ಎಲ್ಲರೂ ನಿಗದಿತ ಅವಧಿಯಲ್ಲಿ ಕಚೇರಿ ಕೆಲಸಗಳನ್ನು ಮುಗಿಸುವವರು. ನಿಗದಿತ ಅವಧಿಗಳಲ್ಲಿ ಕೆಲಸಗಳನ್ನು ಪೂರ್ಣಗೊಳಿಸದೆ ಇದ್ದರೆ ರಾತ್ರಿ ವೇಳೆಯೆಲ್ಲ ಕಚೇರಿಯಲ್ಲಿ ಕುಳಿತು ಅಂದಿನ ಕೆಲಸವನ್ನು ಮುಗಿಸಿ ಮನೆಗೆ ತೆರಳಬೇಕಾಗುತ್ತದೆ. ಇಂದಿನ ಯುಗದಲ್ಲಿ ಅವಧಿಗೂ ಮೀರಿದ ಕೆಲಸ ಸರ್ವಸಾಮಾನ್ಯವಾಗಿ ಹೋಗಿಬಿಟ್ಟಿದೆ. ಈ ಓವರ್‌ಟೈಮ್ ನಮ್ಮ ಅಂದಿನ ಕೆಲಸಗಳನ್ನು ಪೂರ್ಣಗೊಳಿಸಬಹುದು ಆದರೆ ಆರೋಗ್ಯಕ್ಕೆ ಎಂದಿಗೂ ಒಳಿತಲ್ಲ. ಕಚೇರಿಯಲ್ಲಿ ಅವಧಿಗಿಂತ ಹೆಚ್ಚು ಕೆಲಸ ಮಾಡುವುದರಿಂದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಜೀವನದಲ್ಲಿ ಅನೇಕ ಸಮಸ್ಯೆ ಉಂಟಾಗಬಹುದು.
ಹೃದಯದ ಸಮಸ್ಯೆ: ಕೆಲಸದ ಒತ್ತಡದಿಂದ ನಮ್ಮ ದೇಹದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಹೃದಯ ಸಂಬಂಧಿ ಕಾಯಿಲೆಗಳನ್ನು ಉಂಟುಮಾಡುತ್ತದೆ. ಇದರ ಜತೆ ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳು ಕಾಣಿಸಿಕೊಳ್ಳಬಹುದು
ಬೆನ್ನು ಮತ್ತು ಕುತ್ತಿಗೆ ತೊಂದರೆ: ಸಾಮಾನ್ಯ ಕಚೇರಿ ಅವಧಿಯಲ್ಲಿ ಕೆಲಸ ಮಾಡಿದರೆ ಅಲ್ಪ ಪ್ರಮಣದ ಬೆನ್ನು ಮತ್ತು ಕುತ್ತಿಗೆ ತೊಂದರೆ ಕಾಣಿಸಿಕೊಳ್ಳುತ್ತದೆ. ಹಾಗಿರುವಾಗ ಅವಧಿ ಮುಗಿದರೂ ನಿರಂತರವಾಗಿ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಮುಂದೆ ದೀರ್ಘವಾದ ಬೆನ್ನು ಮತ್ತು ಕುತ್ತಿಗೆ ತೊಂದರೆ ಅನುಭವಿಸಬೇಕಾದಿತು.
ಆಯಾಸ: ರಾತ್ರಿವಿಡೀ ನಿದ್ದೆ ಕೆಟ್ಟು ಕೆಲಸ ಮಾಡಿದರೆ ಬೆಳಗ್ಗೆ ಫ್ರೆಶ್ ಆಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದರೊಂದಿಗದಿನವಿಡೀ ಆಯಾಸ, ಕೆಲಸದಲ್ಲಿ ಅನಾಸ್ತಕಿ ಉಂಟಾಗಬಹುದು.
ಕೆಲಸದ ಕ್ಷಮತೆ ಕುಂಠಿತ: ಒಂದು ಅಥವಾ ಎರಡು ದಿನ ಓವರ್ ಟೈಮ್ ಕೆಲಸ ಮಾಡಬಹುದು ಅಂದರೆ ಅದಕ್ಕಿಂತ ಮಿತಿಮೀರಿ ಮುಂದುವರಿದರೆ ಮಾಡುವ ಕೆಲಸದ ಗುಣಮಟ್ಟ ಮತ್ತು ಕ್ಷಮತೆ ಕಡಿಮೆ ಆಗುತ್ತದೆ. ಕೆಲಸದ ಒತ್ತಡದ ದೂರ ಮಾಡುವ ಸಲುವಾಗಿ ಮದ್ಯ ಸೇವನೆಗೆ ಮುಂದಾಗುವ ಅಪಾಯವಿದೆ. ನೆಮ್ಮದಿ ಲಭಿಸುತ್ತದೆ ಎಂದು ಕುಡಿತದ ದಾಸರಾಗುವ ಸಾಧ್ಯತೆಗಳಿವೆ.
ಮಾನಸಿಕ ಸಮಸ್ಯೆ: ಅವಧಿ ಮೀರಿ ಮಾಡುವ ಕೆಲಸ ನಾನಾ ರೀತಿಯ ದೈಹಿಕ ಸಮಸ್ಯೆ ಜತೆ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಓವರ್ ಟೈಮ್ ಕೆಲಸ ದೀರ್ಘಕಾಲದ ಖನ್ನತೆ , ಫೋಬಿಯಾಗಳನ್ನು ಆಹ್ವಾನಿಸಿದಂತೆ. ಕೆಲಸದ ಒತ್ತಡವೂ ನರಗಳ ಮೇಲೂ ಪರಿಣಾಮ ಬೀರುತ್ತದೆ. ಉದ್ವೇಗ, ಆತಂಕಗಳು ಹೆಚ್ಚಾಗುವ ಸಾಧ್ಯತೆ ಇದೆ. ಓವರ್ ಟೈಮ್ ಕೆಲಸ ಜೀವನ ಶೈಲಿಯ ಮೇಲೂ ಪರಿಣಾಮ ಬೀರುತ್ತದೆ.
ವೈಯಕ್ತಿಕ ಜೀವನ
ದಿನದ 24 ಗಂಟೆ ಕಚೇರಿಯಲ್ಲೇ ಇದ್ದರೇ ದೈಹಿಕ ತೊಂದರೆ ಜತೆ ನಿಮ್ಮ ವೈಯಕ್ತಿಕ ಜೀವನದಲ್ಲೂ ಗಂಭೀರ ಸಮಸ್ಯೆ ಉಂಟಾಗಬಹುದು. ಸಂಗಾತಿ, ಕುಟುಂಬ ಸದಸ್ಯರ ಜತೆ ಕಾಲ ಕಳೆಯಲು ಸಮಯ ಸಿಗದೆ ಅವರಿಂದ ದೂರವಾಗುವ ಸಂಧರ್ಭ ಉಂಟಾಗಬಹುದು.
•ಧನ್ಯಾ