ತೀರ್ಥಹಳ್ಳಿ : ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಗರಣವನ್ನು ಮತ್ತೆ ಮರು ತನಿಖೆಗೆ ಮಾಡಲಿ. ಎಲ್ಲಾ ರೀತಿಯಲ್ಲೂ ತನಿಖೆ ಮಾಡಲಿ ಯಾರು ಅಪರಾಧಿಗಳಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಪಿಎಸ್ಐ ಪ್ರಕರಣದ ತನಿಖೆ ಈಗಾಗಲೇ ಮುಕ್ತಾಯವಾಗಿದೆ. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಏನಾಗುತ್ತದೆಯೋ ಗೊತ್ತಿಲ್ಲ. ಕೋರ್ಟ್ ನಲ್ಲಿ ಎಲ್ಲವೂ ನಿರ್ಧಾರವಾಗಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳೆಲ್ಲರೂ ಜೈಲಿನಲ್ಲಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಹೇಳಿದರು.
ಮಂಗಳವಾರ ಶಿಕ್ಷಣ ಸಚಿವರ ಪಿಎಲ್ ಡಿ ಸಭೆಗೂ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಹಾಗೂ ನಮ್ಮ ಸರ್ಕಾರದ ಅವಧಿಯ ಎಲ್ಲ ಯೋಜನೆಗಳ ಬಗ್ಗೆ ತನಿಖೆ ನಡೆಸಲಿ. ಅದನ್ನು ಬಿಟ್ಟು ಏನೋ ಮಾಡುತ್ತೇವೆ ಎಂದು ಹೆದರಿಸುವುದನ್ನು ಬಿಟ್ಟು ಮೊದಲು ತನಿಖೆ ನಡೆಸಲಿ. ಹಳ್ಳಿಯಲ್ಲಿ ಒಂದು ಗಾದೆಯಿದೆ ತಟ್ಟಿಬಡಿದು ಇಲಿ ಹೆದರಿಸಿದರು ಎಂದು ಹಾಗಾಗುವುದು ಬೇಡ. ಒಟ್ಟಾರೆಯಾಗಿ ವ್ಯವಸ್ಥೆ ಚನ್ನಾಗಾಗಲಿ ಎಂಬುದು ನಮ್ಮ ಉದ್ದೇಶ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಕೂಡಲೇ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದಿಂದ ನೀಡುವ ಐದು ಕೆಜಿ ಅಕ್ಕಿ ಈ ತಿಂಗಳ ಕೊನೆವರೆಗೂ ನೀಡಲಿದ್ದೇವೆ. ರಾಜ್ಯ ಸರ್ಕಾರ ತನ್ನ ಪಾಲಿನ ಅಕ್ಕಿಯನ್ನು ಕೂಡಲೇ ನೀಡಲಿ. ಇಲ್ಲದಿದ್ದಲ್ಲಿ ವಿಧಾನಸೌಧದ ಒಳಗೆ ಹೊರಗೆ ಹೋರಾಟ ನಡೆಸುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಆರಗ ಜ್ಞಾನೇಂದ್ರ ಹೆಸರು ಪ್ರಸ್ತಾಪ ವಿಚಾರ ಮಾತನಾಡಿ ಇದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ.
ನಮ್ಮ ಪಕ್ಷದ ಹಿರಿಯರು ತುರ್ತು ಪರಿಸ್ಥಿತಿಯಲ್ಲಿ ತಮ್ಮ ಮನೆ ಹಾಳು ಮಾಡಿಕೊಂಡು ಪಕ್ಷ ಕಟ್ಟಿದ್ದಾರೆ. ನಾವು ಒಂದು ಸೋಲಿಗೆ ದೃತಿಗೆಟ್ಟಿ ಪರಸ್ಪರ ಕೆಸರೆರಚಾಡಿಕೊಳ್ಳುವುದು ಸರಿಯಲ್ಲ. ಬದಲಿಗೆ ಪಕ್ಷದ ವೇದಿಕೆಯಲ್ಲಿ ಇದನ್ನು ಪ್ರಸ್ತಾಪ ಮಾಡಬೇಕು. ಸೋಲನ್ನು ನಾವು ಸರಿಯಾದ ರೀತಿಯಲ್ಲಿ ಸ್ವೀಕರಿಸಬೇಕು. ಈ ಚುನಾವಣೆಯಲ್ಲಿನ ಸೋಲು ಕೆಲವರನ್ನು ಅಲ್ಲಾಡಿಸಿದೆ. ಆದರೆ ಬಿಜೆಪಿಯನ್ನು ಅಲ್ಲಾಡಿಸಿಲ್ಲ.
ಬಿಜೆಪಿಯವರಿಗೆ ಹಿಂದೆ ಸೋಲು ಸ್ವಾಭಾವಿಕ ಗೆಲುವು ಆಕಸ್ಮಿಕವಾಗಿತ್ತು. ಹೀಗಾಗಿ ನಾವು ಸೋತಾಗ ಯಾವಾಗಲೂ ದೃತಿಗೆಟ್ಟಿಲ್ಲ ಎಂದರು.