ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿಗಾಗಿ ಗುಡ್ಡ ಅಗೆದ ಪರಿಣಾಮ ಬಂಟ್ವಾಳ ತಾಲೂಕಿನ ಗಡಿಯಾರ ಸರಕಾರಿ ಶಾಲೆ ಹಾಗೂ ವಿದ್ಯುತ್ ತಂತಿ ಹಾದು ಹೋಗಿರುವ ಟವರ್ ಕುಸಿಯುವ ಭೀತಿ ಉಂಟಾಗಿದ್ದು, ಅಪಾಯದ ಭೀತಿ ಹಿನ್ನೆಲೆಯಲ್ಲಿ ಸೋಮವಾರ ಶಾಲೆಗೆ ರಜೆ ನೀಡಲಾಗಿತ್ತು.
ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ತಡೆಗೋಡೆ ನಿರ್ಮಾಣಕ್ಕಾಗಿ ಜು. 4ರಿಂದಲೇ ಕಾಮಗಾರಿ ಆರಂಭಿಸಲು ಆದೇಶ ನೀಡಲಾಗಿದೆ.
ಸರಕಾರಿ ಶಾಲೆ ಹಾಗೂ ವಿದ್ಯುತ್ ಟವರ್ ಇರುವ ಪ್ರದೇಶದಲ್ಲಿ ಅಂಚಿನ ವರೆಗೂ ಹೆದ್ದಾರಿ ಕಾಮಗಾರಿ ಗಾಗಿ ಅಗೆಯಲಾಗಿದ್ದು, ಮಳೆಯ ಪರಿಣಾಮ ಅಗೆದಿರುವ ಪ್ರದೇಶದಲ್ಲಿ ಮಣ್ಣು ಕುಸಿಯ ಲಾರಂಭಿಸಿದೆ. ಶಾಲೆ ಮತ್ತು ಟವರ್‌ಗೆ ಅಪಾಯದ ಭೀತಿ ಎದುರಾದಾಗ ಆಕ್ರೋಶಗೊಂಡ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿ ಗಳಿಗೆ ದೂರು ನೀಡಿದರು.
ಬಂಟ್ವಾಳ ತಹಶೀಲ್ದಾರ್ ಎಸ್.ಬಿ. ಕೂಡಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಸಹಿತ ಹಲವು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು, ಗುತ್ತಿಗೆ ಸಂಸ್ಥೆ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್‌ನ ಅಧಿಕಾರಿಗಳು ಸ್ಥಳದಲ್ಲಿದ್ದು, ತಡೆಗೋಡೆ ನಿರ್ಮಿಸಿಕೊಡುವ ಭರ ವಸೆ ನೀಡಿದ್ದಾರೆ.
ವಿದ್ಯುತ್ ಟವರ್ ಕೆಪಿಟಿಸಿಎಲ್ 220 ಕೆವಿ ನೆಟ್ಲ ಮುಟ್ನೂರು ಸಬ್‌ಸ್ಟೇಶನ್‌ಗೆ ಸೇರಿದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಟವರ್ ಹತ್ತಿರದ ವರೆಗೂ ಮಣ್ಣು ಅಗೆದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ತತ್‌ಕ್ಷಣ ಪರಿಹಾರ ಕ್ರಮಕ್ಕೆ ಸೂಚಿಸಿದರು. ಅಪಾಯ ಸಂಭವಿಸ ದಂತೆ ಕೆಎನ್‌ಆರ್‌ನವರು ಕಾಮಗಾರಿ ಆರಂಭಿಸಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.