Advertisement

ಅಧಿಕಾರಿಗಳ ಶ್ರಮದಿಂದ ಅತ್ಯುತ್ತಮ ಫ‌ಲಿತಾಂಶ

03:11 PM May 01, 2019 | Team Udayavani |

ರಾಮನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ಸಾಲಿನಲ್ಲಿ ರಾಜ್ಯದಲ್ಲಿ 17ನೇ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆ ಏಕಾಏಕಿ 2ನೇ ಸ್ಥಾನಕ್ಕೆ ಜಿಗಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕ ಪರಿಶ್ರಮವಿದೆ. ಈ ಪರಿಶ್ರಮಕ್ಕೆ ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಾಲೆಗಳ ಪೂರಕ ಸಹಕಾರ ಕೂಡ ಇತ್ತು.

Advertisement

ಅಧಿಕಾರಿಗಳಿಂದ ಶಾಲೆಗಳ ದತ್ತು: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಧಾರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಮುಲ್ಲೈ ಮುಹಿಲನ್‌ ಹಲವು ಸುಧಾರಣಾ ಕ್ರಮಗಳಿಗೆ ಸಲಹೆ ನೀಡಿದ್ದರು. ಕಳೆದ ಸಾಲಿನಲ್ಲಿ ಶೇ.60ಕ್ಕಿಂತ ಕಡಿಮೆ ಫ‌ಲಿತಾಂಶ ಕೊಟ್ಟ ಶಾಲೆಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗೆ ಒಂದೊಂದು ಶಾಲೆಯನ್ನು ದತ್ತು ತೆಗೆದುಕೊಳ್ಳುವಂತೆ ಆದೇಶಿಸಿದ್ದರು. ಹೀಗೆ ಶಾಲೆಯನ್ನು ದತ್ತು ಪಡೆದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ಕೊಟ್ಟು 10ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಅವರನ್ನು ಪ್ರೋತ್ಸಾಹಿಸಿದ್ದರು. ಕೆಲವು ಅಧಿಕಾರಿಗಳು ತಮಗೆ ಸುಲಭ ಎನಿಸಿದ ವಿಷಯದಲ್ಲಿ ಪಾಠವನ್ನು ಮಾಡಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸೇರಿದಂತೆ ತಾವು ಎದುರಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳು, ತಮಗಿದ್ದ ಸಮಸ್ಯೆಗಳು, ತೊಂದರೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದು, ಹೀಗೆ ಹಲವು ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ದು ಅಲ್ಲದೆ, ಅನೇಕ ಸಲಹೆ, ಸೂಚನೆಗಳನ್ನು ನೀಡಿದ್ದರು. ಸ್ವಯಂ ಸಿಇಒ ಅವರೇ ಚನ್ನಪಟ್ಟಣದ ಶಾಲೆಯೊಂದಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಸ್ಫೂರ್ತಿ ತುಂಬಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳ ಈ ಕ್ರಮದಿಂದ ವಿಶೇಷವಾಗಿ ಗ್ರಾಮೀಣ ಮಕ್ಕಳಲ್ಲಿ ಸ್ಫೂರ್ತಿ ತುಂಬಲು ಕಾರಣವಾಗಿತ್ತು.

ಟೊಯೋಟಾ ಸಹಕಾರದಲ್ಲಿ ಪ್ರಶ್ನೋತ್ತರ ಮಾಲಿಕೆ: ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಸರಾಸರಿಗಿಂತ ಕಡಿಮೆ ಇರುವ ವಿದ್ಯಾರ್ಥಿಗಳು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಪಟ್ಟಿ ಮಾಡಲಾಗಿತ್ತು. ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ ಸಹಕಾರದಲ್ಲಿ ‘ಪರಿಪೂರ್ಣ ಫ‌ಲಿತಾಂಶದೆಡೆ ನಮ್ಮ ನಡೆ’ ಎಂಬ ಘೋಷ ವಾಕ್ಯದಲ್ಲಿ ಯಶಸ್ಸು ಎಂಬ ವಿಷಯವಾರು ಕಿರು ಹೊತ್ತಿಗೆಗಳನ್ನು ಹೊರ ತಂದಿದ್ದರು. ಫ‌ಲಿತಾಂಶ ಉತ್ತಮೀಕರಣಕ್ಕಾಗಿ ಪ್ರತಿ ವಿಷಯದಲ್ಲಿನ ಪಠ್ಯಗಳನ್ನು ಪ್ರಶ್ನೋತ್ತರ ಮಾಲಿಕೆಯ ರೂಪದಲ್ಲಿ ಮುದ್ರಿಸಿದ ಕೈಪಿಡಿಯನ್ನು ಈ ವಿದ್ಯಾರ್ಥಿಗಳಿಗೆ ಕೊಡಲಾಗಿತ್ತು. ಸಂಪೂರ್ಣ ಪಠ್ಯವನ್ನು ಓದಿ ಗ್ರಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಪ್ರಶ್ನೆ ಮತ್ತು ಉತ್ತರವನ್ನು ಓದಿ ಇಡೀ ಪಠ್ಯವನ್ನು ಅರ್ಥ ಮಾಡಿಕೊಳ್ಳುವಂತೆ ಶಿಕ್ಷಕರು ಕೈಪಿಡಿಯನ್ನು ರೂಪಿಸಿದ್ದರು. ಈ ಕೈಪಿಡಿಯು ಫ‌ಲಿತಾಂಶ ಸುಧಾರಣೆಗೆ ಸಹಕಾರಿಯಾಗಿದೆ ಎಂದು ಕೆಲವು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ: ಇದಲ್ಲದೆ ಕಳೆದ ಸಾಲಿನಲ್ಲಿ ಶೇ.60ಕ್ಕಿಂತ ಕಡಿಮೆ ಫ‌ಲಿತಾಂಶ ಬಂದಿರುವ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯತ್ತ ಮುಖಮಾಡುವ ವಿಚಾರಗಳ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಲಾಗಿತ್ತು. ವಿಶ್ವಾಸ ಕಿರಣ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ನವೆಂಬರ್‌ 2017ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ವಿಶೇಷ ತರಗತಿ ಆಯೋಜಿಸಲಾಗಿತ್ತು. ಪೂರ್ವ ಸಿದ್ಧತಾ ಪರೀಕ್ಷೆಗಳ ಫ‌ಲಿತಾಂಶ ಶಾಲಾವಾರು ವಿಶೇಷ ಅಧ್ಯಯನ ಮಾಡಿ ಉಪಕ್ರಮಗಳನ್ನು ಕೈಗೊಳ್ಳಲಾಗಿತ್ತು. ಶಾಲಾ ಪೂರ್ವ ಮತ್ತು ಶಾಲಾ ನಂತರ ವಿಶೇಷ ತರಗತಿಗಳು, ಸುಮಾರು 40 ಶಾಲೆಗಳಲ್ಲಿ ರಾತ್ರಿ ವೇಳೆ ವಿಶೇಷ ತರಗತಿಗಳನ್ನು ಆಯೋಜಿಸಲಾಗಿತ್ತು.

ಆಯಾ ಶಾಲೆಗಳ ಶಿಕ್ಷಕರು ಆಗಾಗ್ಗೆ ವಿದ್ಯಾರ್ಥಿಗಳ ಪೋಷಕರೊಂದಿಗೆ ದೂರವಾಣಿಯ ಮೂಲಕ ಅಥವಾ ಖುದ್ದು ಮನೆಗೆ ಭೇಟಿ ಕೊಟ್ಟು ವಿದ್ಯಾರ್ಥಿಯ ಕಲಿಕೆಯ ಬಗ್ಗೆ ಚರ್ಚಿಸಿದ್ದಾರೆ. ಇಷ್ಟೇಲ್ಲ ಶ್ರಮದಿಂದಾಗಿಯೇ ಫ‌ಲಿತಾಂಶ ಸುಧಾರಣೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಮತ್ತು ಶಿಕ್ಷಕರ ಅಭಿಪ್ರಾಯ.

Advertisement

● ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next