ಹೊಸದಿಲ್ಲಿ : “ಉದ್ಯೋಗಗಳೆಲ್ಲ ಎಲ್ಲಿ ಹೋದವು ?’ ಎಂದು ಉದ್ಗರಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಶ್ನೆಯನ್ನು “ಅದ್ಭುತ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ದೇಶದಲ್ಲಿ ಉದ್ಯೋಗದ ಕೊರತೆ ಇರುವುದನ್ನು ಗಡ್ಕರಿ ಮತ್ತು ಅವರ ಬಿಜೆಪಿ ಸರಕಾರ ಈಗಲಾದರೂ ಒಪ್ಪಿಕೊಂಡಂತಾಗಿದೆ ಎಂದು ರಾಹುಲ್ ಟಾಂಗ್ ನೀಡಿದ್ದಾರೆ.
“ಉದ್ಯೋಗಗಳೆಲ್ಲ ಎಲ್ಲಿ ಹೋದವು ಎಂಬ ನಿಮ್ಮ ಪ್ರಶ್ನೆ ಅದ್ಭುತ, ಗಡ್ಕರಿ ಜೀ, ಪ್ರತಿಯೊಬ್ಬ ಭಾರತೀಯನು ಈಗ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾನೆ’ ಎಂದು ಸಚಿವ ಗಡ್ಕರಿಗೆ ರಾಹುಲ್ ಮಾತಿನ ಏಟು ನೀಡಿದರು.
“ಉದ್ಯೋಗಳೆಲ್ಲ ಕಡಿಮೆಯಾಗುತ್ತಿವೆ; ಮೀಸಲಾತಿಯಿಂದ ಯಾವುದೇ ಉದ್ಯೋಗ ಭರವಸೆ ದೊರಕದು’ ಎಂದು ಗಡ್ಕರಿ ಕಳೆದ ಶನಿವಾರ ಹೇಳಿದ್ದರು.
“ಮೀಸಲಾತಿಯನ್ನು ಸರಕಾರ ಕೊಟ್ಟಿತೆಂದೇ ಭಾವಿಸೋಣ. ಆದರೆ ವಾಸ್ತವದಲ್ಲಿ ಉದ್ಯೋಗಗಳೇ ಇಲ್ಲ. ಐಟಿ ಯಿಂದಾಗಿ ಬ್ಯಾಂಕುಗಳಲ್ಲಿ ಉದ್ಯೋಗ ಕಡಿಮೆಯಾಗಿದೆ. ಆರ್ಥಿಕ ಕಾರಣಕ್ಕೆ ಸರಕಾರದಲ್ಲಿ ನೇಮಕಾತಿಯನ್ನು ನಿಲ್ಲಿಸಲಾಗಿದೆ. ಹಾಗಿರುವಾಗ ಉದ್ಯೋಗಗಳು ಎಲ್ಲಿವೆ?’ ಎಂದು ಗಡ್ಕರಿ ಪ್ರಶ್ನಿಸಿದ್ದರು.
ಮರಾಠ ಮೀಸಲಾತಿ ಆಂದೋಲನ ಮತ್ತು ಮಹಾರಾಷ್ಟ್ರದ ಇತರ ಸಮುದಾಯಗಳು ಕೂಡ ಮೀಸಲಾತಿ ಆಗ್ರಹಿಸಿರುವುದಕ್ಕೆ ಗಡ್ಕರಿ ಪ್ರತಿಕ್ರಿಯಿಸುತ್ತಿದ್ದರು.
“ಕೋಟಾ ಬಗೆಗಿನ ಸಮಸ್ಯೆ ಏನೆಂದರೆ ಹಿಂದುಳಿಯುವಿಕೆಯೇ ಈಗ ರಾಜಕೀಯದ ವಿಷಯವಾಗಿದೆ. ಎಲ್ಲರೂ ತಾವು ಹಿಂದುಳಿದಿದ್ದೇವೆ ಅಂತಾರೆ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು ಬಲಿಷ್ಠರಿದ್ದಾರೆ. ಅವರೇ ರಾಜಕಾರಣದಲ್ಲಿ ಪಾರಮ್ಯ ಹೊಂದಿದ್ದಾರೆ; ಹಾಗಿದ್ದರೂ ಅವರು ತಾವು ಹಿಂದುಳಿದಿದ್ದೇವೆ ಅಂತಾರೆ” ಎಂದು ಗಡ್ಕರಿ ಹೇಳಿದ್ದರು.