ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜೀ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಉಚ್ಛ ನ್ಯಾಯಾಲಯವು ತಿರಸ್ಕರಿಸಿದೆ.
ಕಳೆದ ಜನವರಿ 25ರಂದು ಮುಂದೂಡಲಾಗಿದ್ದ ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಸುನಿಲ್ ಗೌರ್ ಅವರು ಮಂಗಳವಾರದಂದು ಈ ತೀರ್ಪನ್ನು ನೀಡಿದ್ದಾರೆ. ಸಿಬಿಐ ಹಾಗೂ ಇಡಿ ಪ್ರಕರಣಗಳಿಗೆ ಸಂಬಂಧಿಸಿದ ದೂರನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಯವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪರ ವಕೀಲರು ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸದಿರುವಂತೆ ನ್ಯಾಯಾಲಯವನ್ನು ಕೋರಿಕೊಂಡರು. ಈ ಹಿಂದೆ ಚಿದಂಬರಂ ಅವರು ಪ್ರಶ್ನಿಸಲು ಲಭ್ಯವಾಗಿಲ್ಲದ ಕಾರಣದಿಂದ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಬಿಐ ಮತ್ತು ಇಡಿ ಪರ ವಕೀಲರ ವಾದವಾಗಿತ್ತು.
ಇದೀಗ ಈ ತೀರ್ಪನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಲಿದ್ದಾರೆ. ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಚಿದಂಬರಂ ನಿರೀಕ್ಷಣಾ ಜಾಮೀನಿನ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಲಿದ್ದಾರೆ.
Related Articles
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ 305 ಕೋಟಿ ರೂಪಾಯಿಗಳನ್ನು ಐ.ಎನ್.ಎಕ್ಸ್. ಮೀಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಿ ಬಂಡವಾಳ ಉತ್ತೇಜನ ಮಂಡಳಿ ಕ್ಲಿಯರೆನ್ಸ್ ನೀಡಿರುವುದರಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಸಿಬಿಐ 2007ರಲ್ಲಿ ಇವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಎಫ್.ಐ.ಆರ್. ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಚಿದಂಬರಂ ಅವರ ಮೇಲೆ ಮನಿ ಲಾಂಡ್ರಿಂಗ್ ತಡೆ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.
ಈ ಎರಡೂ ಪ್ರಕರಣಗಳಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಅವರೂ ಸಹ ಆರೋಪಿಯಾಗಿದ್ದಾರೆ. ಮತ್ತು ಕಾರ್ತಿ ಅವರನ್ನು 2018ರಲ್ಲಿ ಸಿಬಿಐ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಕಾರ್ತಿ ಅವರಿಗೆ ಸೇರಿದ ಆಸ್ತಿ ಪಾಸ್ತಿಗಳನ್ನು ಜಾರಿ ನಿರ್ದೆಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ.