ಕಾಸರಗೋಡು: ಲೋಕಸೇವಾ ಆಯೋಗ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಲು ಹೊರಟಿದೆ. ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕ (ಕನ್ನಡ ಮಾಧ್ಯಮ) ಹುದ್ದೆಗೆ ಪ್ರಶ್ನೆಗಳೇ ಅರ್ಥವಾಗದ ರೀತಿಯಲ್ಲಿದ್ದು, ಅಭ್ಯರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಆಯ್ಕೆಯಲ್ಲಿರುವ ಉತ್ತರಗಳು ಅರ್ಥವಾಗುವುದಿಲ್ಲ. ಕನ್ನಡಿಗ ರನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಕನ್ನಡ ಅಭ್ಯರ್ಥಿಗಳು ಆಯ್ಕೆಯಾಗಬಾರದು ಎಂಬ ಉದ್ದೇಶದಿಂದ ಇಂತಹ ಪ್ರಶ್ನೆ ಪತ್ರಿಕೆ ತಯಾರಿಸಿದಂತಿದೆ. ಅಸಂಬದ್ಧ ಪ್ರಶ್ನೆಪತ್ರಿಕೆಗಳನ್ನು ತಯಾರಿಸುತ್ತಿರು ವುದು ಶೈಕ್ಷಣಿಕ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ. ಪಿಎಸ್‌ಸಿ ಪರೀಕ್ಷಾ ಪ್ರಶ್ನೆಪತ್ರಿಕೆ ತಯಾರಿಸುವಾಗ ಎಚ್ಚರ ವಹಿಸಬೇಕಾದ ತಜ್ಞರು ಇಷ್ಟು ದೊಡ್ಡ ತಪ್ಪುಗಳನ್ನು ಮಾಡಿರುವುದು ಅಕ್ಷಮ್ಯ ಎಂದು ಕನ್ನಡ ಮಾಧ್ಯಮ ಅಧ್ಯಾ ಪಕರ ಸಂಘಟನೆ ಖಂಡನೆ ತಿಳಿಸಿದೆ.
ಅಲ್ಲದೆ ಇತ್ತೀಚೆಗಷ್ಟೆ ನಡೆದ ಲ್ಯಾಬ್ ಅಸಿಸ್ಟೆಂಟ್ ಹುದ್ದೆಯ ಪರೀಕ್ಷೆಗೆ ಕನ್ನಡ ಪ್ರಶ್ನೆ ಪತ್ರಿಕೆಗಳು ಲಭಿಸಿಲ್ಲ. ಇವೆಲ್ಲವನ್ನು ಕನ್ನಡಿಗರು ಸಹಿಸಿಕೊಂಡು ಹೋಗಬೇಕಾಗಿರುವುದು ಗಡಿನಾಡ ಕನ್ನಡಿಗರ ಮೇಲಿನ ದಬ್ಟಾಳಿಕೆ ಎನ್ನದೆ ವಿಧಿಯಿಲ್ಲ ಎಂದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.
ಈ ಮೊದಲು ನಡೆದ ಎಚ್‌ಎಸ್‌ಟಿ, ಎಲ್‌ಪಿಎಸ್‌ಟಿ ಹುದ್ದೆಯ ಪರೀಕ್ಷೆ ಗಳಲ್ಲೂ ಈ ರೀತಿ ಪ್ರಶ್ನೆ ಪತ್ರಿಕೆಯಲ್ಲಿ ದೋಷಗಳು ಕಂಡುಬಂದಿದ್ದವು. ಪ್ರಶ್ನೆ ಪತ್ರಿಕೆಯನ್ನು ಗೂಗಲ್ ಅನುವಾದ ಬಳಸಿ ತಯಾರಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಪಿಎಸ್‌ಸಿ ಯಂತಹ ಸರಕಾರಿ ವ್ಯವಸ್ಥೆಗೆ ಶೋಭೆ ತರುವಂಥದ್ದಲ್ಲ. ವಿಷಯ, ಭಾಷಾ ಜ್ಞಾನವುಳ್ಳ ಸೂಕ್ತ ತಜ್ಞರನ್ನು ಬಳಸಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸಬೇಕು ಎಂದು ಆಗ್ರಹಿಸಿದ್ದಾರೆ.
950ಕ್ಕೂ ಹೆಚ್ಚು ಉದ್ಯೋಗಾರ್ಥಿ ಗಳು ಪರೀಕ್ಷೆ ಬರೆದಿದ್ದಾರೆ. ಪ್ರಶ್ನೆಪತ್ರಿಕೆ ಅಸಮರ್ಪಕವಾಗಿರುವುದರಿಂದ ಮರು ಪರೀಕ್ಷೆ ನಡೆಸಬೇಕು, ಮಲೆಯಾಳ ಆರ್ಥದ ಪ್ರಶ್ನೆಗಳನ್ನು ತೆಗೆದು ಸರಿಯಾದ ಪ್ರಶ್ನೆಗಳನ್ನಷ್ಟೇ ಪರಿಗಣಿಸಬೇಕು ಎಂದು ಕನ್ನಡ ಅಧ್ಯಾಪಕರ ಸಂಘಟನೆಯು ಒತ್ತಾಯಿಸಿದೆ.