ಇಸ್ಲಾಮಾಬಾದ್: ಪಾಕಿಸ್ತಾನ್ ಪ್ರಧಾನಿ ಶೆಹಬಾಝ್ ಷರೀಫ್ ಅವರು ಕಳೆದ ವಾರ ಮದೀನಾಕ್ಕೆ ಭೇಟಿ ನೀಡಿದ್ದ ವೇಳೆ ಪಾಕ್ ಮಾಜಿ ಪ್ರಧಾನಿ ಖಾನ್ ಬೆಂಬಲಿಗರು ಹಿಂಬಾಲಿಸಿ, ಘೋಷಣೆ ಕೂಗಿದ್ದರು ಎಂಬ ಆರೋಪದ ನಂತರ ಫೈಸಲಾಬಾದ್ ನಲ್ಲಿ ತೆಹ್ರೀಕ್ ಎ ಇನ್ಸಾಫ್ ಪಕ್ಷದ ವರಿಷ್ಠ ಇಮ್ರಾನ್ ಖಾನ್ ಹಾಗೂ ಇತರರ ವಿರುದ್ಧ ಧರ್ಮನಿಂದನೆಯ ಪ್ರಕರಣ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಫಾರ್ಮ್ ಹೌಸ್ ವಿವಾದ: ನಟ ಸಲ್ಮಾನ್ ಖಾನ್ ಬಳಿ 295 ಕೋಟಿ ರೂ. ವೆಚ್ಚ ಕೇಳಿದ ಎನ್‌ಆರ್‌ಐ
ಮದೀನಾದಲ್ಲಿ ಪಾಕ್ ಪ್ರಧಾನಿ ಶೆಹಬಾಝ್ ಮತ್ತು ಅವರ ನಿಯೋಗದ ವಿರುದ್ಧ ಘೋಷಣೆ ಕೂಗಿ, ಗೂಂಡಾಗಿರಿ ತೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗುವುದು ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಭರವಸೆ ನೀಡಿರುವುದಾಗಿ ಮಾಧ್ಯಮಗಳ ವರದಿ ವಿವರಿಸಿದೆ.
ಈ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ಶೇಕ್ ರಶೀದ್ ಮತ್ತು ಇಮ್ರಾನ್ ಖಾನ್ ನ ಮುಖ್ಯ ಸಿಬಂದಿ ಶಾಬಾಝ್ ಗಿಲ್ ಹಾಗೂ ಇತರರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಏನಿದು ಘಟನೆ?
ಕಳೆದ ಶುಕ್ರವಾರ ಪಾಕ್ ಪ್ರಧಾನಿ ಶೆಹಬಾಝ್ ಮತ್ತು ನಿಯೋಗದ ಸದಸ್ಯರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಮಸೀದಿಗೆ ಭೇಟಿ ನೀಡಿದ್ದ ವೇಳೆ ಇಮ್ರಾನ್ ಖಾನ್ ಬೆಂಬಲಿಗರೆನ್ನಲಾದ ಯಾತ್ರಾರ್ಥಿಗಳು ಕಳ್ಳ.. ದ್ರೋಹಿ ಎಂದು ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಷ್ಟೇ ಅಲ್ಲ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಶಾಮೀಲಾಗಿದ್ದ ಐವರು ಪಾಕಿಸ್ತಾನಿಯರನ್ನು ಬಂಧಿಸಲಾಗಿದೆ ಎಂದು ಮದೀನಾ ಪೊಲೀಸರು ತಿಳಿಸಿದ್ದಾರೆ.