ಕಾಗವಾಡ: ರಾಜ್ಯದ ಬಿಜೆಪಿ ಸರ್ಕಾರದಲ್ಲಿ ವೈಮನಸ್ಸು ಉಂಟಾಗಿದ್ದು, ಒಬ್ಬರೊಬ್ಬರಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದ್ದು, ಶೀಘ್ರವೇ 40 ಜನ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಶಾಸಕ ರಾಜು ಕಾಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಮದಭಾವಿ ಗ್ರಾಮದಲ್ಲಿ ಗಾಂಧಿ ಜಯಂತಿ ನಿಮಿತ್ತ ಡಾ| ಬಿ.ಆರ್.ಅಂಬೇಡ್ಕರ್ ಕ್ರಿಕೆಟ್ ಕ್ಲಬ್ ವತಿಯಿಂದ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಜ್ಞಾನ ವಿಕಾಸ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿದರು.
ದೇಶದಲ್ಲಿ ಲೂಟ್ ಇಂಡಿಯಾ, ಸೇಲ್ ಸರ್ಕಾರ ನಡೀತಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್, ಬೇಳೆ ಕಾಳುಗಳು ಸೇರಿದಂತೆ ಜನಸಾಮಾನ್ಯರು ದಿನನಿತ್ಯ ಬಳಸುತ್ತಿರುವ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರಿಂದ ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದರು. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೇನೆ. 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ನನಗೆ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ತೊಡಗಲು ಹೇಳಿದ್ದಾರೆ. ಶೀಘ್ರದಲ್ಲಿ 40 ಜನ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮತ್ತು ಜಿಲ್ಲೆಯ ಮೂವರನ್ನು ಸಚಿವ ಸ್ಥಾನದಿಂದ ಬಿಟ್ಟಿದ್ದರಿಂದ ಅಸಂತೋಷ ಉಂಟಾಗಿದೆ ಎಂದರು.
ಕೇಂದ್ರ ಹಣಕಾಸು ಸಚಿವರು ದೇಶ ಕಂಡ ಜ್ಞಾನವಿಲ್ಲದ ಮಂತ್ರಿ. ಉತ್ತಮ ಯೋಜನೆಗಳನ್ನು ಹಾಕಿಕೊಂಡು ಜನರಿಗೆ ಅನುಕೂಲ ಮಾಡಲು ಆಗುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆ. ಆದರೆ ಕೇಂದ್ರಕ್ಕೆ ತೈಲ ಬೆಲೆ ಕಡಿಮೆ ಮಾಡಲು ಆಗುತ್ತಿಲ್ಲ. ತೈಲ ಬೆಲೆ ಎಷ್ಟೇ ಆಗಲಿ, ನಾವು ಖರೀದಿ ಮಾಡುತ್ತೇವೆ ಎಂದು ಕೆಲ ಭಕ್ತರು ಹೇಳ್ತಾರೆ ಎಂದು ಗುಡುಗಿದರು.
ತಾಳಿ ಅಡವಿಟ್ಟು ಜೀವನ ನಡೆಸೋ ಪರಿಸ್ಥಿತಿ ಬಿಜೆಪಿ ಸರ್ಕಾರ ತಂದಿಟ್ಟಿದೆ. ಸರ್ಕಾರ ಸ್ವಾಮ್ಯದ ಕೈಗಾರಿಕೆಗಳ ಖಾಸಗೀಕರಣ ಮಾಡಲಾಗಿದೆ. ಪೆಟ್ರೋಲ್ ಕಂಪನಿ, ಏರ್‌ಪೋರ್ಟ್‌ಗಳನ್ನು ಸಹ ಖಾಸಗೀಕರಣ ಮಾಡಿ ದೇಶದ ಸಂಪತ್ತು ಲೂಟಿ ಮಾಡಲಾಗುತ್ತಿದೆ. ಸ್ಪಷ್ಟವಾದ ಆರ್ಥಿಕ ನೀತಿಯಿಲ್ಲದ ಕಾರಣ ಯೋಜನೆಗಳು ಸಫಲವಾಗುತ್ತಿಲ್ಲ ಎಂದು ದೂರಿದರು.
ಕೆಪಿಸಿಸಿ ಸದಸ್ಯರಾದ ದಿಗ್ವಿಜಯ ಪವಾರದೇಸಾಯಿ, ಚಂದ್ರಕಾಂತ ಇಮ್ಮಡಿ, ಬ್ಲಾಕ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಮುಖಂಡರಾದ ರಾವಸಾಹೇಬ ಐಹೊಳೆ, ಗಜಾನನ ಯರಂಡೋಲಿ, ಎ.ಬಿ.ಕೌಲಗುಡ್ಡ, ದೌಲತರಾವ ಘೋರ್ಪಡೆ(ಸರ್ಕಾರ) ಅಸ್ಲಂ ನಾಲಬಂದ, ಕುಮಾರ ಪಾಟೀಲ, ತಮ್ಮಣ್ಣ ಪುಜಾರಿ, ವಿಠ್ಠಲ ಗಾಡಿವಡ್ಡರ, ಮಲ್ಲಿಕಾರ್ಜುನ ದಳವಾಯಿ, ಬಾಹುಸಾಹೇಬ ನಾಯಿಕ, ಮಾರುತಿ ಗಾಡಿವಡ್ಡರ, ಶಿದರಾಯ ತೋಡಕರ, ಬಾಪು ಅಭ್ಯಂಕರ, ಮಾರುತಿ ಭಂಡಾರೆ, ಇತರರಿದ್ದರು.