Advertisement
ಇದು ಮಾರ್ಚ್! ವಿದ್ಯಾರ್ಥಿಗಳಿರುವ ಪ್ರತಿಮನೆಯಲ್ಲೂ ಹೈ ಅಲರ್ಟ್ ಘೋಷಣೆ ಆಗಿರುತ್ತೆ! “ಇದನ್ನು ಮಾಡ್ಬೇಡ, ಅದನ್ನು ಮಾಡ್ಬೇಡ… ಓದು, ಓದು…’ - ಇದೇ ಮಂತ್ರ. ಅದನ್ನು ಕೇಳಿಸ್ಕೊಂಡು, ಕೇಳಿಸ್ಕೊಂಡು ಮಕ್ಕಳ ನಗು, ತುಂಟಾಟ ಎಲ್ಲವೂ ಬಣ್ಣ ಕಳಕೊಂಡು ನಿಸ್ತೇಜ.
ಆಕೆ ಬ್ಯಾಂಕೊಂದರಲ್ಲಿ ಉದ್ಯೋಗಿ. ಪಿಯುಸಿ ಓದುತ್ತಿರುವ ಮಗಳು ಪೂರ್ವಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕಾಗಿ ಅವಳನ್ನು ನಿಂದಿಸಿದ್ದಷ್ಟೇ ಅಲ್ಲದೆ, ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ತಾನೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಳು. ಅದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡ ಮಗಳು, ಫಲಿತಾಂಶದ ದಿನ ತನ್ನ ರೂಮ್‌ನ ಕಿಟಕಿಗೆ ವೇಲ್ ಬಿಗಿದು, ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಾರನೇ ದಿನದ ಫಲಿತಾಂಶ ನೋಡಿದಾಗ ಕಾಲೇಜಿಗೇ ಮೊದಲ ಸ್ಥಾನ ಬಂದಿದ್ದಳು!
Related Articles
ಯಾವ ಮಕ್ಕಳ ಮೇಲೆ ತೀವ್ರವಾದ ಒತ್ತಡ ಇರುತ್ತದೆಯೋ ಆ ಮಕ್ಕಳು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಮಾನಸಿಕ ವಿಶ್ರಾಂತಿಯನ್ನೂ ನೀಡದೆ ನಿರಂತರ ಓದಿನಲ್ಲಿ ತೊಡಗಿಸಿಕೊಂಡ ಮಕ್ಕಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ. ಒಂದು ಮಗು ಮಾನಸಿಕವಾಗಿ ಸದೃಢವಾಗಿಲ್ಲದೇ ಹೋದಲ್ಲಿ ಮಗುವಿನ ಶೈಕ್ಷಣಿಕ ಪ್ರಗತಿಯಲ್ಲಿ ಮಾತ್ರವಲ್ಲ, ಸಾಮಾಜಿಕ ನಡವಳಿಕೆಯಲ್ಲೂ ವ್ಯತ್ಯಾಸವಾಗಬಹುದು. ವಿಕಾಸಾತ್ಮಕ ತೊಂದರೆಗೀಡು ಮಾಡಬಹುದು. ಮಕ್ಕಳನ್ನು ಓದಿಸಬೇಕು ನಿಜ. ಹಾಗಂತ ಅನಗತ್ಯ ಒತ್ತಡ ಸೃಷ್ಟಿಸಬೇಕಿಲ್ಲ.
Advertisement
ಸ್ವಲ್ಪ ಸ್ವಾತಂತ್ರ್ಯ ಕೊಡಿ…ಪರೀಕ್ಷೆ ಬಂತೆಂದರೆ ಎಷ್ಟೋ ಮನೆಗಳಲ್ಲಿ ಟಿ.ವಿ., ಮೊಬೈಲ್, ಆಟ, ನಿದ್ದೆ ಎಲ್ಲವೂ ಬಂದ್. ಕೆಲವು ತಾಯಂದಿರು ತಾವು ಟಿ.ವಿ. ಮುಂದೆ ಕುಳಿತು, ಮಕ್ಕಳಿಗೆ ಓದಿಕೋ ಎಂದು ಆಜ್ಞೆ ಮಾಡುತ್ತಾರೆ. ಅದು ಶುದ್ಧ ಅತಾರ್ಕಿಕ. ಮಕ್ಕಳು ಶಾಂತಿಯಿಂದ ಓದಿಕೊಳ್ಳಲಿ, ಅವರ ಏಕಾಗ್ರತೆಗೆ ಭಂಗವಾಗದಿರಲಿ ಎಂದು ಹೀಗೆ ಮಾಡುವುದು ಒಳ್ಳೆಯದೇ. ಆದರೆ, ಓದು- ಬರಹದ ನಡುವೆ ಸ್ವಲ್ಪ ಉಸಿರು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನಾದರೂ ಅವರಿಗೆ ಕೊಡಿ. ಮಕ್ಕಳಿಗೆ ಒಂದು ಟೈಂ ಟೇಬಲ್ ಮಾಡಿಕೊಂಡು ಓದಲು ಹೇಳಿ. ಊಟ, ನಿದ್ದೆ, ವಿರಾಮಕ್ಕೂ ವೇಳಾಪಟ್ಟಿಯಲ್ಲಿ ಸಮಯವಿರಲಿ. ಆಹಾರ, ಆರೋಗ್ಯ ಅತಿಮುಖ್ಯ
ಪರೀಕ್ಷೆ ಸಮಯದಲ್ಲಿ ಮಕ್ಕಳ ಆರೋಗ್ಯದ ಕಡೆಗೆ ತಾಯಂದಿರು ಹೆಚ್ಚಿನ ಗಮನ ಕೊಡಬೇಕು. ಕೆಲ ಮಕ್ಕಳು ನಿದ್ದೆ ಬಿಟ್ಟು, ಊಟ ಬಿಟ್ಟು ಓದಿ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಪರೀಕ್ಷೆಯ ಹಿಂದಿನ ರಾತ್ರಿ ಪೂರ್ತಿ ಓದಿ, ಪರೀಕ್ಷೆ ಹಾಲ್‌ನಲ್ಲಿ ತಲೆತಿರುಗಿ ಬೀಳುವವರನ್ನೂ ನೋಡಿದ್ದೇವೆ. ಹಾಗಾಗದಂತೆ ಜೋಪಾನ ಮಾಡುವುದು ಅಮ್ಮಂದಿರ ಕರ್ತವ್ಯ. ಪರೀಕ್ಷೆಗೆ ಓದಲು ಕುಳಿತಾಗ ಮಧ್ಯೆ ಮಧ್ಯೆ ಕುರುಕಲು ತಿಂಡಿ ತಿನ್ನುವುದು, ರಾತ್ರಿ ಓದುವಾಗ ಕಾಫಿ- ಟೀ ಹೆಚ್ಚಾಗಿ ಸೇವಿಸುವುದು… ಹೀಗೆ ಆರೋಗ್ಯ ಕೆಡಲು ಹತ್ತಾರು ಕಾರಣಗಳು. ಅದರ ಬಗ್ಗೆ ಗಮನ ಹರಿಸಿ. ಸತತ 6 ಗಂಟೆಗಳ ಓದು, 8 ತಾಸಿನ ನಿರಂತರ ಅಭ್ಯಾಸ ಖಂಡಿತವಾಗಿ ಈಗಿನ ಮಕ್ಕಳ ಅನಿವಾರ್ಯತೆಯಲ್ಲ. ಹೇಳಿದ್ದನ್ನು ತಕ್ಷಣ ಗ್ರಹಿಸುವ ಹಾಗೂ ಅದನ್ನು ತಮ್ಮದೇ ವಿಧದಲ್ಲಿ ಉತ್ತರಿಸುವ ಬುದ್ಧಿಮತ್ತೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕಾಣುತ್ತೇವೆ. ಅಮ್ಮಂದಿರೇ ರಿಲ್ಯಾಕ್ಸ್ ಪ್ಲೀಸ್
ಕೆಲ ಅಮ್ಮಂದಿರಿಗೆ ಮಕ್ಕಳ ಶಿಕ್ಷಣದ ಕುರಿತು ಅತಿಯಾದ ಭಯ, ಆತಂಕ ಇರುತ್ತದೆ. ಅದು ಪರೀಕ್ಷೆಯ ಸಮಯದಲ್ಲಿ ಒತ್ತಡವಾಗಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವರಂತೂ ಮಗುವಿಗೆ ಕೌನ್ಸಲಿಂಗ್ ಮಾಡಿಸಬೇಕು ಎನ್ನುವ ಧಾವಂತದಲ್ಲಿರುತ್ತಾರೆ. ಆದರೆ, ನಿಜವಾಗಿ ನೋಡಿದರೆ ಮಕ್ಕಳಿಗಿಂತ ಅಮ್ಮಂದಿರಿಗೇ ಕೌನ್ಸಲಿಂಗ್‌ನ ಅಗತ್ಯವಿರುತ್ತದೆ. ಒಂದು ವೇಳೆ ಮಗುವಿಗೆ ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣವಾದರೆ ಮಗುವಿನ ಭವಿಷ್ಯವೇ ಮುಳುಗಿ ಹೋಯ್ತು ಎಂದು ಭಾವಿಸಬೇಕಿಲ್ಲ. ಒಂದು ವರ್ಷದ ಶಿಕ್ಷಣವೂ ಹಾಳಾಗದಂತೆ ತಕ್ಷಣವೇ ಮತ್ತೂಂದು ಪೂರಕ ಪರೀಕ್ಷೆ ಬರೆಯುವ ಅವಕಾಶ ಇಂದಿನ ಮಕ್ಕಳಿಗಿದೆ. ಹೀಗಾಗಿ, ಮಗುವಿನ ಮೇಲೆ ಅನಗತ್ಯ ಒತ್ತಡದ ಅಗತ್ಯವಿಲ್ಲ. ನಮ್ಮ ಈಡೇರದ ಕನಸುಗಳನ್ನು, ನಮ್ಮ ಆಸೆ ಆಕಾಂಕ್ಷೆಗಳನ್ನು ಮಗುವಿನ ಮೇಲೆ ಹೇರಿ ಅದನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ಪಕ್ಕದ ಮನೆಯ ಮಗು ಗಳಿಸಿದ ಅಂಕಗಳು, ಕುಟುಂಬದ ಇನ್ನೊಂದು ಮಗು ಪಡೆದ ಮಾರ್ಕ್ಸ್, ಸಹೋದ್ಯೋಗಿಯ ಮಗುವಿನ ಬುದ್ಧಿಮತ್ತೆ ಇವನ್ನೆಲ್ಲ ಇಟ್ಟುಕೊಂಡು ಮಕ್ಕಳನ್ನು ನಮ್ಮ ಪ್ರತಿಷ್ಠೆಯ ವಸ್ತುವನ್ನಾಗಿ ನೋಡದೆ, ಎಲ್ಲಾ ಕುಂದು ಕೊರತೆ, ಲೋಪದೋಷಗಳನ್ನು ಹೊಂದಿದ ಮನುಷ್ಯ ಸಹಜಭಾವನೆಯಿಂದ ನೋಡುವುದನ್ನು ರೂಢಿಸಿಕೊಳ್ಳಿ. ಹೋಲಿಕೆ ಬೇಡ…
*ಪರೀಕ್ಷೆ ಮುಗಿಸಿ ಬಂದ ಮಗುವಿನ ಬಳಿ, ಪರೀಕ್ಷೆ ಹೇಗಿತ್ತು ಅಂತ ಕೇಳ್ಳೋದು ಸಹಜ. ಫ್ರೆಂಡ್ಸ್‌ಗೆಲ್ಲಾ ಸುಲಭ ಇತ್ತಾ, ಮತ್ತೆ ನಿನಗೆ ಮಾತ್ರ ಯಾಕೆ ಕಷ್ಟ ಇತ್ತು ಅಂತ ವಿಚಾರಣೆಗೆ ಇಳಿಯಬೇಡಿ.
*ನಿಮ್ಮ ಮಗುವನ್ನು ಇನ್ನೊಂದು ಮಗುವಿನ ಜೊತೆಗೆ ಹೋಲಿಸಿ ಮಾತಾಡಬೇಡಿ.
* ಇಷ್ಟು ಅಂಕ ಬರದಿದ್ದರೆ ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂತ ಹೆದರಿಸುವ ಅಗತ್ಯವಿಲ್ಲ.
* ಪ್ರತಿ ಪರೀಕ್ಷೆಯ ನಂತರವೂ, ಆಗಿದ್ದನ್ನು ಮರೆತು, ಮುಂದಿನ ಪರೀಕ್ಷೆಗೆ ಓದಿಕೋ ಅಂತ ಪ್ರೇರೇಪಿಸಿ.
*ಮನೆಯಲ್ಲಿ ಅಣ್ಣನೋ, ಅಕ್ಕನೋ ರ್‍ಯಾಂಕ್ ತೆಗೆದಿದ್ದರೆ, ಅದನ್ನೇ ಉಳಿದ ಮಕ್ಕಳ ಮಾನದಂಡವಾಗಿಸಬೇಡಿ.
*ಅವನಿಗಿಂತ ಜಾಸ್ತಿ ಮಾರ್ಕ್ಸ್ ತೆಗಿ, ಇವಳಿಗಿಂತ ಒಳ್ಳೆ ರ್‍ಯಾಂಕ್ ತೆಗಿ ಅಂತೆಲ್ಲಾ ಪರೀಕ್ಷೆಯನ್ನು ಅನಗತ್ಯ ಸ್ಪರ್ಧೆಯನ್ನಾಗಿಸಬೇಡಿ. ಶ್ರೀದೇವಿ ಕೆರೆಮನೆ