ಕರಾಚಿ: ಎಷ್ಟೋ ಸಲಿ ಕೆಲ ಮಾತುಗಳನ್ನು ಆಡುವಾಗ ನಾಲಗೆಯೇ ಮೇಲೆ ನಿಯಂತ್ರಣವೇ ಇರುವುದಿಲ್ಲ. ಆಡಿದ ಆ ಮಾತು ವಿವಾದಕ್ಕೂ, ಟೀಕೆಗೂ ಗುರಿಯಾಗುತ್ತದೆ. ಇಂಥದ್ದೇ ಮಾತನ್ನು ಆಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಟೀಕೆಗೆ ಒಳಗಾಗಿದ್ದಾರೆ.
ಪಾಕ್ ತಂಡದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರು ಪ್ರತಿಕಾಗೋಷ್ಠಿಯಲ್ಲಿ ಪಾಕ್ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಭರದಲ್ಲಿ ನೀಡಿದ ಹೇಳಿಕೆಯೊಂದು ಭಾರತದಲ್ಲಿ ಐಶ್ವರ್ಯಾ ರೈ ಅವರ ಅಭಿಮಾನಿಗಳನ್ನು ಕೆರಳಿಸಿದೆ.
ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ನೀಡಿದ ನಿರಾಶದಾಯಕ ಪ್ರದರ್ಶನದ ಬಗ್ಗೆ ಪ್ರಶ್ನೆ ಕೇಳಿದಾಗ, ಇದಕ್ಕೆ ಉತ್ತರವಾಗಿ ರಜಾಕ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಭರದಲ್ಲಿ ಉದಾಹರಣೆಯಾಗಿ ಸಂಬಂಧವೇ ಇಲ್ಲದ ಐಶ್ವರ್ಯಾ ರೈ ಅವರ ಹೆಸರನ್ನು ತಂದು ವಿವಾಕ್ಕೀಡಾಗಿದ್ದಾರೆ.
“ಯೂನಿಸ್ ಖಾನ್ ನಾಯಕನಾಗಿ ಉತ್ತಮ ಉದ್ದೇಶವನ್ನು ಹೊಂದಿದ್ದರು ಮತ್ತು ಇದು ನನಗೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ನೀಡಿತ್ತು. ನಾವೆಲ್ಲ ಪಾಕಿಸ್ತಾನ ತಂಡದ ಉದ್ದೇಶದ ಬಗ್ಗೆ ಮಾತನಾಡುತ್ತೇವೆ. ವಾಸ್ತವವಾಗಿ ನಾವು ಪಾಕಿಸ್ತಾನದಲ್ಲಿ ಆಟಗಾರರನ್ನು ಅಭಿವೃದ್ಧಿಪಡಿಸುವ ಮತ್ತು ಬೆಳೆಸುವ ಉತ್ತಮ ಉದ್ದೇಶವನ್ನು ಹೊಂದಿಲ್ಲ. ಒಂದು ವೇಳೆ ನಾನು ಐಶ್ವರ್ಯಾ ರೈಯನ್ನು ಮದುವೆಯಾಗುವುದರಿಂದ ಸನ್ನಡತೆಯ ಮಕ್ಕಳು ಹುಟ್ಟುತ್ತವೆ ಎಂದು ನೀವು ಭಾವಿಸಿದರೆ ಅದು ಎಂದಿಗೂ ಸಂಭವಿಸುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಅವಹೇಳನ ಪದ ಬಳಸಿ ಬೋವಿ ಜನಾಂಗಕ್ಕೆ ಅವಮಾನ: ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ FIR
ಇವರ ಮಾತಿಗೆ ಅಲ್ಲೇ ಕೂತಿದ್ದ ಹಿರಿಯ ಕ್ರಿಕೆಟಿಗರಾದ ಶಾಹಿದ್ ಆಫ್ರಿದಿ ಹಾಗೂ ಉಮರ್ ಗುಲ್ ಏನನ್ನೂ ಹೇಳದೆ ಚಪ್ಪಾಳೆ ತಟ್ಟಿ ನಕ್ಕಿದ್ದಾರೆ.
ಇದೊಂದು ʼಅಗೌರವʼ ಹೇಳಿಕೆಯೆಂದು ಒಬ್ಬರು ಖಂಡಿಸಿದ್ದಾರೆ. ಇವರು ಕೊಟ್ಟ ಉದಾಹರಣೆ ಅತ್ಯಂತ ನಾಚಿಗೇಡಿನದು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಇದೊಂದು ಥರ್ಡ್ ಕ್ಲಾಸ್ ಹೇಳಿಕೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.