ಹಾವೇರಿ: ಕೋವಿಡ್ ಪ್ರಮಾಣಿಕೃತ ಮಾರ್ಗಸೂಚಿಯಂತೆ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಜೂ. 25ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಪಾಲಕರು ಹಾಗೂ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ನಿಶ್ಚಿತೆಯಿಂದ ಪರೀಕ್ಷೆ ಬರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 22,511 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ. 407 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡು ವಲಸೆ ಹೋಗಿದ್ದಾರೆ. 695 ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಂದ ಹಾವೇರಿಯಲ್ಲಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 75 ಮುಖ್ಯ ಪರೀಕ್ಷಾ ಕೇಂದ್ರಗಳು, 15 ಬ್ಲಾಕ್ ಕೇಂದ್ರಗಳನ್ನು ಗುರುತಿಸಲಾಗಿದೆ. 1420 ಕೊಠಡಿಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ. 1006 ಕೊಠಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 75 ಮುಖ್ಯ ಕೊಠಡಿಗಳಿಗೆ, 91 ಕೇಂದ್ರಗಳ ಕಾರಿಡಾರ್ ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 75 ಮುಖ್ಯ ಅಧಿಧೀಕ್ಷಕರು, 75 ಪ್ರಶ್ನೆ ಪತ್ರಿಕೆ ಪಾಲಕರು, 29 ಮಾರ್ಗಗಳಿಗೆ ಮಾರ್ಗಾಧಿಕಾರಿಗಳು ಹಾಗೂ 75 ಮೊಬೈಲ್ ಸ್ವಾಧಿನಾಧಿಕಾರಿಗಳು ಹಾಗೂ 75 ಸ್ಥಾನಿಕ ಜಾಗೃತದಳದ ಅಧಿಕಾರಿಗಳನ್ನು ನೇಮಕಮಾಡಲಾಗಿದೆ.
ಸಾರಿಗೆ ವ್ಯವಸ್ಥೆ: ನೋಂದಾಯಿತ ಯಾವುದೇ ವಿದ್ಯಾರ್ಥಿಗಳು ಸಾರಿಗೆ ಅನಾನುಕೂಲತೆಗಳಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆಯಾಗದಂತೆ ಮುಂಜಾಗ್ರತವಾಗಿ ಎಲ್ಲ ವಿದ್ಯಾರ್ಥಿಗಳನ್ನು ಸಂಪರ್ಕಸಾಧಿಸಿ ಸಾರಿಗೆ ವ್ಯವಸ್ಥೆಯನು ಖಚಿತಪಡಿಸಿಕೊಳ್ಳಲಾಗಿದೆ. 22,511 ವಿದ್ಯಾರ್ಥಿಗಳ 5453 ವಿದ್ಯಾರ್ಥಿಗಳು ಕಾಲ್ನಡಿಗೆಯಿಂದ ,2110 ವಿದ್ಯಾರ್ಥಿಗಳು ಬೈಸಿಕಲ್ ಮೂಲಕ, 10,933 ವಿದ್ಯಾರ್ಥಿಗಳು ಕಾರು, ಬೈಕ್ ಮೂಲಕ ಸ್ವಂತ ವಾಹನ ಬಳಿಸಿ ಬರಲಿದ್ದಾರೆ. 720 ಮಕ್ಕಳಿಗೆ ಖಾಸಗಿ ಶಾಲೆಯವರು ತಮ್ಮ ವಾಹನ ಮೂಲಕ ಕರೆತರಲು ಖಚಿತಪಡಿಸಿದ್ದಾರೆ. 1440 ಮಕ್ಕಳು ಶಾಲಾ ವಾಹನದ ಮೂಲಕ ಬರಲಿದ್ದಾರೆ. 1846 ಮಕ್ಕಳು ಕೆ.ಎಸ್.ಆರ್.ಟಿ.ಸಿ. ರೂಟ್ ಬಸ್ ಗಳಲ್ಲಿ ಬರಲಿದ್ದಾರೆ. ಈ ಕುರಿತಂತೆ ಸಾರಿಗೆ ಇಲಾಖೆಯ ಸಮನ್ವಯದಿಂದ ಸಮಯಕ್ಕೆ ಬಸ್ ಬರುವ ಕುರಿತಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಜ್ವರ ತಪಾಸಣೆ: ಕೋವಿಡ್ ಮಾರ್ಗಸೂಚಿಯಂತೆ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಕೇಂದ್ರದಲ್ಲಿ ಜ್ವರ ತಪಾಸಣೆ ನಡೆಸಿ ಸ್ಯಾನಿಟೈಸರ್ ಬಳಸಿ ಕೈ ಶುದ್ಧತೆಮಾಡಿಕೊಂಡು ಮಾಸ್ಕ್ ಧರಿಸಿ ಕೊಠಡಿಯೊಳಗೆ ಸಾಮಾಜಿಕ ಅಂತರಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ಅಗತ್ಯ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಶಿಸ್ತುಬದ್ಧವಾಗಿ ನಿಯಮ ಪಾಲನೆಗೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಈಗಾಗಲೇ ಎಲ್ಲ ಪರೀಕ್ಷಾ ಕೇಂದ್ರಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪರೀಕ್ಷೆ ಮುಗಿಯುವರೆಗೂ ಪ್ರತಿ ದಿನ ಸ್ಯಾನಿಟೈಸ್ ಮಾಡಲಾಗುವುದು. ಜ್ವರ ಲಕ್ಷಣ ಇರುವವರಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ ಪರೀಕ್ಷೆ ಆರಂಭವಾಗುವ ಒಂದೂವರೆತಾಸು ಮೊದಲು ಅಂದರೆ ಬೆಳಗ್ಗೆ 10:30ಕ್ಕೆ ಪರೀಕ್ಷೆ ಆರಂಭವಾದರೆ 9 ಗಂಟೆಯೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ತಪಾಸಣೆಗೊಳಗಾಗಬೇಕು. ತಪಾಸಣೆ ಬಳಿಕವೇ ಕೊಠಡಿಯೊಳಗೆ ಪ್ರವೇಶ ಮಾಡಬೇಕು. ಬರುವಾಗ ಮತ್ತು ಹೋಗುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರತಿ ಸಾಲಿನಲ್ಲಿ ನಿಂತು ತಪಾಸಣೆ ನಂತರ ಮಾಸ್ಕ್ ಧರಿಸಿ ಒಳಗಡೆಹೋಗಬೇಕು. ಈಗಾಗಲೇ ಉಚಿತ ಮಾಸ್ಕ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಮನೆಯಿಂದಲೇ ಕುಡಿಯುವ ನೀರಿನ ಬಾಟಲಿಗಳನ್ನು ತಂದು ಪ್ರತ್ಯೇಕವಾಗಿ ಬಳಸಲು ಸಲಹೆ ನೀಡಲಾಗಿದೆ ಎಂದು ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ತಿಳಿಸಿದ್ದಾರೆ.
ಪರೀಕ್ಷಾ ವೇಳಾಪಟ್ಟಿ : ಜೂ. 25ರಂದು ದ್ವಿತೀಯ ಭಾಷೆ, ಜೂ. 27ರಂದು ಗಣಿತ, ಜೂ. 29ರಂದು ವಿಜ್ಞಾನ, ಜು. 1ರಂದು ಸಮಾಜ ವಿಜ್ಞಾನ, ಜು. 2ರಂದು ಪ್ರಥಮ ಭಾಷೆ ಹಾಗೂ ಜು. 3ರಂದು ತೃತೀಯ ಭಾಷೆ ಪರೀಕ್ಷೆಗಳು ಬೆಳಗ್ಗೆ 10:30ರಿಂದ ನಡೆಯಲಿವೆ.
ಸಹಾಯವಾಣಿ : ಸಾರ್ವಜನಿಕರ ಸಂಪರ್ಕಕ್ಕೆ 9480574530 ಸಹಾಯವಾಣಿ ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಆರೋಗ್ಯ ಸಹಾಯಕರ ನೇಮಕ, ಸ್ಥಳೀಯ ಸಂಸ್ಥೆಗಳಿಂದ ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಸೇರಿದಂತೆ ಗರಿಷ್ಠ ಸುಕರÒತಾ ಮುನ್ನೆಚ್ಚರಿಕೆ ಕ್ರಮಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಿಷೇಧಾಜ್ಞೆ ಜಾರಿ : ಪರೀಕ್ಷಾ ಕೇಂದ್ರದ ಸುತ್ತಲೂ 200 ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಝರಾಕ್ಸ್ ಸೆಂಟರ್ ಹಾಗೂ ಟೈಪಿಂಗ್ ಸೆಂಟರ್ ಮುಚ್ಚಲು ಆದೇಶಿಸಲಾಗಿದೆ ಹಾಗೂ ಮೊಬೈಲ್ ಬಳಕೆ ಸಹ ನಿಷೇಧಿಸಲಾಗಿದೆ. ಪಾರದರ್ಶಕ, ನಕಲು ಮುಕ್ತ ಸುವ್ಯವಸ್ಥಿತ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.