ದಿಪಾವಳಿ ಹಬ್ಬ ಆಚರಿಸಿದಂತಿದೆ. ನಾಡಿನ ಗೌರವದ ದೀಪಾವಳಿ ಹಬ್ಬ ಇದಾಗಿದೆ. ಪ್ರಥಮ ಸ್ವಾತಂತ್ರ್ಯ ಹೋರಾಟದ ತಾಯಿ ರಾಣಿ ಚನ್ನಮ್ಮಾಜಿಗೆ ನಿಜವಾದ ಗೌರವ ಕೊಡುವ ಕೆಲಸ ಇದಾಗಿದೆ. ಶಾಸಕ ಮಹಾಂತೇಶ ದೊಡಗೌಡರ ಪ್ರಯತ್ನದ ಫಲವಾಗಿ ಈ ಘೋಷಣೆಯಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಎಲ್ಲ ಸಚಿವರಿಗೂ ಅಭಿನಂದನೆಗಳು. ಅಲ್ಲದೆ ಸರಕಾರದಿಂದ ಇಂದೇ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ.10 ಕೋಟಿ ಅನುದಾನವು ಸಹ ಬಿಡುಗಡೆಯಾಗಿದೆ. ಚನ್ನಮ್ಮಾಜಿಗೆ ನಿಜವಾದ ಗೌರವವನ್ನು ನಮ್ಮ ಸರಕಾರ ನೀಡಿದೆ. ಈ ಸಂತೋಷವನ್ನು ಪ್ರತಿ ವರ್ಷ ಆಚರಣೆ ಮಾಡಬೇಕು ಎಂದು ಹೇಳಿದರು.

Advertisement

ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಇದು ಕಿತ್ತೂರು ಕರ್ನಾಟಕದ ಘೋಷಣೆಗೆ ಸೀಮಿತ ಮಾಡುವುದಿಲ್ಲ. ಕಿತ್ತೂರು ಕರ್ನಾಟಕದ ಹೆಸರಿನಲ್ಲಿ ವಿಶೇಷವಾಗಿ ನಿಗಮ ಮಾಡುತ್ತೇನೆ. ಯೋಜನೆಯನ್ನು ಹಾಕುತ್ತೇನೆ. ವಿಶೇಷವಾದ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. ಚನ್ನಮ್ಮಾಜಿಯ ಮೇಲೆ ಅವರು ಹೊಂದಿರುವ ಅಪಾರ ಗೌರವದಿಂದ ಕಿತ್ತೂರು ನಾಡಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಪಣ ತೊಟ್ಟಿದ್ದಾರೆ. ಅವರ ನೇತೃತ್ವದಲ್ಲಿ ಕಿತ್ತೂರು ನಾಡಿನ ಗತವೈಭವ ಮರುಕಳಿಸಲಿದೆ ಎಂದು ಹೇಳಿದರು.

ತಹಶೀಲ್ದಾರ್‌ ಸೋಮಲಿಂಗ ಹಾಲಗಿ, ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಉಳವಪ್ಪ ಉಳ್ಳಾಗಡ್ಡಿ, ನಿಜಲಿಂಗಯ್ಯ ಹಿರೇಮಠ, ಜಗದೀಶ ವಸ್ತ್ರದ, ಬಸನಗೌಡ ಕೊಳದೂರ, ವಿಶ್ವನಾಥ ಬಿಕ್ಕಣ್ಣವರ, ಡಿ.ಆರ್‌.ಪಾಟೀಲ, ಮಂಜುಳಾ ದೊಡಗೌಡರ, ಸರಸ್ವತಿ ಬೆ„ಬತ್ತಿ, ಉಮಾದೇವಿ ಬಿಕ್ಕಣ್ಣವರ, ಎಸ್‌.ಆರ್‌.ಪಾಟೀಲ, ಮುಖ್ಯಾಧಿಕಾರಿ ಪ್ರಕಾಶ ಮಠದ, ಆರ್‌.ಐ ಬಿ.ವಿ.ಬಡಗಾಂವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next