ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅವಧಿ ಮುಗಿದರೂ ಕಾನೂನು ಬಾಹಿರವಾಗಿ ನಗರದಲ್ಲೆ ವಾಸವಾಗಿರುವ ವಿದೇಶಿ ಪ್ರಜೆಗಳು ಮಾದಕ ವಸ್ತು ಮಾರಾಟ ಮತ್ತು ವೇಶ್ಯಾವಾಟಿಕೆ ಹಾಗೂ ಇತರೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ.
ವಿದೇಶಿ ಪಾಸ್ ಪೋರ್ಟ್ ನೊಂದಣಿ ಕೇಂದ್ರ(ಎಫ್ಆರ್‌ಆರ್‌ಒ)ದ ಮೂಲಗಳ ಪ್ರಕಾರ ನಗರದಲ್ಲಿ 28 ಸಾವಿರ ಮಂದಿ ವಿದೇಶಿ ಪ್ರಜೆಗಳು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಸುಮಾರು 1 ಸಾವಿರ ಮಂದಿ ಅಕ್ರಮವಾಗಿ ನೆಲೆಸಿದ್ದಾರೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿವೆ.
ಇತ್ತೀಚೆಗೆ ನಗರದಲ್ಲಿ ಅವಧಿ ಮುಗಿದರೂ ವಾಸವಾಗಿರುವ ವಿದೇಶಿ ಪ್ರಜೆಗಳ ಪುಂಡಾಟಿಕೆಯಿಂದ ತಲೆಕೆಡಿಸಿಕೊಂಡಿದ್ದ ನಗರ ಪೊಲೀಸ್ ಆಯುಕ್ತರು, ಸಿಸಿಬಿ ಸೇರಿ ಎಂಟು ವಿಭಾಗದ ಪೊಲೀಸರಿಗೆ ತಮ್ಮ ವಲಯಗಳಲ್ಲಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ವೈಟ್‌ಫೀಲ್ಡ್, ಈಶಾನ್ಯ ವಿಭಾಗ ಹಾಗೂ ಪೂರ್ವ ವಲಯಗಳಲ್ಲಿ ಅಕ್ರಮವಾಗಿ ವಾಸವಾಗಿದ್ದ ದಕ್ಷಿಣ ಆಫ್ರಿಕಾದ 107 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ.ಪರಮೇಶ್ವರ ಅಕ್ರಮವಾಗಿ ವಾಸವಾಗಿರುವ 107 ಮಂದಿಯನ್ನು ಗಡಿಪಾರು ಮಾಡುವುದಾಗಿ ಹೇಳಿದ್ದಾರೆ.
ಜಾಮೀನು ಬೇಡ
ಅಕ್ರಮ ದಂಧೆ ಹಾಗೂ ಅವಧಿ ಮೀರಿ ವಾಸವಾಗಿರುವ ವಿದೇಶಿಯರು ಪ್ರಕರಣಗಳಲ್ಲಿ ಜೈಲು ಸೇರಿದರೆ ಬಳಿಕ ಜಾಮೀನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಪ್ರಕರಣವನ್ನು ಬೇಗನೇ ಇತ್ಯರ್ಥ ಪಡಿಸಿಕೊಳ್ಳುವುದಕ್ಕೂ ನಿರಾಕರಿಸುತ್ತಿದ್ದಾರೆ. ಬೇಗ ಜಾಮೀನು ಪಡೆದರೆ ವಿದೇಶಕ್ಕೆ ಗಡಿಪಾರು ಮಾಡುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದಲ್ಲಿ ಅಕ್ರಮವಾಗಿ ವಾಸವಾಗಿರುವ ವಿದೇಶಿ ಪ್ರಜೆಗಳ ಬಗ್ಗೆ ಎಲ್ಲ ವಲಯಗಳ ಡಿಸಿಪಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾಗೆಯೇ ಸಿಸಿಬಿ ಕೂಡ ವಿದೇಶಿ ಪ್ರಜೆಗಳ ಮಾದಕ ವಸ್ತು ಮಾರಾಟ ದಂಧೆಯ ಮೇಲೆ ನಿಗಾವಹಿಸಿದೆ.
– ಸತೀಶ್ ಕುಮಾರ್, ಜಂಟಿ ಪೊಲೀಸ್ ಆಯುಕ್ತ, ಸಿಸಿಬಿ