ವಿಟ್ಲ: ವ್ಯಕ್ತಿಯ ಶಾರೀರಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಹಲವರ ಹವ್ಯಾಸ ಭಿನ್ನವಾಗಿದ್ದು, ಅವುಗಳಿಗೆ ಸೂಕ್ತ ವೇದಿಕೆ ನಿರ್ಮಾಣವಾಗಬೇಕು. ಕ್ರೀಡಾ ಇಲಾಖೆ ಗ್ರಾಮೀಣ ಭಾಗದ ಯುವಕ- ಯುವತಿಯರಿಗೆ ಉತ್ತಮ ಪ್ರೋತ್ಸಾಹ ನೀಡಿದೆ. ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು ಹೇಳಿದರು.
ಅವರು ರವಿವಾರ ಅಳಿಕೆ ಗ್ರಾಮದ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಳಿಕೆ ಚೆಂಡುಕಳ ನವಚೇತನ ಯುವತಿ ಮಂಡಲದ ಆತಿಥ್ಯದಲ್ಲಿ ದ.ಕ.ಜಿ.ಪಂ., ಬಂಟ್ವಾಳ ತಾ.ಪಂ., ಅಳಿಕೆ ಗ್ರಾ.ಪಂ. ಜಂಟಿ ಆಶ್ರಯದಲ್ಲಿ ನಡೆದ ವಿಟ್ಲ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ ಕ್ರೀಡಾಕೂಟಗಳಲ್ಲಿ ಮಾತ್ರ ಸಾಮರಸ್ಯ ಕಾಣಲು ಸಾಧ್ಯ. ಗ್ರಾಮ ಮಟ್ಟದಲ್ಲಿ ಇಂತಹ ಕ್ರೀಡೆಗಳನ್ನು ಹೆಚ್ಚಾಗಿ ಆಯೋಜಿಸುವಂತಾಗಬೇಕು. ಜಾತಿ, ಧರ್ಮದ ಅಡ್ಡಗೋಡೆಯನ್ನು ಮೆಟ್ಟಿ ನಿಲ್ಲುವಂತಾಗಬೇಕು. ಪ್ರತೀ ಗ್ರಾಮದಲ್ಲಿ ಯುವಕ -ಯುವತಿ ಮಂಡಲಗಳು ಸ್ಥಾಪನೆಯಾದಾಗ ಸೌಹಾರ್ದತೆ ಬೆಳೆಯುತ್ತದೆ. ಅಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಬೇಕು ಎಂದವರು ತಿಳಿಸಿದರು.
ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ.ಪೂ. ಕಾಲೇಜಿನ ಉಪನ್ಯಾಸಕ ಅಶೋಕ ಭಟ್, ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ, ಯುವ ಸಬಲೀಕರಣ, ಕ್ರೀಡಾ ಧಿಕಾರಿ ನವೀನ್ ಪಿ.ಎಸ್., ಅಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಸೆಲ್ವಿನಾ ಡಿ’ಸೋಜಾ, ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಗೋವಿಂದ ಪ್ರಕಾಶ್ ಎ.ಜಿ. ಮತ್ತಿತರರು ಉಪಸ್ಥಿತರಿದ್ದರು.
ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಸ್ವಾಗತಿಸಿದರು. ಅಳಿಕೆ ಚೆಂಡುಕಳ ನವಚೇತನ ಯುವತಿ ಮಂಡಲದ ಅಧ್ಯಕ್ಷೆ ಅಮಿತಾ ಸಂಜೀವ ಮಿತ್ತಳಿಕೆ ವಂದಿಸಿದರು. ಅಳಿಕೆ ಗ್ರಾ.ಪಂ. ಸದಸ್ಯ ಸದಾಶಿವ ಶೆಟ್ಟಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಅಳಿಕೆ ಚೆಂಡುಕಳ ನವಚೇತನ ಯುವತಿ ಮಂಡಲದ ಕೋಶಾಧಿಕಾರಿ ಲೀಲಾವತಿ ವಿ.
ಸಹಕರಿಸಿದರು.
ಗ್ರಾಮೀಣ ಕ್ರೀಡಾಕೂಟದಿಂದ ಹಲವು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಕಡಂಬುವಿನಂತಹ ತೀರಾ ಹಿಂದುಳಿದ ಪ್ರದೇಶದಲ್ಲಿ ಹುಟ್ಟಿ, ಬೆಳೆದ ನಿತಿನ್ ಪೂಜಾರಿ ಇಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಆದ್ದರಿಂದ ಇಲಾಖೆ ಸೂಕ್ತ ಕಾರ್ಯ ಮಾಡುತ್ತಿದೆ.
–
ಮಂಜುಳಾ ಮಾಧವ ಮಾವೆ
ಜಿ.ಪಂ. ಸದಸ್ಯೆ