ಹೊಸದಿಲ್ಲಿ: 1984 ಸಿಕ್ಖ್ ವಿರೋಧಿ ದಂಗೆ, 2002ರ ಗೋಧ್ರಾದಂತಹ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗಿರೀಶ್ ಠಾಕೋರ್‌ಲಾಲ್ ನಾನಾವತಿ (86) ಶನಿವಾರ ಕೊನೆಯುಸಿರೆಳೆದಿದ್ದಾರೆ.
ಗುಜರಾತ್‌ನಲ್ಲಿ ವಾಸವಿದ್ದ ನ್ಯಾ| ನಾನಾವತಿ ಅವರಿಗೆ ಶನಿವಾರ ಮಧ್ಯಾಹ್ನ 1.15ರ ಸಮಯಕ್ಕೆ ಹೃದಯಾಘಾತ ವಾಗಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
1958ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ಕರ್ನಾಟಕ ಹೈಕೋರ್ಟ್, ಗುಜರಾತ್ ಹೈಕೋರ್ಟ್, ಒರಿಸ್ಸಾ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
1995ರಿಂದ 2000ರವರೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸಿಕ್ಖ್ ವಿರೋಧಿ ದಂಗೆಯ ವಿಚಾರಣೆ ನಡೆಸಲೆಂದು 2000ರಲ್ಲಿ ಎನ್‌ಡಿಎ ಸರಕಾರವು ನ್ಯಾ| ನಾನಾವತಿ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿತ್ತು.