ಬಾಗಲಕೋಟೆ : ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದ ಸಿದ್ದರಾಮಯ್ಯ ಅವರು, ರಾಜ್ಯದ 224 ಕ್ಷೇತ್ರಗಳಲ್ಲಿ ಯಾವುದೇ ಭಾಗದಿಂದ ಸ್ಪರ್ಧಿಸಲು ಸಮರ್ಥರು. ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ, ಈ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಎಚ್.ವೈ. ಮೇಟಿ ಮನವಿ ಮಾಡಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು, ಕಳೆದ ಬಾರಿ ಉತ್ತರ ಕರ್ನಾಟಕದ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿದಾಗ, ನಾನು ಬಾಗಲಕೋಟೆ ಕ್ಷೇತ್ರಕ್ಕೆ ಬರಲು ಕೇಳಿಕೊಂಡಿದ್ದೆ. ನಮ್ಮ ಪಕ್ಷದ ಜಿಲ್ಲೆಯ ಎಲ್ಲ ಹಿರಿಯರೂ, ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ವಿನಂತಿಸಿದ್ದರು. ಅವರು ಬಾದಾಮಿ ಕ್ಷೇತ್ರ ಆಯ್ಕೆ ಮಾಡಿಕೊಂಡಾಗ, ಅಲ್ಲಿನ ನಮ್ಮ ಪಕ್ಷದ ಹಿರಿಯರು, ಕಿರಿಯರು ಸರ್ವ ಸಮ್ಮತದಿಂದ ಒಪ್ಪಿಕೊಂಡು ಚುನಾವಣೆ ನಡೆಸಿದ್ದರು ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಬಾಗಲಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿದರೆ, ನಾನು ಸಂತೋಷದಿಂದ ಕ್ಷೇತ್ರ ಬಿಟ್ಟುಕೊಡುವೆ. ಅವರ ಗೆಲುವಿಗಾಗಿ ಇಡೀ ಕ್ಷೇತ್ರದಾದ್ಯಂತ ಕೆಲಸ ಮಾಡುವೆ. ಜಿಲ್ಲಾ ಕೇಂದ್ರವಾದ ಬಾಗಲಕೋಟೆಗೆ ಅವರ ಬಂದರೆ ನಮಗೆಲ್ಲ ಸಂತೋಷ. ಅವರು ಯಾವುದೇ ನಿರ್ಧಾರ ಕೈಗೊಂಡರೂ ನಾವು ಸರ್ವ ಸಮ್ಮತ ನೀಡುತ್ತೇವೆ ಎಂದು ಹೇಳಿದರು.
ಆದರೆ, ಸಿದ್ದರಾಮಯ್ಯ ಅವರು, ನಾನು ಬಾದಾಮಿ ಕ್ಷೇತ್ರದ ಶಾಸಕ. ನಾನೀಗ ಬಾದಾಮಿಯ ವ್ಯಕ್ತಿ. ಅಲ್ಲಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಅಲ್ಲದೇ ಸಧ್ಯ ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಸಾವಿರಾರು ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದು ಬಾದಾಮಿ ಕ್ಷೇತ್ರದ ಜನತೆಗೆ ಬಹಳಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.