Advertisement
ಭಾರೀ ಪ್ರಮಾಣದ ಸದ್ದುಗಳನ್ನು ಕೇಳಿಸಿಕೊಳ್ಳುವುದರಿಂದ ಶಾಶ್ವತ ಶ್ರವಣ ಶಕ್ತಿ ನಷ್ಟ ಉಂಟಾಗಬಹುದು. ಈ ಶ್ರವಣ ಶಕ್ತಿ ನಷ್ಟವನ್ನು ಶಸ್ತ್ರಚಿಕಿತ್ಸೆ ಅಥವಾ ಶ್ರವಣ ಸಾಧನ ಅಳವಡಿಕೆಯಿಂದ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಭಾರೀ ಪ್ರಮಾಣದ ಸದ್ದುಗಳಿಗೆ ಅಲ್ಪ ಕಾಲ ಒಡ್ಡಿಕೊಳ್ಳುವುದರಿಂದ ಶ್ರವಣ ಸಾಮರ್ಥ್ಯದಲ್ಲಿ ತಾತ್ಕಾಲಿಕ ಬದಲಾವಣೆ ಉಂಟಾಗಬಹುದು ಅಥವಾ ಕಿವಿಗಳಲ್ಲಿ ಗುಂಯ್‌ಗಾಡುವ ಅನುಭವವಾಗಬಹುದು. ಈ ತಾತ್ಕಾಲಿಕ ಸಮಸ್ಯೆಗಳು ಸದ್ದು ಕೇಳಿಸಿಕೊಳ್ಳುವುದು ನಿಂತ ಬಳಿಕ ಕೆಲವು ನಿಮಿಷಗಳಲ್ಲಿ ಅಥವಾ ಕೆಲವು ತಾಸುಗಳ ಬಳಿಕ ಮಾಯವಾಗಬಹುದು. ಜತೆಗೆ ಭಾರೀ ಸದ್ದಿಗೆ ಪದೇಪದೆ ಒಡ್ಡಿಕೊಳ್ಳುವುದರಿಂದ ಕಿವಿಗಳಲ್ಲಿ ಶಾಶ್ವತ ಗುಂಯ್‌ಗಾಡುವಿಕೆ ಅಥವಾ ಶ್ರವಣ ಸಾಮರ್ಥ್ಯ ನಷ್ಟ ಉಂಟಾಗಬಹುದು.
Related Articles
Advertisement
ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ತೀವ್ರವಾದ ಸದ್ದನ್ನು ದೀರ್ಘಕಾಲ ಆಲಿಸುವುದರಿಂದ ಸದ್ದಿನಿಂದ ಉಂಟಾಗುವ ಶ್ರವಣಶಕ್ತಿ ನಷ್ಟ ಸಂಭವಿಸುತ್ತದೆ. ಶ್ರವಣ ಶಕ್ತಿ ವೈಕಲ್ಯ ಮತ್ತು ಶ್ರವಣ ಶಕ್ತಿಗೆ ಆಗುವ ಹಾನಿಗೆ ಸದ್ದನ್ನು ಕೇಳಿಸಿಕೊಳ್ಳುವುದು ಮತ್ತು ಬಲವಾದ ಸದ್ದು ಕಾರಣವಾಗಿರುತ್ತವೆ.
ಸಂಗೀತ ಕಾರ್ಯಕ್ರಮಗಳಲ್ಲಿ ಡ್ರಮ್ಸ್ ವಾದಕರು ಸತತವಾಗಿ ಬಲವಾದ ಡ್ರಮ್ಸ್ ವಾದನದ ಸದ್ದನ್ನು ಕೇಳಿಸಿಕೊಳ್ಳುವುದು ಸದ್ದಿನಿಂದ ಉಂಟಾಗುವ ಶ್ರವಣಶಕ್ತಿ ನಷ್ಟಕ್ಕೆ ಒಂದು ಕಾರಣವಾಗಿರುತ್ತದೆ. ಸದ್ದಿನಿಂದಾಗಿ ಶ್ರವಣ ಶಕ್ತಿ ನಷ್ಟ ಹೊಂದಿರುವವರು ಸಾಮಾನ್ಯವಾಗಿ 5ರಿಂದ 20 ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ಭಾರೀ ಸದ್ದಿಗೆ (85 ಡೆಸಿಬಲ್‌ಗಳಿಗಿಂತ ಹೆಚ್ಚು) ದಿನದಲ್ಲಿ ತುಂಬಾ ಹೊತ್ತು ಒಡ್ಡಿಕೊಂಡಿರುತ್ತಾರೆ.
ಶ್ರವಣ ಶಕ್ತಿ ನಷ್ಟದಿಂದಾಗಿ ಉಂಟಾಗಿರುವ ವೈಕಲ್ಯ ಬಹುತೇಕ ಪ್ರಕರಣಗಳಲ್ಲಿ ಭಾರೀ ಸದ್ದನ್ನು ದೀರ್ಘಕಾಲ ಕೇಳಿಸಿಕೊಂಡಿರುವುದು ಕಾರಣವಾಗಿರುತ್ತದೆ ಮತ್ತು ಭಾರೀ ಸದ್ದು ಶ್ರವಣ ಶಕ್ತಿಗೆ ಹಾನಿ ಉಂಟುಮಾಡುತ್ತದೆ. ವೃತ್ತಿಯ ಕಾರಣವಾಗಿ ಭಾರೀ ಸದ್ದಿಗೆ ದೀರ್ಘಕಾಲ ಒಡ್ಡಿಕೊಳ್ಳುವ ಅನಿವಾರ್ಯ ಇರುವ ವೃತ್ತಿಪರ ಸಂಗೀತಗಾರರು ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಅವರು ಸಂಗೀತಕ್ಕೆ ಒಡ್ಡಿಕೊಂಡಿರುವುದು, ಅದರಲ್ಲೂ ನಿರ್ದಿಷ್ಟವಾಗಿ ಭಾರೀ ಸದ್ದಿಗೆ ಒಡ್ಡಿಕೊಂಡಿರುವುದು ಹಲವು ಅಂಶಗಳನ್ನು ಆಧರಿಸಿ ಬದಲಾಗುತ್ತದೆ: ನುಡಿಸಲಾಗುವ ಸಂಗೀತ ಸಾಧನ (ಇತರ ವೃತ್ತಿಪರ ಸಂಗೀತ ಕಲಾವಿದರಿಗೆ ಹೋಲಿಸಿದರೆ ಡ್ರಮ್ಮರ್‌ಗಳು ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ), ಸಂಗೀತ ಕಾರ್ಯಕ್ರಮದ ವಿಧ (ಸಂಗೀತಗಾರರ ಸಂಖ್ಯೆ ಮತ್ತು ಸಂಗೀತ ವಿಧ), ಧ್ವನಿವರ್ಧನದ ಪ್ರಮಾಣ, ಸಹ ಸಂಗೀತ ವಾದ್ಯಗಳು ಮತ್ತು ಕಾರ್ಯಕ್ರಮ ನಡೆಯುತ್ತಿರುವ ಪರಿಸರ (ನೈಟ್ ಕ್ಲಬ್‌ಗ ಹೋಲಿಸಿದರೆ ಹೆಚ್ಚು ಅಕೌಸ್ಟಿಕ್ ವ್ಯವಸ್ಥೆ ಇರುವ ಸಭಾಂಗಣಗಳು) ಮತ್ತು ಶ್ರೋತೃಗಳಾಗಿ ಕಾರ್ಯಕ್ರಮದಲ್ಲಿ ಸೇರಿರುವವರು ಮತ್ತು ಅವರ ಸಂಗೀತ ಶಿಕ್ಷಣ.
ಬಹುತೇಕ ಡ್ರಮ್ಮರ್‌ಗಳಿಗೆ ಶ್ರವಣಸಾಮರ್ಥ್ಯವನ್ನು ರಕ್ಷಿಸಿಕೊಳ್ಳುವ ಸಾಧನಗಳ ಬಗ್ಗೆ ಅರಿವಿರುವುದಿಲ್ಲ. ಕಿವಿಗಳನ್ನು ರಕ್ಷಿಸಿಕೊಳ್ಳುವ ಸಾಧನಗಳ (ಇಪಿಡಿ) ಬಗ್ಗೆ ಜನಸಮುದಾಯದಲ್ಲಿ ಅರಿವಿರುವುದಿಲ್ಲ ಎಂಬುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಟೈಕಿಯಸ್ ದಿನಕರನ್ ಎಂಬವರು 2018ರಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಶೇ. 79.4 ಮಂದಿಯಲ್ಲಿ ಇಪಿಡಿಗಳ ಬಗ್ಗೆ ಅರಿವು ಹೊಂದಿಲ್ಲ ಮತ್ತು ಶೇ. 21.6 ಮಂದಿ ಅವುಗಳ ಬಗ್ಗೆ ಅರಿವು ಹೊಂದಿದ್ದರೂ ಉಪಯೋಗಿಸಿಲ್ಲ.
ಸಂಗೀತಗಾರರು ಶ್ರವಣಶಕ್ತಿ ದೋಷಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ, ಆದರೆ ಶ್ರವಣ ಶಕ್ತಿಗೆ ಉಂಟಾಗುವ ಅಪಾಯದ ಬಗ್ಗೆ ಅವರಲ್ಲಿ ಅರಿವಿನ ಕೊರತೆ ಇರುತ್ತದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಸಂರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸುವ ಅಗತ್ಯವಿರುತ್ತದೆ.
ಡ್ರಮ್ಮರ್‌ಗಳ ಶ್ರವಣಶಕ್ತಿಯನ್ನು ರಕ್ಷಿಸಿಕೊಳ್ಳುವುದು ಹೇಗೆ? ಶ್ರವಣ ಶಕ್ತಿ ಸಂರಕ್ಷಕಗಳು ಅಥವಾ ಇಪಿಡಿಗಳು ಭಾರೀ ಸದ್ದಿನ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇಪಿಡಿಗಳನ್ನು ಸರಿಯಾಗಿ ಧರಿಸಿದ್ದಾಗ ಕಿವಿಯನ್ನು ತಲುಪುವ ಸದ್ದಿನ ಡೆಸಿಬಲ್ ಮಟ್ಟ ಕಡಿಮೆ ಯಾಗುತ್ತದೆ. ಕಿವಿಯನ್ನು ಪ್ರವೇಶಿಸುವ ಸದ್ದಿಗೆ ತಡೆಯಾಗಿ ಇಪಿಡಿಗಳು ಕೆಲಸ ಮಾಡುತ್ತವೆ. ಅತಿಯಾದ ಸದ್ದನ್ನು ಕಿವಿಗಳು ಕೇಳಿಸಿಕೊಳ್ಳುವುದು ಮತ್ತು ಅದರಿಂದಾಗಿ ಶ್ರವಣಶಕ್ತಿಗೆ ಹಾನಿಯಾಗುವುದನ್ನು ಇಪಿಡಿಗಳು ತಡೆಯುತ್ತವೆ. ಪ್ರಾಥಮಿಕ ಮಟ್ಟದ ಇಪಿಡಿಗಳೆಂದರೆ ಇಯರ್ ಮಫ್ಗಳು, ಇಯರ್ ಪ್ಲಗ್‌ಗಳು ಮತ್ತು ಕೆನಾಲ್ ಕ್ಯಾಪ್‌ಗ್ಳು. ಡ್ರಮ್ ನುಡಿಸುವವರಾಗಿದ್ದರೆ (100 ಡೆಸಿಬಲ್‌ಗಳು), ಇತರ ಸಂಗೀತಗಾರರೊಡನೆ ತಾಲೀಮು ನಡೆಸುತ್ತಿದ್ದರೆ (120 ಡೆಸಿಬಲ್‌ಗಳು), ಅಥವಾ ರಾಕ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ (110 ಡೆಸಿಬಲ್) ನೀವು ಇಯರ್ ಪ್ಲಗ್ ಹಾಕಿಕೊಳ್ಳಬೇಕು. ಕೇವಲ 85 ಡೆಸಿಬಲ್‌ಗಳಿಗಿಂತ ಹೆಚ್ಚು ಸದ್ದಿಗೆ ಪದೇಪದೆ ಒಡ್ಡಿಕೊಳ್ಳುವುದರಿಂದ ಕೂಡ ಶ್ರವಣಶಕ್ತಿ ನಷ್ಟ ಉಂಟಾಗಬಹುದು. ಆದ್ದರಿಂದ ಇಯರ್‌ಪ್ಲಗ್‌ಗಳು ಹೇಗೆ ಅನುಭವ ನೀಡುತ್ತವೆ ಅಥವಾ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳುವ ಕಾಲ ಕಳೆದಿದೆ ಎಂದು ನೀವು ಅಂದು ಕೊಂಡಿರುವಿರಾದರೆ ಇನ್ನೊಮ್ಮೆ ಆಲೋಚಿಸಿ.
ಡ್ರಮ್ಮರ್‌ಗಳ ಶ್ರವಣ ಆರೋಗ್ಯವನ್ನು ರಕ್ಷಿಸುವುದರಿಂದಾಗಿ ಮತ್ತು ಅವರು ದೀರ್ಘಕಾಲ ಸಂಗೀತ ನುಡಿಸಲು ಅನುವು ಮಾಡಿಕೊಡುವುದರಿಂದಾಗಿ ಡ್ರಮ್ಮರ್‌ಗಳಿಗೆ ಶ್ರವಣ ಆರೋಗ್ಯ ರಕ್ಷಣೆಯು ಬಹಳ ಮುಖ್ಯ. ಡ್ರಮ್ಮರ್‌ಗಳ ಪಾಲಿಗೆ ಶ್ರವಣ ಶಕ್ತಿ ನಷ್ಟವನ್ನು ತಡೆಯುವುದು ಅವರ ವೃತ್ತಿ ದೀರ್ಘಕಾಲ ಮುಂದುವರಿಯುವ ದೃಷ್ಟಿಯಿಂದ ನಿರ್ಣಾಯಕ.
ಆರೋಗ್ಯಯುತ ಕಿವಿಗಳೊಂದಿಗೆ ಸಂಗೀತವನ್ನು ದೀರ್ಘಕಾಲ ಮುಂದುವರಿಸಲು ಹೀಗೆ ಮಾಡಿ:– ಎಲ್ಲ ಡ್ರಮ್ಮರ್‌ಗಳು ಪ್ರತೀ ವರ್ಷ ನಿಯತವಾಗಿ ಶ್ರವಣ ಶಕ್ತಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ತಮ್ಮ ಶ್ರವಣಸಾಮರ್ಥ್ಯ ತೊಂದರೆ ಗೀಡಾಗದೆ ಆರೋಗ್ಯಯುತವಾಗಿದೆ ಎಂಬುದನ್ನು ಪರಿಶೀಲಿಸಲು ಇರುವ ಮಾರ್ಗವೆಂದರೆ ವರ್ಷದಿಂದ ವರ್ಷಕ್ಕೆ ಕೇಳಿಸಿಕೊಳ್ಳುವ ಧ್ವನಿಯ ಪ್ರಮಾಣವನ್ನು ಹೋಲಿಕೆ ಮಾಡಿಕೊಳ್ಳುವುದು.
– ಶ್ರವಣ ಶಕ್ತಿಯನ್ನು ಸರಿಯಾಗಿ ರಕ್ಷಿಸಿಕೊಳ್ಳುವುದು.
-ನಿಗಾವಣೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು.
– ಧ್ವನಿಯ ಮಟ್ಟವನ್ನು ವಿಶ್ಲೇಷಿಸುವುದು.ಸದ್ದಿನ ಸುರಕ್ಷಿತ ಮಟ್ಟದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಎರಡು ಮುಖ್ಯವಾದ ಸದ್ದಿನ ಸುರಕ್ಷಾ ಮಾಪನಗಳಿವೆ: ಒಎಸ್‌ಎಚ್‌ಎ ಸದ್ದಿನ ಸುರಕ್ಷಾ ಮಾಪನ: ಆಕ್ಯುಪೇಶನಲ್ ಸೇಫ್ಟಿ ಆ್ಯಂಡ್ ಹೆಲ್ತ್ ಅಡ್ಮಿನಿಸ್ಟ್ರೇಶನ್ (ಒಎಸ್‌ಎಚ್‌ಎ) ಪ್ರಕಾರ, 90 ಡೆಸಿಬಲ್‌ಗಳ ವರೆಗಿನ ಸದ್ದನ್ನು 5 ಡೆಸಿಬಲ್ ಕನ್ವರ್ಷನ್ ಫ್ಯಾಕ್ಟರ್‌ನೊಂದಿಗೆ 8 ತಾಸುಗಳ ಕಾಲ ಆಲಿಸಬಹುದು. ನಿಯೋಶ್ ಸದ್ದಿನ ಸುರಕ್ಷಾ ಮಾಪನ: ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಆಕ್ಯುಪೇಶನಲ್ ಸೇಫ್ಟಿ ಆ್ಯಂಡ್ ಹೆಲ್ತ್ (ನಿಯೋಶ್) ಪ್ರಕಾರ, 85 ಡೆಸಿಬಲ್ ವರೆಗಿನ ಸದ್ದನ್ನು 3 ಡೆಸಿಬಲ್ ಕನ್ವರ್ಷನ್ ಫ್ಯಾಕ್ಟರ್‌ನೊಂದಿಗೆ 8 ತಾಸುಗಳ ಕಾಲ ಸುರಕ್ಷಿತವಾಗಿ ಆಲಿಸಬಹುದು. -ಅಮಲ್ಡಾ ಬೈಜು
ಎಂಎಸ್‌ಸಿ ವಿದ್ಯಾರ್ಥಿನಿ,
ಆಡಿಯಾಲಜಿ ವಿಭಾಗ -ಭಾರ್ಗವಿ ಪಿ.ಜಿ.
ಅಸಿಸ್ಟೆಂಟ್ ಪ್ರೊಫೆಸರ್- ಸೀನಿಯರ್
ಸ್ಪೀಚ್ ಮತ್ತು ಹಿಯರಿಂಗ್ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ