Advertisement
ನಗರದ ಸತೀಶ ವಿ ಗುತ್ತೇದಾರ ಮನೆಯಲ್ಲಿ ನಡೆದ ಅಫಜಲಪುರ ಕ್ಷೇತ್ರದ ಸಮಾನ ಮನಸ್ಕರ ಹಿರಿಯ ಮತ್ತು ಪ್ರಮುಖರ ವಿಶೇಷ ಸಮಾಲೋಚನಾ ಸಭೆ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಸಭೆಯ ಸಂಚಾಲಕರಾದ ವಿಶ್ವನಾಥ ರೇವೂರ ಸೇರಿ ಮತ್ತಿತರರು ಮಾತನಾಡಿ, ಕ್ಷೇತ್ರದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ನಿತಿನ್ ವಿ.ಗುತ್ತೇದಾರ ಪರವೇ ಒಲವು ಇರುವುದರಿಂದ ಜತೆಗೆ ಕಳೆದ ಐದು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಕ್ಷೇತ್ರದ ಸರ್ವರೂ ನಿತಿನ್ ಪರವಾಗಿ ಇರುವುದಾಗಿ ಹೇಳಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷನಾಗಿ ಜತೆಗೆ ಕಳೆದ 15 ವರ್ಷಗಳಿಂದ ರಾಜಕೀಯದಲ್ಲಿ ಎಲ್ಲ ಹಂತದ ಆಡಳಿತ ಅನುಭವ ಹೊಂದಲಾಗಿದೆ. ನನಗೀಗ 40 ವರ್ಷ ಹೀಗಾಗಿ ರಾಜಕೀಯ ಸ್ಥಾನಕ್ಕಾಗಿ ಬಡಿದಾಡುವುದು ಅಗತ್ಯವಾಗಿದೆ. ಕಳೆದ ಸಲವೇ ಮುಂದಿನ ಸಲ ಕ್ಷೇತ್ರ ಬಿಟ್ಟು ಸ್ಪರ್ಧೆಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದರು. ಇನ್ನೂ ಕಾಲ ಮಿಂಚಿಲ್ಲ. ಮನಸ್ಸು ದೊಡ್ಡದು ಮಾಡಿ ತಮ್ಮ ಬೆಂಬಲಕ್ಕೆ ಬರುತ್ತಾರೆಂಬ ವಿಶ್ವಾಸವಿದೆ. ಪ್ರಮುಖವಾಗಿ ಬಿಜೆಪಿ ಟಿಕೆಟ್ ತಮಗೆ ದೊರಕಲು ಪಕ್ಷದ ವರಿಷ್ಠರು ದೃಢ ನಿರ್ಧಾರ ಕೈಗೊಳ್ಳುತ್ತಾರೆಂಬ ದೃಢ ವಿಶ್ವಾಸ ಹೊಂದಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಿತಿನ್ ವಿ.ಗುತ್ತೇದಾರ ತಿಳಿಸಿದರು.
Related Articles
Advertisement
ಈ ಹಿಂದೆ ಹೇಳಿರುವಂತೆ ತಮಗೆ ಸ್ಪರ್ಧೆಗೆ ಅವಕಾಶ ನೀಡಿ, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಎಲ್ಲ 41 ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಗೆಲುವಿಗೆ ಶ್ರಮಿಸಲಿ. ದೊಡ್ಡಣ್ಣನಾಗಿ ತಮಗೆ ನ್ಯಾಯ ಕಲ್ಪಿಸಲಿ ಎಂದರು.
ಪಕ್ಷದ ಹಿರಿಯರ ಹಾಗೂ ಮುಖಂಡರ ಸಭೆಯ ನಿರ್ಧಾರವನ್ನು ಹಾಗೂ ಕ್ಷೇತ್ರದ ಪ್ರಮುಖರ ಅಭಿಪ್ರಾಯವನ್ನು ಇನ್ನಷ್ಟು ಜನರನ್ನು ಸೇರಿಸಿ ಅಭಿಪ್ರಾಯ ಕ್ರೋಢಿಕರಿಸಿ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಪಕ್ಷದ ಸಂಘಟನೆಗಾಗಿ ದುಡಿದಿರುವುದು ಎಲ್ಲರ ಗಮನಕ್ಕಿದೆ. ಹೀಗಾಗಿ ಟಿಕೆಟ್ ತಮಗೆ ದೊರಕುತ್ತದೆ ಎಂಬುದು ಶೇ.90ರಷ್ಟು ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ದೊರಕದಿದ್ದರೆ ಮತ್ತೆ ಎಲ್ಲ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಒಟ್ಟಾರೆ ಸ್ಪರ್ಧೆಗೆ ಸಿದ್ದ ಎಂಬುದಾಗಿ ನಿತಿನ್ ಗುತ್ತೇದಾರ ಪರೋಕ್ಷವಾಗಿ ಸೆಡ್ಡು ಹೊಡೆಯುವ ರೀತಿಯಲ್ಲಿ ಹೇಳಿದರು.
ಸಹೋದರ ಮಾಲೀಕಯ್ಯ ಗುತ್ತೇದಾರ ಆರು ಸಲ ಗೆದ್ದಿದ್ದು, ಮೂರು ಸಲ ತಮ್ಮ ತಂದೆ ವೆಂಕಯ್ಯ ಗುತ್ತೇದಾರ ಪ್ರಮುಖ ಪಾತ್ರ ವಹಿಸಿದ್ದರೆ ಇನ್ಮೂರು ಸಲ ಸಹೋದರರೇ ಪ್ರಮುಖತ್ವ ವಹಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಮಾಲೀಕಯ್ಯ ಗುತ್ತೇದಾರ ಯಾವುದಕ್ಕೂ ಆವಕಾಶ ನೀಡದೇ ದೊಡ್ಡಣ್ಣನ ಸ್ಥಾನದಲ್ಲಿ ಕುಳಿತು ನ್ಯಾಯ ಕಲ್ಪಿಸಲಿ ಎಂದರು.
ಸುದ್ದಿ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಸಹೋದರ ಸತೀಶ್ ವಿ. ಗುತ್ತೇದಾರ ಮಾತನಾಡಿ, ದೊಡ್ಡಣ್ಣ ಮಾಲೀಕಯ್ಯ ಗುತ್ತೇದಾರ ಅವರನ್ನು ತಂದೆಯ ರೂಪದಲ್ಲಿ ನೋಡಲಾಗಿದೆ. ಪ್ರಮುಖ ವಾಗಿ ಕ್ಷೇತ್ರದಲ್ಲಿ ನಿತಿನ್ ಪರ ಜನ ಬೆಂಬಲವಿದೆ. ನಿತಿನ್ ಗೆ ಟಿಕೆಟ್ ಗೆ ಅವಕಾಶ ಕಲ್ಪಿಸಬೇಕೆಂಬುದು ಕುಟುಂಬ ವಲಯದಲ್ಲಿ ಚರ್ಚೆಯಾಗಿದೆ. ಅದಲ್ಲದೇ ಎಲ್ಲ ಹಿರಿಯರ ಆಶೀರ್ವಾದ ವಿದೆ. ಜನಬೆಂಬಲ ಮುಂದೆ ಏನೂ ನಡೆಯದು. ಈ ಹಿಂದೆ ಮಂಡ್ಯದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳ ನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿ ಗೆದ್ದಿಲ್ಲವೇ? ಎಂದು ಮಾರ್ಮಿಯವಾಗಿ ಪ್ರಶ್ನಿಸಿದರು
ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ಬಸವಣ್ಣೆಪ್ಪ ಅಂಕಲಗಿ, ಅರವಿಂದ ಹಾಳಕಿ, ಕಲ್ಯಾಣರಾವ ನಾಗೋಜಿ, ಸಿದ್ದು ಹಳಗೋಧಿ, ಪ್ರೇಮಕುಮಾರ ರಾಠೋಡ, ಅಣ್ಣಾರಾವ ಪಾಟೀಲ್ ಸಿರಸಗಿ, ಮಹಾದೇವ ಗುತ್ತೇದಾರ ಸೇರಿದಂತೆ ಪ್ರಮುಖರಿದ್ದರು.