ಪಾಟ್ನಾ : ಬಿಹಾರದ ಕೊಲೆ ಅಪರಾಧಿ, ದರೋಡೆಕೋರ-ರಾಜಕಾರಣಿ ಆನಂದ್ ಮೋಹನ್ ಸಿಂಗ್ ರನ್ನು ಗುರುವಾರ ಮುಂಜಾನೆ 3 ಗಂಟೆಗೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಈ ಕುರಿತು ಸಂಭ್ರಮ ವ್ಯಕ್ತ ಪಡಿಸಿರುವ ಪುತ್ರ ಚೇತನ್ ಮೋಹನ್, ಬಿಹಾರ ಜೈಲಿನಿಂದ ತಂದೆಯ ಬಿಡುಗಡೆಯಲ್ಲಿ ಯಾವುದೇ ರಾಜಕೀಯ ದೃಷ್ಟಿಕೋನವನ್ನು ನಿರಾಕರಿಸಿ, ತಂದೆ ಶಿಕ್ಷೆಯನ್ನು ಅನುಭವಿಸಿದ್ದಾರೆ ಮತ್ತು ಅವರ ಬಿಡುಗಡೆ ಸರಿಯಾದ ನಿರ್ಧಾರ ಎಂದಿದ್ದಾರೆ.
ಬಿಹಾರದ ಪ್ರತಿಪಕ್ಷ ಬಿಜೆಪಿಯ ನಾಯಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಮಹಾ ಘಟ್ಬಂಧನ್ ಸರಕಾರದ ಈ ಕ್ರಮದ ಬಗ್ಗೆ ವ್ಯಾಪಕವಾಗಿ ಟೀಕಿಸಿ ಆಕ್ರೋಶ ಹೊರ ಹಾಕಿದ್ದಾರೆ. ಇದು ರಜಪೂತ ಮತಗಳ ಮೇಲೆ ಕಣ್ಣಿಟ್ಟು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
“ವಿರೋಧ ಪಕ್ಷದವರು ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ನನ್ನ ತಂದೆ ನಿರಪರಾಧಿಯಾಗಿದ್ದರೂ ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಕುಟುಂಬಕ್ಕೆ ತುಂಬಾ ಕಷ್ಟಕರವಾಗಿತ್ತು” ಎಂದು ತೇಜಸ್ವಿ ಯಾದವ್ ಅವರ ಆರ್ ಜೆಡಿ ಪಕ್ಷದ ಶಾಸಕ ಚೇತನ್ ಮೋಹನ್ ಹೇಳಿದ್ದಾರೆ.
“16 ವರ್ಷಗಳ ನಂತರ ಅವರು ಹೊರಬರುತ್ತಿದ್ದಾರೆ. ಇದು ನಮ್ಮ ಕುಟುಂಬಕ್ಕೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ. ನಾವು ಅನೇಕ ವರ್ಷಗಳಿಂದ ನಮ್ಮ ತಂದೆಯಿಲ್ಲದೆ ಬದುಕುತ್ತಿದ್ದೇವು, ಅದು ಎಷ್ಟು ನೋವಿನಿಂದ ಕೂಡಿದೆ ಎಂದು ನಿಮಗೆ ತಿಳಿದಿದೆ”ಎಂದು ಚೇತನ್ ಮೋಹನ್ ಹೇಳಿದ್ದಾರೆ.
1994 ರಲ್ಲಿ, ಆನಂದ್ ಮೋಹನ್ ಸಿಂಗ್ ಅವರ ಪಕ್ಷಕ್ಕೆ ಸೇರಿದ ಮತ್ತೊಬ್ಬ ದರೋಡೆಕೋರ-ರಾಜಕಾರಣಿಯ ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜನಸಮೂಹದಿಂದ ಅಂದಿನ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ ಕೃಷ್ಣಯ್ಯ ಅವರನ್ನು ಹತ್ಯೆಗೈಯಲಾಗಿತ್ತು. ಆನಂದ್ ಮೋಹನ್ ಐಎಎಸ್ ಅಧಿಕಾರಿಯನ್ನು ಬೆದರಿಸಿ ಹತ್ಯೆಗೈದಿದ್ದಾನೆ ಎಂದು ಅಪರಾಧ ಸಾಬೀತಾಗಿತ್ತು. 2007 ರಲ್ಲಿ, ಆನಂದ್ ಮೋಹನ್ ಗೆ ಮರಣದಂಡನೆ ವಿಧಿಸಲಾಗಿತ್ತು, ಆದರೆ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು.
ಈ ತಿಂಗಳ ಆರಂಭದಲ್ಲಿ, ಬಿಹಾರ ಸರಕಾರವು ಜೈಲು ನಿಯಮಗಳನ್ನು ಬದಲಾಯಿಸಿ, ಕರ್ತವ್ಯದಲ್ಲಿದ್ದ ಸಾರ್ವಜನಿಕ ನೌಕರನನ್ನು ಹತ್ಯೆ ಮಾಡಿದ ಅಪರಾಧಿಗಳ ಜೈಲು ಶಿಕ್ಷೆಯನ್ನು ಹಿಂತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು.
ಮಾಯಾವತಿಯವರ ಬಿಎಸ್ ಪಿ ಕೂಡ ಆನಂದ್ ಮೋಹನ್ ರನ್ನು ಬಿಡುಗಡೆ ಮಾಡಿದ ನಿತೀಶ್ ಕುಮಾರ್ ಸರಕಾರದ ಕ್ರಮವನ್ನು ಟೀಕಿಸಿದೆ, ನಿಯಮಗಳಲ್ಲಿನ ತಿರುಚುವಿಕೆ “ದಲಿತ ವಿರೋಧಿ” ಎಂದು ಹೇಳಿದೆ ಮತ್ತು ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.