Advertisement
ಪರೀಕ್ಷೆಯ ಸಮಯ ಬಂತೆಂದರೆ ಬೇಸಿಗೆಯ ಬಿಸಿಲಿನ ತಾಪದೊಂದಿಗೆ ಪೋಷಕರ ಮತ್ತು ಶಿಕ್ಷಕರ ಒತ್ತಡವೂ ಏರಿ ಬೆವರು ಹರಿಯತೊಡಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಆತಂಕಕ್ಕೆ ಒಳಗಾಗುತ್ತಾರೆ. ಪರೀಕ್ಷೆ ಎನ್ನುವುದು ವಾರ್ಷಿಕ ಪೆಡಂಭೂತ ಏನಲ್ಲ. ಪರೀಕ್ಷೆಗಳು ನಡೆಯುವುದು ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಗುರುತಿಸಲೇ ಹೊರತು, ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಅಲ್ಲ. ಪ್ರಸ್ತುತದಲ್ಲಿ ಅಂಕ ಗಳಿಕೆಗಿಂತ ವಿದ್ಯಾರ್ಥಿ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾನೆ ಎಂಬುದನ್ನು ತಿಳಿಯಲು ನಮಗಿರುವ ಮಾರ್ಗ ಪರೀಕ್ಷೆ ಒಂದೇ. ಆದ್ದರಿಂದ, ಕೇವಲ ಅಂಕಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಪರೀಕ್ಷೆಯನ್ನು ಎದುರಿಸಬಾರದು. ಅಂಕ ಗಳಿಕೆಯೇ ಮುಖ್ಯ ಎಂದು ಭಾವಿಸಬಾರದು.
Related Articles
Advertisement
ಪ್ರಥಮ/ದ್ವಿತೀಯ ಭಾಷೆ, ಸಮಾಜ ವಿಜ್ಞಾನ ಇತ್ಯಾದಿ ವಿಷಯಗಳನ್ನು ಓದುವಾಗ ಪಠ್ಯದ ಸಾರಾಂಶ ಗ್ರಹಿಸಲು ಪ್ರಯತ್ನಿಸಬೇಕು. ಅಂದರೆ ಪದ್ಯವೋ, ಪಾಠವೋ ಆಗಿದ್ದಾಗ ಲೇಖಕರ ಹೆಸರು ಮತ್ತು ಯಾವ ಕೃತಿಯಿಂದ ಅದನ್ನು ಆಯ್ದುಕೊಳ್ಳಲಾಗಿದೆ ಎಂಬುದನ್ನು ಗುರುತು ಮಾಡಿಕೊಳ್ಳಬೇಕು. ಪದ್ಯದ ಅಥವಾ ಪಾಠದ ಮೂಲ ಆಶಯವನ್ನು ಒಂದೇ ವಾಕ್ಯದಲ್ಲಿ ಬರೆದಿಟ್ಟುಕೊಳ್ಳಬೇಕು. ಯಾವ ಯಾವ ಅಂಶಗಳನ್ನು ಕುರಿತಂತೆ ಪದ್ಯ ಅಥವಾ ಪಾಠ ಬೆಳೆಯುತ್ತಾ ಹೋಗಿದೆ ಎಂಬುದನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಹೀಗೆ ಒಮ್ಮೆ ಆಮೂಲಾಗ್ರವಾಗಿ ಓದಿದ ಮೇಲೆ, ಪುನರಾವರ್ತನೆ ಮಾಡುವಾಗ ಟಿಪ್ಪಣಿಗಳ ಮೇಲೆ ಕಣ್ಣಾಡಿಸಿದರೆ ಸಾಕು; ಇಡೀ ವಿಷಯದ ವಿಸ್ತಾರ ರೂಪ ಮನಸ್ಸಿನಲ್ಲಿ ಮೂಡುತ್ತದೆ.
ವಿಜ್ಞಾನ, ಗಣಿತ ಮೊದಲಾದ ವಿಷಯಗಳನ್ನು ಓದುವಾಗ ಪ್ರಮೇಯಗಳನ್ನು ಮತ್ತೆ ಮತ್ತೆ ಬರೆದು ಅಭ್ಯಾಸ ಮಾಡಬೇಕು. ಮಾದರಿ ಲೆಕ್ಕಗಳನ್ನು ಮತ್ತು ಮಾದರಿ ಪ್ರಶ್ನೆಗಳನ್ನು ಗಮನಿಸಬೇಕು. ಯಾವುದೇ ವಿಚಾರವನ್ನಾಗಲಿ ಒಂದು ಟೇಬಲ್ ರೂಪದಲ್ಲಿ ಸಿದ್ಧಪಡಿಸಿಕೊಳ್ಳುವ ತಂತ್ರವನ್ನು ಕಲಿಯಬೇಕು. ವಿಜ್ಞಾನದ ವಿಷಯಗಳಲ್ಲಿ ಈ ಟೇಬಲ್‌ಗಳು ವಿಚಾರಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಬಹಳ ನೆರವಾಗುತ್ತವೆ.
ಪರೀಕ್ಷೆ ಹತ್ತಿರ ಬಂದಾಗ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ವಿಶೇಷ ನೆರವಿನ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇವುಗಳನ್ನು ನೋಡಬೇಕು ಮತ್ತು ಕೇಳಿಸಿಕೊಳ್ಳಬೇಕು. ಬಹುತೇಕ ಸಂದರ್ಭದಲ್ಲಿ ಇಲ್ಲಿ ಚರ್ಚಿತವಾಗುವ ವಿಷಯಗಳು ಪರೀಕ್ಷಾ ದೃಷ್ಟಿಯಿಂದ ಸಹಾಯಕವಾಗಿರುತ್ತವೆ. ಪರಿಣಿತ ಅಧ್ಯಾಪಕರು ಮತ್ತು ಪ್ರಶ್ನೆಪತ್ರಿಕೆ ರೂಪಿಸುವವರು ಈ ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಸಲಹೆ- ಸೂಚನೆಗಳನ್ನು ಕೊಡುತ್ತಾರೆ.
ಪೂರ್ವ ಸಿದ್ಧತೆ ಇದ್ದರೆ ಆತಂಕ ಇರಲ್ಲ!:
ಪರೀಕ್ಷಾ ಪೂರ್ವದ ಸಿದ್ಧತೆ ಗಟ್ಟಿಯಾಗಿದ್ದರೆ ಪರೀಕ್ಷೆಯ ದಿನ ಆತಂಕವಾಗುವುದಿಲ್ಲ. ವಿದ್ಯಾರ್ಥಿಯು ಪರೀಕ್ಷಾ ದಿನಗಳಲ್ಲಿ ಆರೋಗ್ಯದ ಕಡೆ ಸೂಕ್ತ ಗಮನ ಕೊಡಬೇಕು. ಅನವಶ್ಯಕ ಓಡಾಟವನ್ನು ನಿಲ್ಲಿಸಬೇಕು. ಹೊರಗಿನ ತಿಂಡಿ, ಪಾನೀಯಗಳನ್ನು ಸೇವಿಸದೆ ಆರೋಗ್ಯಕರ ಆಹಾರವನ್ನು ಬಳಸಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಏಕೆಂದರೆ ನಿದ್ರೆ ಮಾಡುವ ಸಮಯದಲ್ಲಿ ಮೆದುಳು ಅಧ್ಯಯನದ ವಿಚಾರಗಳನ್ನು ನೆನಪಿನ ಕೋಶಗಳಾಗಿ ಪರಿವರ್ತಿಸುತ್ತದೆ. ಆದುದರಿಂದ ನಿದ್ದೆಗೆಟ್ಟು ಓದಬಾರದು. ಹಾಗೆ ಓದಿದರೂ ಅಂತಹ ವಿಚಾರಗಳು ನೆನಪಿನಲ್ಲಿ ಉಳಿಯುವ ಸಾಧ್ಯತೆಗಳು ಕಡಿಮೆ.
ಪಾಲಕ- ಪೋಷಕರ ಪಾತ್ರ…
ಪರೀಕ್ಷೆಯ ಕಾಲದಲ್ಲಿ ವಿದ್ಯಾರ್ಥಿಗೆ ಬೇಕಾದ ಒತ್ತಾಸೆ ಮತ್ತು ಸಹಕಾರವನ್ನು ಮನೆಯವರು ನೀಡಬೇಕು. ಅನಾವಶ್ಯಕವಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು. ಹಾಗೆಯೇ ವಿದ್ಯಾರ್ಥಿಯ ಬೇಜವಾಬ್ದಾರಿತನವನ್ನು ಕಡೆಗಣಿಸಬಾರದು. ಸೂಕ್ತ ಮಾರ್ಗದರ್ಶನ ನೀಡಿದರೆ ಪ್ರತಿಯೊಂದು ಮಗುವೂ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸುತ್ತದೆ.
ಮನೆಯ ಹಿರಿಯರು ಪರೀಕ್ಷಾ ದಿನಗಳಲ್ಲಿ ಟೀವಿ, ಸೀರಿಯಲ್ ನೋಡುವ, ರೇಡಿಯೋ ಕೇಳುವ ಕಾರ್ಯಕ್ರಮಗಳನ್ನು ತ್ಯಜಿಸಿ ವಿದ್ಯಾರ್ಥಿಗೆ ಧೈರ್ಯ ಹೇಳುತ್ತಾ ಪ್ರೋತ್ಸಾಹ ಕೊಡಬೇಕು. ಅವನು/ಳು ನೆರವು ಕೋರಿದರೆ ವಿಷಯದ ತಿಳಿವಳಿಕೆ ಮೂಡಿಸುವಲ್ಲಿ ಪ್ರಯತ್ನಿಸಬಹುದು. ಕೆಲವೊಮ್ಮೆ ಸುಮ್ಮನೆ ಮಕ್ಕಳೊಂದಿಗೆ ಕುಳಿತರೂ ಅವರಿಗೆ ಆತಂಕ ಕಡಿಮೆಯಾಗುತ್ತದೆ.
ಪರೀಕ್ಷಾ ಕೇಂದ್ರ ದೂರವಿದ್ದರೆ ಮಕ್ಕಳು ಸಕಾಲದಲ್ಲಿ ಪರೀಕ್ಷಾ ಕೇಂದ್ರ ತಲುಪಲು ನೆರವಾಗಬೇಕು. ಅಕಸ್ಮಾತ್ ವಿದ್ಯಾರ್ಥಿ ಅನಾರೋಗ್ಯಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ, ಪರೀಕ್ಷಾ ಕೇಂದ್ರದ ನಿರೀಕ್ಷಾ ತಾಣಗಳಲ್ಲಿ ಕುಳಿತು ತುರ್ತು ಸಂದರ್ಭದಲ್ಲಿ ನೆರವಾಗಲು ಸಿದ್ಧರಿರಬೇಕು.
ಪರೀಕ್ಷಾ ಗೆಲುವಿಗೆ ಇರುವುದು ಮೂರೇ ಸೂತ್ರ: ತಯಾರಿ, ಆತ್ಮವಿಶ್ವಾಸ ಮತ್ತು ಹಿರಿಯರ ಸಹಕಾರ.
ವಿಜಯಕ್ಕೆ ಐದು ಮೆಟ್ಟಿಲು…
- ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪುವುದನ್ನು ಪಕ್ಕಾ ಮಾಡಿಕೊಳ್ಳಲು ಹಿಂದಿನ ದಿನ ಒಮ್ಮೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟು, ಅಲ್ಲಿಗೆ ತಲುಪಲು ಬೇಕಾದ ಸಮಯದ ಅಂದಾಜು ಮಾಡಿಕೊಳ್ಳಬೇಕು.
- ಪರೀಕ್ಷೆಯ ದಿನದಂದು ಲಘು ಆಹಾರ ಸೇವಿಸಬೇಕು ಮತ್ತು ನಿರಾತಂಕವಾಗಿ ಪರೀಕ್ಷಾ ಕೇಂದ್ರ ತಲುಪಬೇಕು. ತನಗೆ ನಿಗದಿಯಾದ ಕೋಣೆ ಮತ್ತು ಸ್ಥಳದಲ್ಲಿ ಕುಳಿತು, ಪ್ರವೇಶ ಪತ್ರಿಕೆಯಲ್ಲಿ ನಮೂದಿತವಾದ ಸಂಖ್ಯೆಯೇ ತಾನು ಕುಳಿತ ಆಸನದ ಡೆಸ್ಕಿನ ಮೇಲಿದೆ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು. ತಪ್ಪಾಗಿ ಯಾರದೋ ಸ್ಥಳದಲ್ಲಿ ಕೂರಬಾರದು ಅಥವಾ ತನ್ನ ರಿಜಿಸ್ಟರ್ ನಂಬರ್ ಅನ್ನು ತಪ್ಪಾಗಿ ಬರೆಯಬಾರದು.
- ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆ ದೊರೆತ ಕೂಡಲೇ ತಡಬಡಾಯಿಸಿ ಬರೆಯಲು ಆರಂಭಿಸಬಾರದು. ಎಷ್ಟೇ ತಯಾರಿ ಇದ್ದರೂ ಪರೀಕ್ಷೆಯ ವೇಳೆಯಲ್ಲಿ ಕೊಂಚ ಆತಂಕವಿರುತ್ತದೆ. ಅದು ಸಹಜವೇ. ಮೊದಲಿಗೆ ಒಂದೆರಡು ಬಾರಿ ದೀರ್ಘವಾಗಿ ಉಸಿರಾಡಿ ಆತಂಕವನ್ನು ಕಡಿಮೆ ಮಾಡಿಕೊಳ್ಳಬೇಕು.
- ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಅದನ್ನು ನಿಧಾನವಾಗಿ ಕನಿಷ್ಠ ಮೂರು ಬಾರಿ ಓದಿಕೊಳ್ಳಬೇಕು. ಅದಾದ ಬಳಿಕ ಸುಲಭವಾಗಿ ಉತ್ತರಿಸಬಲ್ಲ ಪ್ರಶ್ನೆಗಳನ್ನು ಮೊದಲಿಗೆ ಆಯ್ದುಕೊಂಡು ಉತ್ತರಿಸಬೇಕು. ತದನಂತರ ತನಗೆ ಸ್ವಲ್ಪ ಉತ್ತರ ತಿಳಿದಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದಾದ ಮೇಲೆ ತನಗೆ ತಿಳಿಯದಿರುವ ಪ್ರಶ್ನೆಗಳಿದ್ದರೂ, ಪರೀಕ್ಷಾ ಸಮಯ ಮುಗಿವ ಮೊದಲೇ ಎದ್ದು ಹೋಗಬಾರದು. ಮನಸ್ಸಿನಲ್ಲಿ ಕೆದಕಿ ನೆನಪನ್ನು ತಡಕಿ, ಕಷ್ಟದ ಪ್ರಶ್ನೆಗಳಿಗೆ ತಿಳಿದಷ್ಟನ್ನಾದರೂ ಬರೆಯಬೇಕು. ಯಾವುದೇ ಪ್ರಶ್ನೆಯನ್ನು ಬಿಡದಂತೆ ಉತ್ತರಿಸಬೇಕು. ಕನಿಷ್ಠ ಒಂದು ಸಾಲಿನ ಉತ್ತರವನ್ನಾದರೂ ಬರೆಯಬೇಕು. ಹೀಗೆ ಅಂಕ ಗಳಿಸುವ ಯಾವ ಅವಕಾಶವನ್ನೂ ಬಿಡದಂತೆ ಉತ್ತರಿಸಿ, ಆರಾಮವಾಗಿ ಪರೀಕ್ಷಾ ಕೇಂದ್ರದಿಂದ ಹೊರಬಂದು ಮುಂದಿನ ವಿಷಯಕ್ಕೆ ತಯಾರಿ ನಡೆಸಬೇಕು.
- ಒಂದು ಪರೀಕ್ಷೆ ಚೆನ್ನಾಗಿ ಬರೆದೆನೆಂದು ಬೀಗುತ್ತ ಉಳಿದ ಪರೀಕ್ಷೆಗಳ ಬಗ್ಗೆ ಉಪೇಕ್ಷೆ ಸಲ್ಲದು. ಹಾಗೆಯೇ, ಒಂದು ಪರೀಕ್ಷೆ ಚೆನ್ನಾಗಿ ಬರೆಯಲಿಲ್ಲವೆಂದು ದುಃಖದಿಂದ ಉಳಿದ ಪರೀಕ್ಷೆಗಳಿಗೆ ತಯಾರಿಯ ಕೈ ಬಿಡಬಾರದು. ಎಲ್ಲ ವಿಷಯಗಳನ್ನು ಸಮಾನ ವಾಗಿ ಪರಿಗಣಿಸಿ ಪರೀಕ್ಷೆ ಬರೆೆಯಬೇಕು.