ಬೆಳಗಾವಿ: ಹೊಸ ಹೊಸ ಪ್ರಯೋಗಗಳ ಮೂಲಕ ವಿಶೇಷ ತರಗತಿ, ವಿವಿಧ ವಿಷಯಗಳ ಮನವರಿಕೆ ಮಾಡಿಕೊಟ್ಟು ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಮಕ್ಕಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧಗೊಳಿಸಿದ್ದು, ಮಾ. 27ರಿಂದ ಏಪ್ರಿಲ್ 9ರ ವರೆಗೆ ನಡೆಯಲಿರುವ ಪರೀಕ್ಷೆಗಾಗಿ ಮಕ್ಕಳು ಕಾಯುತ್ತಿದ್ದಾರೆ.
ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಅಗ್ರಸ್ಥಾನಕ್ಕೇರಲು ಎರಡೂ ಜಿಲ್ಲೆಗಳು ಜೋರು ತಯಾರಿ ನಡೆಸಿವೆ. ಕಳೆದ ವರ್ಷ ಬೆಳಗಾವಿ ಶೇ. 77.43ರಷ್ಟು ಫಲಿತಾಂಶ ಪಡೆದು 24ನೇ ಸ್ಥಾನದಲ್ಲಿತ್ತು. ಚಿಕ್ಕೋಡಿ ಶೇ. 84.09ರಷ್ಟು ಫಲಿತಾಂಶ ಪಡೆದು ಆರನೇ ಸ್ಥಾನದಲ್ಲಿತ್ತು. ಈ ಸಲ ಫಲಿತಾಂಶ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಶಿಕ್ಷಣ ಇಲಾಖೆ ಮಕ್ಕಳನ್ನು ಹದಗೊಳಿಸುತ್ತಿದೆ.
ಹೆಚ್ಚೆಚ್ಚು ತರಗತಿ ನಡೆಸುವುದು, ಗುಂಪು ಅಧ್ಯಯನ, ಗುರೂಜಿ ಬಂದರು ಗುರುವಾರ, ರಂಗೋಲಿ ಹಾಗೂ ಮೆಹಂದಿ ಮೂಲಕ ಗಣಿತ ವಿಷಯಗಳ ವಿಶೇಷ ತಯಾರಿ, ಪ್ರಾಣಾಯಾಮ, ಹೆಚ್ಚುವರಿ ತರಗತಿಗಾಗಿ ರಾತ್ರಿ ಓದು, ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ವಿತರಣೆ, ಚಿತ್ರ ಬಿಡಿಸುವುದು, ಪತ್ರ ಬರೆದು ರೂಢಿಸಿಕೊಳ್ಳುವುದು, ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಅಭ್ಯಾಸ ಮಾಡಿಸುವುದು ಹೀಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮಕ್ಕಳು ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಜಿಲ್ಲೆಯ ಸ್ಥಾನವನ್ನು ರಾಜ್ಯದಲ್ಲಿ ಅಗ್ರಸ್ಥಾನಕ್ಕೇರಿಸಲು ಅಧಿಕಾರಿಗಳು ವಿನೂತನ ಪ್ರಯೋಗಗಳಿಗೆ ಕೈ ಹಾಕಿದ್ದಾರೆ.
ಪ್ರವಾಹದಿಂದ ಚೇತರಿಕೆ: ಕಳೆದ ಆಗಸ್ಟ್‌ನಲ್ಲಿ ಅಪ್ಪಳಿಸಿದ ಪ್ರವಾಹದಲ್ಲಿ ಅನೇಕ ಶಾಲೆಗಳು ಹಾನಿಗೊಳಗಾಗಿದ್ದವು. ನೆರೆ ಹಾಗೂ ಅತಿವೃಷ್ಟಿಯಿಂದ ಮನೆ ಹಾಗೂ ಶಾಲೆಗಳಲ್ಲಿದ್ದ ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಸುಮಾರು ಮೂರು ತಿಂಗಳವರೆಗೆ ಮಕ್ಕಳ ಅಧ್ಯಯನಕ್ಕೆ ಭಾರೀ ಹೊಡೆತ ಬಿದ್ದಿತ್ತು. ಇದನ್ನು ಸರಿಪಡಿಸಲು ಇಲಾಖೆ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಸಿದ್ಧಗೊಳಿಸಲು ಶ್ರಮಿಸುತ್ತಿದೆ.
ಪ್ರವಾಹದಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅನೇಕ ಶಾಲೆಗಳು ಹಾನಿಗೊಳಗಾಗಿದ್ದವು. ಹೀಗಾಗಿ ಈ ಶಾಲೆಗಳ ಬಗ್ಗೆ ವಿಶೇಷ ಗನಹರಿಸಿರುವ ಇಲಾಖೆ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರವಾಹದ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗಿದ್ದನ್ನು ಸರಿಪಡಿಸಲು ಮೂರ್‍ನಾಲ್ಕು ತಿಂಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಳೆದ ವರ್ಷ 6ನೇ ಸ್ಥಾನಕ್ಕಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯನ್ನು ಈ ಬಾರಿ ಮತ್ತಷ್ಟು ಮೇಲಕ್ಕೆ ತರಲು ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಒತ್ತು ನೀಡಿದ್ದಾರೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 27 ಅಂಶಗಳ ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ. ಪ್ರಶ್ನೆ ಕೇಳಲು ಹಿಂಜರಿಯುವ ಮಕ್ಕಳಿಗಾಗಿ ಪ್ರಶ್ನೆ ಪೆಟ್ಟಿಗೆ ನಿರ್ವಹಿಸುವುದು, ಪ್ರತಿ ಪಾಠದ ಪರಿಕಲ್ಪನೆಗಳನ್ನು ಮನನ ಮಾಡಿಸುವುದು, ರಸಪ್ರಶ್ನೆ ಕಾರ್ಯಕ್ರಮ, ತಾಲೂಕಿನಲ್ಲಿ ವಿಷಯವಾರು ವಿಷಯ ವೇದಿಕೆ, ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಓದಲು ತಿಳಿಸುವುದು, ತಾರ್ಕಿಕ ಶಕ್ತಿ, ಸೃಜನಶೀಲತೆ ಹೆಚ್ಚಿಸುವುದು, ಬಹು ಆಯ್ಕೆ ಹಾಗೂ ಕಿರು ಉತ್ತರ ಕುರಿತು ನೀಲನಕಾಶೆಯನುಸಾರ ಪ್ರಶ್ನೆ ಪತ್ರಿಕೆ ತಯಾರಿಸಿ ಉತ್ತರಿಸಲು ಸಮರ್ಥರಾಗುವಂತೆ ಬೋಧನೆ ಮಾಡುವುದು, ಮೂರು ಸರಣಿ ಪರೀಕ್ಷೆ ನಡೆಸಿ ಫಲಿತಾಂಶ ವಿಶ್ಲೇಷಿಸಿ ಮಾರ್ಗದರ್ಶನ ನೀಡುವುದು ಹೀಗೆ 27 ಅಂಶಗಳ ಪಟ್ಟಿ ತಯಾರಿಸಿ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ವರ್ಷದಿಂದ ಹಲವು ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧಗೊಂಡಿದ್ದಾರೆ. 27 ಅಂಶಗಳ ಪಟ್ಟಿ ಮಾಡಿಕೊಂಡು ಮಕ್ಕಳಿಗೆ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. –
ಎ.ಬಿ. ಪುಂಡಲೀಕ, ಡಿಡಿಪಿಐ, ಬೆಳಗಾವಿ ಶೈಕ್ಷಣಿಕ ಜಿಲ್ಲೆ
-ಭೈರೋಬಾ ಕಾಂಬಳೆ