ನೆಲಮಂಗಲ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ವಾಪಸ್ ಪಡೆದು ಪರೀಕ್ಷೆ ಮುಂದೂಡಲಾಗಿದೆ ಎಂದು ಶಾಕ್ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪಿಪಿಎ (ಪ್ರಿನ್ಸಿಪಾಲ್ ಮತ್ತು ಪ್ರಾಕ್ಟೀಸ್ ಆಫ್ ಆಡಿಟಿಂಗ್) ಪರೀಕ್ಷೆಯು ಆನ್‌ಲಾಕ್ ಆರಂಭವಾದ ನಂತರ ಮೂರ್‍ನಾಲ್ಕು ಬಾರಿ ಮುಂದೂಡಿ ಅಂತಿಮ ಪರೀಕ್ಷೆಯಾಗಿ ಅ.12 ಸೋಮವಾರ 2 ಗಂಟೆಗೆ ನಿಗದಿಯಾಗಿತ್ತು. ಅದರಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ಪರೀಕ್ಷೆ ಬರೆಯು ವಾಗ ಅರ್ಧದಲ್ಲಿ ಸ್ಥಗಿತಗೊಳಿಸಿದ್ದಾರೆ.
ಚೆಲ್ಲಾಟ: ಒಂದು ಪರೀಕ್ಷೆ ನಡೆಸಲು ಮೂರ್‍ನಾಲ್ಕು ಭಾರಿ ಮೂಂದೂಡಿ ಕೊನೆಯಲ್ಲಿ ಮೂಕ್ಕಾಲು ಭಾಗ ಪರೀಕ್ಷೆ ಬರೆದ ನಂತರ ಪರೀಕ್ಷೆ ಸ್ಥಗಿತಗೊಳಿಸಿ ಮುಂದೂಡಲಾಗಿದೆ ಎಂದು ಉತ್ತರ ಹಾಗೂ ಪ್ರಶ್ನೆ ಪತ್ರಿಕೆ ವಾಪಸ್ ಪಡೆದುಕೊಂಡಿದ್ದಾರೆ. ನಮ್ಮ ಪರಿಶ್ರಮ ಸಂಪೂರ್ಣ ವ್ಯರ್ಥವಾಗಿದ್ದು, ವಿದ್ಯಾರ್ಥಿಗಳ ಜತೆ ವಿವಿಚೆಲ್ಲಾಟವಾಡುತಿದೆ. ರಾಜ್ಯದ ಎಲ್ಲಾ ವಿವಿಗಳಲ್ಲಿ ಅಂತಿಮ ವರ್ಷದ ಪದವಿ ಪರೀಕ್ಷೆಗಳು ಮುಗಿದಿದ್ದು ಬೆಂಗಳೂರು ವಿವಿಯಲ್ಲಿ ಮಾತ್ರ ಬಾಕಿ ಇದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ತಡವಾಗಿ ಬಂದ ಪರಿ ವೀಕ್ಷಕ: ನೆಲಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ 178ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ 1 ಗಂಟೆಗಳ ಕಾಲ ಪರೀಕ್ಷೆ ಬರೆದ ನಂತರ3.15ರ ಸುಮಾರಿಗೆ ಬಂದ ಪರಿವೀಕ್ಷಕ ನರಸಿಂಹಮೂರ್ತಿ ಸೂಚನೆಯ ಮೇರೆಗೆ ಪಿಪಿಎ ಪರೀಕ್ಷೆ ಸ್ಥಗಿತ ಗೊಳಿಸಲಾಯಿತು ಎಂದು ಕಾಲೇಜಿನ ಅಧ್ಯಾಪಕರು ತಿಳಿಸಿದ್ದು, ಪರಿವೀಕ್ಷಕರು ತಡವಾಗಿ ಮಾಹಿತಿ ನೀಡಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಕಣ್ಣೀರಿಟ್ಟ ವಿದ್ಯಾರ್ಥಿಗಳು: ಕೋವಿಡ್ ಆತಂಕದಲ್ಲಿಯೂ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗೆ ತಯಾರಿ ಮಾಡಿಕೊಂಡು ಬಂದು ಪರೀಕ್ಷೆ ಬರೆಯುವಾಗ ಅರ್ಧಕ್ಕೆ ಉತ್ತರ ಪತ್ರಿಕೆ ಪಡೆದು ಪರೀಕ್ಷೆ ಮುಂದೂಡಲಾಗಿದೆ ಎಂದರೆ ನಮ್ಮ ಭವಿಷ್ಯದ ಗತಿ ಏನು. ಬೆಂಗಳೂರು ವಿವಿ ನಮ್ಮ ಭವಿಷ್ಯದ ಜತೆ ಚೆಲ್ಲಾಟವಾಡುತಿದೆ ಎಂದು ವಿದ್ಯಾರ್ಥಿಗಳು ಕಣ್ಣೀರಿಟ್ಟರು. ದಿನಾಂಕ ಪ್ರಕಟಿಸದ ವಿವಿ: ಪಿಪಿಎ ಪರೀಕ್ಷೆ ಅರ್ಧಕ್ಕೆ ಸ್ಥಗಿತಗೊಳಿಸಿದ ಬೆಂ.ವಿವಿ ಮುಂದಿನ ಪರೀಕ್ಷೆ ದಿನಾಂಕ ಪ್ರಕಟಗೊಳಿಸದ ಕಾರಣ ವಿದ್ಯಾರ್ಥಿಗಳಲ್ಲಿ ಆತಂಕದ ಜತೆ ಗೊಂದಲ ಹೆಚ್ಚಾಗಿದ್ದು ವಿವಿ ನಡೆಗೆ ವಿದ್ಯಾರ್ಥಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ಮುಂದೂಡಿರುವ ಬಗ್ಗೆ 2 ಗಂಟೆಗೆ ಮೊಬೈಲ್‌ಗೆ ಸಂದೇಶ ಕಳುಹಿಸಲಾಗಿದೆ. ಆದರೆ ಮೊಬೈಲ್ ಪರೀಕ್ಷಾ ಕೇಂದ್ರದ ಬಳಿ ತರುವುದಿಲ್ಲ. ನನಗೆ 3.15ರ ಸುಮಾರಿಗೆ ಮುಂದೂಡಿರುವ ಬಗ್ಗೆ ಮಾಹಿತಿ ತಿಳಿಯಿತು. ತಕ್ಷಣ ಪರೀಕ್ಷೆ ಸ್ಥಗಿತಗೊಳಿಸಲಾಯಿತು.
– ನರಸಿಂಹಮೂರ್ತಿ, ಪರೀಕ್ಷಾ ಕೇಂದ್ರದ ಪರಿ ವೀಕ್ಷಕ
ಪರೀಕ್ಷೆ ಮುಗಿಯಿತು ಫಲಿತಾಂಶ ಶೀಘ್ರದಲ್ಲಿ ಬರಲಿದೆ ಮುಂದಿನ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು ಎನ್ನುವಷ್ಟರಲ್ಲೇ ಪ್ರಶ್ನೆ ಹಾಗೂ ಉತ್ತರ ಪತ್ರಿಕೆ ಪಡೆದು ಪರೀಕ್ಷೆ ಸ್ಥಗಿತ ಎಂದು ಹೇಳಿ ನಮ್ಮ ಭವಿಷ್ಯದ ಜತೆ ಚೆಲ್ಲಾಟಆಡುತ್ತಿರುವ ವಿವಿ ನಡೆ ಸರಿಯಲ್ಲ. ಪರೀಕ್ಷೆಯಲ್ಲಿ ಎಲ್ಲರನ್ನು ಉತೀರ್ಣ ಮಾಡಿ ಫಲಿತಾಂಶ ನೀಡಲಿ.
–ರಾಜೇಶ್, ಪರೀಕ್ಷೆ ಬರೆದ ವಿದ್ಯಾರ್ಥಿ