ಬೀದರ್ : ಬೀದರ್ ಕ್ಷೇತ್ರದ ಮಾಜಿ ಶಾಸಕ ಜುಲ್ಫೇಕರ್ ಹಾಸ್ಮಿ (57) ಅವರು ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಮೂತ್ರಪಿಂಡ ವೈಫಲ್ಯದಿಂದಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ತೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕಳೆದ ನಾಲ್ಕು ತಿಂಗಳಿಂದ ಡಯಾಲಿಸಿಸ್ ಗೆ ಒಳಗಾಗಿದ್ದು, ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಹೈದರಾಬಾದ್‌ನ ಆಸರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಜುಲ್ಫೇಕರ್ ಹಾಸ್ಮಿ ಅವರ ಅಂತ್ಯಕ್ರಿಯೆ ತಾಲೂಕಿನ ಅಷ್ಟೂರಿನ ಅವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಕಠಿಣ ನಿಯಮಗಳ ಜಾರಿಗೆ ವಿಪಕ್ಷಗಳು ಸರ್ಕಾರದ ಜೊತೆ ನಿಲ್ಲಬೇಕು : ಡಾ.ಕೆ.ಸುಧಾಕರ್
1994ರಲ್ಲಿ ಬಹುಜನ ಸಮಾಜ ಪಕ್ಷದಿಂದ ಬೀದರ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ದಕ್ಷಿಣ ಕ್ಷೇತ್ರದ ಮೊದಲ ಬಿಎಸ್.ಪಿ ಶಾಸಕರೆಂಬ ಹೆಗ್ಗಳಿಕೆ ಪಡೆದಿದ್ದರು. ನಂತರದ ಚುನಾವಣೆಗಳಲ್ಲಿ ಸೋಲುಂಡಿದ್ದರು.
ಕಳೆದ 30 ವರ್ಷದಿಂದ ರಾಜಕೀಯದಲ್ಲಿ ಸಕ್ರೀಯವಾಗಿದ್ದ ಹಾಶ್ಮಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲೂ ಗುರುತಿಸಿಕೊಂಡಿದ್ದರು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಆದರೆ, ವಿವಾದಾತ್ಮಕ ಹೇಳಿಕೆಯಿಂದ ಹೆಚ್ಚು ಗಮನ ಸೆಳೆದಿದ್ದರು.