Advertisement

ಮದ್ಯ ಮಾರಾಟಕ್ಕೆ ಗುರಿ ನಿಗದಿ?ಆದಾಯ ಹೆಚ್ಚಳಕ್ಕಾಗಿ ಮುಂದಾದ ಅಬಕಾರಿ ಇಲಾಖೆ

01:15 AM Feb 11, 2020 | Sriram |

ಮದ್ಯ, ಆಸ್ಪತ್ರೆ ವಿಚಾರಗಳಲ್ಲಿ ಟಾರ್ಗೆಟ್‌ ಎಂಬ ವಿಚಾರ ಬಂದರೆ ಜನತೆ ಸಂಕಷ್ಟಕ್ಕೀಡಾಗುವುದರಲ್ಲಿ ಎರಡು ಮಾತಿಲ್ಲ.

Advertisement

ಕುಂದಾಪುರ: ಮದ್ಯಪಾನ ಸಂಯಮ ಮಂಡಳಿ ಮೂಲಕ ಮದ್ಯ ಸೇವಿಸಬೇಡಿ ಎನ್ನುವ ಸರಕಾರ ಇನ್ನೊಂದೆಡೆ ಅಬಕಾರಿ ಆದಾಯ ಹೆಚ್ಚಳಕ್ಕಾಗಿ ಮದ್ಯ ಮಾರಾಟಕ್ಕೂ ಗುರಿ ನಿಗದಿಪಡಿಸಿದೆಯೇ? ಹೀಗೊಂದು ಅನುಮಾನ ಮದ್ಯದಂಗಡಿ ಮಾಲಕರಿಗಷ್ಟೇ ಅಲ್ಲ ಗ್ರಾಹಕರಿಗೂ ಇದೆ. ಮಾರಾಟ ಹೆಚ್ಚಿಸಲು ಇಲಾಖೆ ಮದ್ಯ ದಂಗಡಿಯವರಿಗೆ ಒತ್ತಡ ಹಾಕುತ್ತಿದೆ ಎಂಬ ಆರೋಪ ಇದೆ. ಹಾಗಾಗಿ ಮದ್ಯ ಮಾರಾಟ ಹೆಚ್ಚಿಸುವ ಸಲುವಾಗಿ ಪ್ರಕಟನೆ ಬಂದರೂ ಅಚ್ಚರಿಯಿಲ್ಲ. ಆದರೆ ಮಾರಾಟ ಹೆಚ್ಚಿಸಲು ಗುರಿ ನಿಗದಿ ಮಾಡಿಲ್ಲ, ಅಕ್ರಮ ಮದ್ಯ ಮಾರಾಟವಾಗದಂತೆ ಎಚ್ಚರ ವಹಿಸಿದ್ದೇವೆ ಎನ್ನುತ್ತಾರೆ ಅಬಕಾರಿ ಇಲಾಖೆಯವರು.

ಆರೋಪ
ಕರಾವಳಿ ಜಿಲ್ಲೆಗಳಲ್ಲಿ ಬಿಯರ್‌ ಸರಾಗವಾಗಿ ಸಿಗುತ್ತಿಲ್ಲ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮತ್ತು ವೈನ್‌ಶಾಪ್‌ಗ್ಳಲ್ಲಿ ಬೇಡಿಕೆಯ ಶೇ.50ರಷ್ಟು ಅಥವಾ ಅದಕ್ಕಿಂತಲೂ ಕಡಿಮೆ ಬಿಯರ್‌ ಪೂರೈಸಲಾಗುತ್ತಿದೆ. ಐಎಂಎಲ್‌(ಇಂಡಿಯನ್‌ ಮೇಡ್‌ ಲಿಕ್ಕರ್‌) ಮಾರಾಟ ಹೆಚ್ಚಿಸಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಟಾರ್ಗೆಟ್‌ ಇದಕ್ಕೆ ಕಾರಣ ಎಂದು ಮದ್ಯದಂಗಡಿ ಮಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಮಗೂ ಟಾರ್ಗೆಟ್‌ ಇದೆ ಎನ್ನುತ್ತಾರಂತೆ ಅಬಕಾರಿ ಇಲಾಖೆ ಅಧಿಕಾರಿಗಳು.

ಕಂಗಾಲು
ರಾಜ್ಯದ ಇತರ ಜಿಲ್ಲೆಗಳಿಗೆ, ಇತರ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಮದ್ಯದಂಗಡಿಗಳು ಸಾಲು ಸಾಲು ಇದ್ದರೂ ಅಲ್ಲಲ್ಲಿ ಕುಡಿದು ಬೀಳುವ ಮಂದಿ ಇಲ್ಲ. ಮದ್ಯದ ದಾಸರಾಗಿ ಮನೆ ಮಠ ಕಳೆದುಕೊಳ್ಳುವವರು ಕಡಿಮೆ. ಕರಾವಳಿ ಭಾಗದಲ್ಲಿ ಬಿಯರ್‌ಗೆ ಬೇಡಿಕೆ ಹೆಚ್ಚು. ಬಿಯರ್‌ ಕುಡಿಯುವುದನ್ನು ಮನೆ ಮಂದಿಯೂ ಆಕ್ಷೇಪಿಸುವವರು ಕಡಿಮೆ ಇರುವುದು ಮತ್ತು ದರ ಕೂಡ ಮದ್ಯಕ್ಕೆ ಹೋಲಿಸಿದರೆ ಕಡಿಮೆ ಇರುವುದು ಇದಕ್ಕೆ ಮುಖ್ಯ ಕಾರಣ. ಆದರೆ ಫೈನಾನ್ಶಿಯಲ್‌ ಇಯರ್‌ ಎಂಡ್‌ ಸೀಸನ್‌ನಲ್ಲಿ ಮದ್ಯದಂಗಡಿಗಳಲ್ಲಿ ಬೇಕಾದ ಬ್ರಾಂಡ್‌ನ‌ ಬಿಯರ್‌ ಸಿಗುತ್ತಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ. ಕೆಲವು ಕಡೆ ಮದ್ಯ ತೆಗೆದುಕೊಂಡರೆ ಮಾತ್ರ ಬಿಯರ್‌ ಕೊಡುತ್ತೇವೆ ಎಂದು ಅಂಗಡಿಯವರೇ ಗ್ರಾಹಕರಿಗೆ ಕಂಡಿಷನ್‌ ಹಾಕುತ್ತಿರುವುದೂ ಇದೆಯಂತೆ.

2018-19 ರ ಸಾಲಿನಲ್ಲಿ ಮದ್ಯ ಮಾರಾಟ
ಗುರಿ ಹೊಂದಲಾಗಿತ್ತು.ಆದರೆ 4,59,019 ಬಾಕ್ಸ್‌ಗಳು ಮಾರಾಟ ವಾಗುವ ಮೂಲಕಗುರಿ ತಲುಪುವಲ್ಲಿ 54,268 ಬಾಕ್ಸ್‌ಗಳಷ್ಟು ಹಿನ್ನಡೆಯಾಗಿದೆ.

Advertisement

ಕಾರಣವೇನು?
ಬಿಯರ್‌ನಲ್ಲಿ ಅಬಕಾರಿ ಸುಂಕ ಕಡಿಮೆ, ಐಎಂಎಲ್‌ ಮದ್ಯಕ್ಕೆ ಸುಂಕ ಹೆಚ್ಚು. ಈ ಕಾರಣದಿಂದ ಬಿಯರ್‌ ಬಿಟ್ಟು, ಐಎಂಎಲ್‌ ಮದ್ಯ ಖರೀದಿಗೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಅಬಕಾರಿ ಇಲಾಖೆ ಮೂಲಕ ಮದ್ಯದಂಗಡಿ ಮಾಲಕರ ಮೇಲೆ ಒತ್ತಡ ಹಾಕಿ ಐಎಂಎಲ್‌ ಮಾರಾಟ ಹೆಚ್ಚಿಸಲು ಟಾರ್ಗೆಟ್‌ ನೀಡಲಾಗುತ್ತಿದೆ. ನಿಗದಿಯಷ್ಟು ದೇಶಿ ಮದ್ಯ ಮಾರಾಟ ಮಾಡಿದರೆ ಮಾತ್ರ ಕೇಳಿದಷ್ಟು ಬಿಯರ್‌ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ ಎನ್ನುವುದು ಮದ್ಯದಂಗಡಿ ಮಾಲಕರ ಗೋಳು.

ಎಷ್ಟು ಮಾರಾಟ
ಕುಂದಾಪುರ ವಲಯದಲ್ಲಿ 2016-17ರ ಗುರಿ 5,52,122 ಆಗಿದ್ದು 4,70,840 ಮಾರಾಟ ಆಗಿದೆ. 2017-18 ಗುರಿ 5,13,416 ಆಗಿದ್ದು, 4,67,674 ಮಾರಾಟವಾಗಿದೆ. 2018-19 ಗುರಿ 5,13,287 ಆಗಿದ್ದು, ಮಾರಾಟವಾದ ಪೆಟ್ಟಿಗೆ ಸಂಖ್ಯೆ 4,59,019ಆಗಿವೆ. ಬಿಯರ್‌ ಮಾರಾಟಕ್ಕೆ 2016-17ರಲ್ಲಿ 2,50,123 ಗುರಿ ನೀಡಲಾಗಿದ್ದು 2,64,983 ಮಾರಾಟವಾಗಿದೆ. 2017-18ರಲ್ಲಿ 2,64,978 ಗುರಿಯಿದ್ದು 2,72,469 ಮಾರಾಟವಾಗಿದೆ. 2018-19ರಲ್ಲಿ 2,72,463 ಗುರಿ ನೀಡಲಾಗಿದ್ದು 2,62,612 ಪೆಟ್ಟಿಗೆ ಮಾರಾಟವಾಗಿದೆ.

ಹೀಗಿದೆ ಬದಲಾವಣೆ
ಕರಾವಳಿ ಭಾಗದಲ್ಲಿ ಬಿಯರ್‌ಗೆ ಬೇಡಿಕೆ ಹೆಚ್ಚು. ಬಿಯರ್‌ ಕುಡಿಯುವುದನ್ನು ಮನೆ ಮಂದಿಯಲ್ಲಿ ಆಕ್ಷೇಪಿಸುವವರು ಕಡಿಮೆ ಇರುವುದು ಮತ್ತು ದರ ಕೂಡ ಮದ್ಯಕ್ಕೆ ಹೋಲಿಸಿದರೆ ಕಡಿಮೆ ಇರುವುದು ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಬಿಯರ್‌ ಹೀರಬೇಕೆಂದು ಮದ್ಯದಂಗಡಿಗೆ ಬರುವವರಿಗೆ ನಿರಾಸೆ ಕಾಡುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮದ್ಯದಂಗಡಿಗಳಲ್ಲಿ ಬಿಯರ್‌ ಬದಲು ವೈನ್‌ ಮಾರಾಟಕ್ಕೆ ಒತ್ತಡ ಹೆಚ್ಚಾಗಿದೆ. ಹಾಗಾಗಿ ಅಂಗಡಿಯಾತ ವೈನ್‌ ಕೊಳ್ಳುವಂತೆ ಒತ್ತಡ ಹೇರುತ್ತಾನೆ. ಅಥವಾ ಬಿಯರ್‌ ಇಲ್ಲ ಎನ್ನುತ್ತಾನೆ. ಇದು ಆದಾಯ ಪ್ರಮಾಣ ಹೆಚ್ಚಿಸಲು ಸರಕಾರವೇ ಕೃತಕವಾಗಿ ಸೃಷ್ಟಿಸಿರುವ ಅಭಾವ ಎಂಬ ಆರೋಪವೂ ಇದೆ.

ಗುರಿ ನಿಗದಿ ಅಲ್ಲ, ನಿರೀಕ್ಷೆ
ಮದ್ಯ ಮಾರಾಟ ಹೆಚ್ಚಳಕ್ಕೆ ಗುರಿ ನಿಗದಿ ಮಾಡಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದಷ್ಟು ಈ ವರ್ಷ ಆಗದೇ ಇದ್ದರೆ ಅದಕ್ಕೆ ಕಾರಣಗಳೇನು ಎನ್ನುವುದನ್ನು ಹುಡುಕುತ್ತೇವೆ. ಅಕ್ರಮವಾಗಿ ಮಾರಾಟವಾಗುತ್ತಿದೆಯೇ ಎಂದು ತನಿಖೆ, ಕ್ರಾಸ್‌ಚೆಕ್‌ ಮಾಡುತ್ತೇವೆ. ಮದ್ಯ ಮಾರಾಟದಿಂದ ಇಂತಿಷ್ಟು ಆದಾಯ ಬರಬೇಕೆಂದು ನಿರೀಕ್ಷೆ ಮಾಡುತ್ತೇವೆ ವಿನಾ ಇಷ್ಟೇ ಮಾರಾಟ ಮಾಡಬೇಕೆಂದು ಗುರಿ ಹೇರುವುದಿಲ್ಲ.
-ಮೇರು ನಂದನ್‌,
ಜಿಲ್ಲಾ ಅಬಕಾರಿ ಡಿಸಿ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next