Advertisement
ವಿಪರೀತ ಕುಡಿತ, ಅತೀ ಮಾತು, ಅಲ್ಲಲ್ಲಿ “ಖಂಡನೆ’ ಇಷ್ಟಕ್ಕೇ ಸೀಮಿತವಾಗಿರುವ ಪ್ರಥಮನ “ಹಾವ ಭಾವ’ ಸಹಿಸಿಕೊಂಡು ನೋಡುವುದೇ ದೊಡ್ಡ ಸಾಹಸ! ಇಲ್ಲೊಂದು ಗಟ್ಟಿತನದ ಕಥೆ ಇದೆ. ಅರ್ಥಪೂರ್ಣ ಸಂಭಾಷಣೆಯೂ ಇದೆ. ಆದರೆ, ಅದಕ್ಕೆ ಪೂರಕವಾಗಿರುವಂತಹ ದೃಶ್ಯಗಳನ್ನು ಪೋಣಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಆಗಾಗ, ಚೆಂದದ ಮಾತುಗಳು ಹರಿದಾಡುವುದು ಬಿಟ್ಟರೆ, ಉಳಿದದ್ದೆಲ್ಲವೂ “ಖಂಡನೆ’ಗೆ ಅರ್ಹ ಎನ್ನಬಹುದು.
Related Articles
Advertisement
ಅವನೂ ಹಿಂದೆ ದೇವ್‌ದಾಸ್ ಆಗಿ, ಪುನಃ ಹೊಸ ಹುಡುಗಿಯ ಲವ್‌ಗೆ ಗ್ರೀನ್‌ಸಿಗ್ನಲ್ ಕೊಡ್ತಾನೆ. ಆದರೆ, ಆ ಪ್ರೀತಿಗೆ ಅವಳು ಎರಡು ಷರತ್ತು ಹಾಕುತ್ತಾಳೆ. ಮೊದಲನೆಯದು ಕುಡಿಯೋದನ್ನು ಬಿಡಬೇಕು ಅನ್ನೋದು. ಎರಡನೇ ಷರತ್ತು ಹೇಳುವುದೇ ಬೇಡ ಅಂತ ಹೊರಡುತ್ತಾನೆ. ಮುಂದಾ… ಅವನು ಅವಳನ್ನು ಒಪ್ಪುತ್ತಾನೋ, ಇಲ್ಲವೋ ಅನ್ನೋದೇ ಕಥೆ. ಅಲ್ಲಲ್ಲಿ ಆಗಿರುವ ಎಡವಟ್ಟುಗಳನ್ನು ಹೊರತುಪಡಿಸಿದರೆ, “ದೇವ್ರಂಥ ಮನುಷ್ಯ’ ಸ್ವಲ್ಪ ಮೆದುಳಿಗೆ ಕೈ ಹಾಕಿ, ನೋಡುಗನ ತಾಳ್ಮೆ ಪರೀಕ್ಷಿಸಿ ಬಿಡುತ್ತಾನೆ.
ಎಲ್ಲವನ್ನೂ ಸಹಿಸಿಕೊಂಡು ಆ ಮನುಷ್ಯನನ್ನು ಧೈರ್ಯವಾಗಿ ನೋಡುವುದಾದರೆ, ಯಾವುದೇ ಆತಂಕಗಳಿಲ್ಲ. ಮೊದಲರ್ಧದಲ್ಲಿ ಕಾಣ ಸಿಗುವ ಕಥೆಯಲ್ಲಿ ವ್ಯಥೆಯದ್ದೇ ಕಾರುಬಾರು. ದ್ವಿತಿಯಾರ್ಧದಲ್ಲಿ ಬಿಚ್ಚಿಕೊಳ್ಳುವ ಇನ್ನೊಂದು ಕಥೆಯಲ್ಲೂ ಹೇಳಲಾಗದ ವ್ಯಥೆ. ನೀಟ್ ಎನಿಸುವ ಕಥೆಗೆ, ತಕ್ಕದೆನಿಸುವ ಪಾತ್ರ ಹೊಂದಿಸಿದ್ದರೆ ಚಿತ್ರಕ್ಕೆ ಒಳ್ಳೆಯ ಮಾರ್ಕ್ಸ್ ಕೊಡಬಹುದಿತ್ತು. ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವ ಅವಕಾಶವೂ ಅಲ್ಲಿತ್ತು.
ಆದರೆ, ಅಲ್ಲಿ ಖಂಡಿಸುವ ವ್ಯವಸ್ಥೆಯೇ ಹೆಚ್ಚಾಗಿ ಕಾಣುವುದರಿಂದ, ಅನಿವಾರ್ಯ ಎನ್ನುವಂತೆಯೇ, ಸಿಕ್ಕ ದೃಶ್ಯಗಳನ್ನು ಸುತ್ತಿರುವುದು ಎದ್ದು ಕಾಣುತ್ತದೆ. ಪ್ರಥಮ್ ಅವರನ್ನಿಲ್ಲಿ ಮಾತುಗಾರನಾಗಿ ಕಾಣಬಹುದೇ ಹೊರತು, ನಟನಾಗಿ ಅಲ್ಲ, “ಬಿಗ್ ಬಾಸ್’ ಮನೆಯಲ್ಲಿ ಹೇಗೆ “ಖಂಡಿಸ್ತೀನಿ’ ಅಂತ ಕ್ಯಾಮೆರಾಗಳ ಮುಂದೆ ಆರ್ಭಟಿಸುತ್ತಿದ್ದರೋ, ಇಲ್ಲೂ ಕೆಲವೆಡೆ ಅದೇ ಆರ್ಭಟಗಳಿವೆ. ಕುಡಿಯುವ ಪಾತ್ರ ಅಂದಮೇಲೆ, ದೇಹಕ್ಕೆ ಹಿಡಿತವೇ ಇರಲ್ಲ.
ಆದರೆ, ಇಲ್ಲಿ ಅವರು ಕಂಠ ಪೂರ್ತಿ ಕುಡಿದರೂ ಸ್ಟಡಿಯಾಗಿರ್ತಾರೆ ಅನ್ನೋದೇ ಅಚ್ಚರಿ! ಸುಚೇಂದ್ರ ಪ್ರಸಾದ್, ತಬಲ ನಾಣಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಶ್ರುತಿ, ವೈಷ್ಣವಿ ಸಿಕ್ಕ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಕೆಲಸ ಮಾಡಿದ್ದಾರೆ. ಪವನ್ ಗೆಳೆಯನಾಗಿ ಗಮನಸೆಳೆಯುವುದು ಬಿಟ್ಟರೆ, ಉಳಿದ್ಯಾವ ಪಾತ್ರಗಳು ಗುರುತಿಸಿಕೊಳ್ಳುವುದಿಲ್ಲ. ಪ್ರದ್ಯೋತನ್ ಸಂಗೀತದ ಎರಡು ಹಾಡು ಪರವಾಗಿಲ್ಲ. ಅರುಣ್ ಸುರೇಶ್ ಕ್ಯಾಮೆರಾ ಕೈಚಳಕಕ್ಕೂ ಇದೇ ಮಾತು ಅನ್ವಯ.
ಚಿತ್ರ: ದೇವ್ರಂಥ ಮನುಷ್ಯನಿರ್ಮಾಪಕರು: ಮಂಜುನಾಥ್ ಹೆಚ್.ಸಿ. ತಿಮ್ಮರಾಜು ಕೆ
ನಿರ್ದೇಶನ: ಕಿರಣ್ ಶೆಟ್ಟಿ
ತಾರಾಗಣ: ಪ್ರಥಮ್, ಶ್ರುತಿ, ವೈಷ್ಣವಿ, ಸುಚೇಂದ್ರ ಪ್ರಸಾದ್, ತಬಲನಾಣಿ, ರಾಕ್‌ಲೈನ್ ಸುಧಾಕರ್, ಪವನ್‌ಕುಮಾರ್ ಮುಂತಾದವರು * ವಿಜಯ್ ಭರಮಸಾಗರ