ಮೂಡಿಗೆರೆ: ವರ್ಷವಿಡೀ ಗರ್ಭಗುಡಿಯಲ್ಲಿರುವ ದೇವಿಯು ಸನ್ನಿ ಧಿಗೆ ಬಂದ ಭಕ್ತರಿಗೆ ದರ್ಶನ ಕೊಡುತ್ತಾಳೆ. ರಥೋತ್ಸವದಂದು ಜಗನ್ಮಾತೆಯು ಹೊರಬಂದು ರಥದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುತ್ತಾಳೆ. ಇದು ರಥೋತ್ಸವದ ವಿಶೇಷವಾಗಿದೆ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಶಿ ತಿಳಿಸಿದರು.
ಶ್ರೀ ಕ್ಷೇತ್ರದ ಹೊರನಾಡು ಅನ್ನಪೂರ್ಣೆಶ್ವರಿ ಅಮ್ಮನವರ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ರಥೋತ್ಸವದ ವಿವರಣೆ ನೀಡಿದ ಅವರು, ಶ್ರೀ ಕ್ಷೇತ್ರದಲ್ಲಿ ನಡೆಯುವ ರಥೋತ್ಸವದಲ್ಲಿ ಭಕ್ತರಿಗೆ ದೇವರ ದರ್ಶನ, ದೇವತಾ ಸಾನ್ನಿಧ್ಯ ಮತ್ತು ದೇವರ ಸೇವಾ ಕಾರ್ಯವು ನೇರವಾಗಿ
ಲಭಿಸುವುದು. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಏಕ ಮನಸ್ಸಿನಿಂದ ರಥ ಎಳೆದು ತಾಯಿಯ ಕೃಪೆಗೆ ಪಾತ್ರನಾಗುತ್ತಾರೆ ಎಂದು ಹೇಳಿದರು.
ರಥೋತ್ಸವಗಳಿಗೂ ಮಾನವ ಜೀವನದ ರಥಕ್ಕೂ ಒಂದಕ್ಕೊಂದು ಸಂಬಂಧವಿದೆ. ಜೀವನ ಎಂಬ ರಥದಲ್ಲಿ ಸಂಸಾರದ ಒಳಗಿರುವ ಎಲ್ಲರೂ ಏಕ ಮನಸ್ಸಿನಿಂದ ರಥವನ್ನು ಎಳೆದಾಗ ಹೇಗೆ ನಿರ್ಧಿಷ್ಟ ಗುರಿ ತಲುಪಲು ಸಾಧ್ಯವೋ ಹಾಗೆಯೇ ದೇವರ ರಥವನ್ನು ನಿಷ್ಕಲ್ಮಷದಿಂದ ಭಕ್ತಿಭಾವದಿಂದ ಎಳೆದಲ್ಲಿ ಒಳಗಿನ ಪರಮಾತ್ಮನನ್ನು ಕಾಣಲು ಸಾಧ್ಯ ಎಂದರು.
ರಥಗಳಲ್ಲಿ ದೇವರು ಕುಳಿತಾಗ ಅದು ಪ್ರತಿಯೊಬ್ಬ ಮನುಷ್ಯನು ಹಂತಹಂತವಾಗಿ ಗುರಿ ತಲುಪುವ ಮೂಲಕ ಎತ್ತರಕ್ಕೆ ಬೆಳೆಯ ಬೇಕೆಂಬ ಸಂದೇಶ ನೀಡುತ್ತದೆ ಎಂದು ರಥೋತ್ಸವದ ಆಚರಣೆ ಮಹತ್ವ ತಿಳಿಸಿದರು. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆದರು. ಇದಕ್ಕೂ ಮುನ್ನ ದೇವಾಲಯದಲ್ಲಿ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಡಾ|ಜಿ.ಭೀಮೇಶ್ವರ ಜೋಶಿ ಮತ್ತು ರಾಜಲಕ್ಷ್ಮೀ ಜೋಶಿ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಉತ್ಸವ ಮೂರ್ತಿಯನ್ನು ಪ್ರಧಾನ ಅರ್ಚಕರು ತಲೆಯ ಮೇಲೆ ಹೊತ್ತು ವೇದ ಮಂತ್ರ ಘೋಷದೊಂದಿಗೆ ಮಂಗಳ ವಾದ್ಯದೊಂದಿಗೆ ದೇವಾಲಯದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು. ನಂತರ ಅಮ್ಮನವರ ಮೂರ್ತಿಯನ್ನು ವಿಶೇಷವಾಗಿ ಶೃಂಗರಿಸಿದ ರಥದಲ್ಲಿ ಕುಳ್ಳರಿಸಿ ರಥ ಎಳೆಯಲಾಯಿತು.
ಈ ಸಂದರ್ಭದಲ್ಲಿ ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ರಾಮನಾರಾಯಣ ಜೋಶಿ, ರಾಜಗೋಪಾಲ ಜೋಶಿ, ಗಿರೀಜಾ ಶಂಕರ್ ಜೋಶಿ ಕುಟುಂಬದವರು ಪಾಲ್ಗೊಂಡಿದ್ದರು.