Advertisement

ಪೂರ್ವ ನಿಗದಿಯಂತೆ ಎಸೆಸೆಲ್ಸಿ ಪರೀಕ್ಷೆ

01:15 AM Jun 21, 2020 | Sriram |

ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆಯಲ್ಲಿ ಆಗಿರುವ ಯಾವುದೇ ನ್ಯೂನತೆಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ. ಪೂರ್ವ ನಿಗದಿಯಂತೆ ಪರೀಕ್ಷೆ ನಡೆಯಲಿದ್ದು ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಯು ಪರೀಕ್ಷೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಲೋಪ ಎಸಗಿದ ಕೇಂದ್ರಗಳ ಸಿಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಪೂರಕ ಪರೀಕ್ಷೆಯಲ್ಲಿ ಅವಕಾಶ
ಎಸೆಸೆಲ್ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿಯ ಪೋಷಕ, ಪೋಷಕರು ಅಥವಾ ಜತೆಯಲ್ಲಿ ವಾಸಿಸುವ ಹತ್ತಿರದ ಸಂಬಂಧಿಕರು ಕೋವಿಡ್‌-19 ಹಿನ್ನೆಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಲ್ಲಿ ಅಂಥ ಪ್ರಕರಣಗಳನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚಲಾಗುತ್ತಿದೆ. ಈ ಸಂಬಂಧ ಲಭ್ಯವಾಗಿರುವ ಮಾಹಿತಿಯ ಆಧಾರದಲ್ಲಿ ಶಿಕ್ಷಣ ಇಲಾಖೆಯ ದಾಖಲೆಗಳೊಂದಿಗೆ ತಾಳೆ ಮಾಡಿ ಅಂಥ ವಿದ್ಯಾರ್ಥಿಗಳಿಗೆ ಜೂ. 25ರಿಂದ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ವಿನಾಯಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಂಟೈನ್ಮೆಂಟ್‌ ವಲಯದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಅಂಥ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ ಮತ್ತು ರೆಗ್ಯುಲರ್‌ ವಿದ್ಯಾರ್ಥಿಯಾಗಿಯೇ ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದರು.

ನ್ಯಾಯಾಲಯದ ಸೂಚನೆಯಂತೆ ಪರೀಕ್ಷೆ ನಡೆಯಲಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ವಿದ್ಯಾರ್ಥಿ ತಲಾ 2 ಮಾಸ್ಕ್ ಪಡೆಯಲಿದ್ದಾರೆ ಎಂದರು.

ಪರೀಕ್ಷೆ ನಡೆಸದಂತೆ
ಎನ್‌ಎಸ್‌ಯುಐ ಮನವಿ
ರಾಜ್ಯದಲ್ಲಿ ಕೋವಿಡ್‌ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬಾರದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ನಿವಾಸದ ಎದುರು ಎನ್‌ಎಸ್‌ಯು ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ವಿದ್ಯಾರ್ಥಿನಿಗೆ ಕೋವಿಡ್‌ ಇಲ್ಲ
ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆಗೆ ಬೆಂಗಳೂರಿನ ಜಯನಗರದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಕ್ವಾರಂಟೈನ್‌ ಮೊಹರನ್ನು ಅಳಿಸಿಕೊಂಡು ಹಾಜರಾಗಿದ್ದಾಳೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದಾಗಿದೆ ಮತ್ತು ಆ ವಿದ್ಯಾರ್ಥಿನಿಯ ಕೊರೊನಾ ವರದಿ ನೆಗೆಟಿವ್‌ ಬಂದಿದೆ ಎಂದು ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next