ಧಾರವಾಡ: ರಾಷ್ಟ್ರದ ಉನ್ನತಿಗೆ ಬೇಕಿರುವ ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ಶ್ರೇಷ್ಠ ಗುಣಮಟ್ಟದ ಶಿಕ್ಷಣದ ಮೂಲಕ ಪಡೆಯಬಹುದಾಗಿದ್ದು, ಇದಕ್ಕೆ ಪೂರಕವಾಗಿ ವಿದ್ಯಾವಿಕಾಸದ ಪ್ರಯತ್ನಗಳು ಅಧಿಕಗೊಳ್ಳಬೇಕಾಗಿದೆ ಎಂದು ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್ ಹೇಳಿದರು.
ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ರಾಜ್ಯಮಟ್ಟದ ತರಬೇತಿ ಸಂಸ್ಥೆ ಸಿಸ್ಲೆಪ್‌ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನಮ್ಮ ಶಿಕ್ಷಕ-ಶಿಕ್ಷಕಿಯರಿಗೆ ಬೋಧನಾ ಮಾರ್ಗದರ್ಶಿಯಾಗಬಲ್ಲ ಶಿಕ್ಷಣ ಸಾಹಿತ್ಯ ಅಧಿಕವಾಗಿ ಲಭ್ಯವಾಗಬೇಕಾದ ಅಗತ್ಯವಿದೆ ಎಂದರು.
ನಮ್ಮ ಶಿಕ್ಷಕ-ಶಿಕ್ಷಕಿಯರು ವೃತ್ತಿ ಗೌರವ ಹಾಗೂ ವೃತ್ತಿ ಧರ್ಮ ಕಾಪಾಡಿಕೊಂಡು ಹೋಗುವಲ್ಲಿ ನೀತಿ ಸಂಹಿತೆ ಹೊಂದಿರಬೇಕು. ತರಗತಿ ಬೋಧನೆಯಲ್ಲಿ ಪಠ್ಯದ ಎಲ್ಲ ಅಂಶಗಳನ್ನು ನಿಖರ ನೆಲೆಯಲ್ಲಿ ಅರಿತು ಕಲಿಸುವುದನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು. ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂತಸದ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಶಿಕ್ಷಕರ ಶಿಕ್ಷಣ ಯೋಜನೆ ವತಿಯಿಂದ ಡಯಟ್ ಪ್ರಿನ್ಸಿಪಾಲ್ ಸುಮಂಗಳಾ ಕುಚಿನಾಡ ನೇತೃತ್ವದ ತಂಡ ಹೊರತಂದ ‘ಶಿಕ್ಷಣ ಕಾಶಿ’ ತ್ತೈಮಾಸಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಇದಾದ ಬಳಿಕ ಚಾರಿತ್ರಿಕ ಸಂಸ್ಥೆ ಡಯಟ್ ಆವರಣ ವೀಕ್ಷಿಸಿದ ಡಾ| ಶಾಲಿನಿ ಅವರು, ಡಯಟ್ ಅಭಿವೃದ್ಧಿ ಪಡಿಸಿರುವ ಭಾಷಾ ಪ್ರಯೋಗಾಲಯ, ಗಣಿತ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಇ-ವಿದ್ಯಾ ಅಕಾಡಮಿ, ನಲಿ-ಕಲಿ ತರಗತಿ, ಚಾರಿತ್ರಿಕ ಗ್ರಂಥಾಲಯ, ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ, ಡಾ|ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಜೀವನ ಶಿಕ್ಷಣ ಮಾಸಪತ್ರಿಕೆ ಕಾರ್ಯಾಲಯ, ವಿದ್ಯಾರ್ಥಿ ವಸತಿ ಸಮುತ್ಛಯಗಳೂ ಸೇರಿದಂತೆ ಎಲ್ಲ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಿದರು.
ರಾಜ್ಯ ಶಿಕ್ಷಣ ಇಲಾಖೆ ಆಯುಕ್ತ ಡಾ| ಎಂ.ಟಿ. ರೇಜು, ಧಾರವಾಡ ವಾಯವ್ಯ ಕರ್ನಾಟಕ ವಲಯದ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಎಚ್.ಎನ್. ಗೋಪಾಲಕೃಷ್ಣ, ಇಲಾಖೆಯ ಜಂಟಿ ನಿರ್ದೇಶಕ ಡಾ| ಬಿ.ಕೆ.ಎಸ್. ವರ್ಧನ್ ಹಾಗೂ ಎಂ.ಎಸ್. ಪ್ರಸನ್ನಕುಮಾರ್, ಎಂ.ಎಫ್. ಕುಂದಗೋಳ, ಡಯಟ್ ಪ್ರಿನ್ಸಿಪಾಲ್ ಸುಮಂಗಳಾ ಕುಚಿನಾಡ, ಡಿಡಿಪಿಐ ಎನ್.ಎಚ್. ನಾಗೂರ ಇದ್ದರು.