ಮೂಡುಬಿದಿರೆ: ಮಾಜಿ ಸಚಿವ ಅಭಯಚಂದ್ರ ಅವರು ಸುಮಾರು ಎರಡೂವರೆ ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಕೋವಿಡ್ ವಾರಿಯರ್ ಗಳ ಅಗತ್ಯ ಪ್ರಯಾಣಗಳಿಗೆ ತಮ್ಮ ಇನ್ನೋವಾ ಕಾರನ್ನು ಪೂರ್ಣಾವಧಿ ಚಾಲಕ, ಇಂಧನ ಸಹಿತ ಒದಗಿಸಿಕೊಟ್ಟಿದ್ದಾರೆ.
ಕಳೆದ ವರ್ಷ ಕೋವಿಡ್-19 ನಿಮಿತ್ತ ಹೇರಲಾದ ಲಾಕ್‌ಡೌನ್ ಸಂದರ್ಭದಲ್ಲಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮೂಡುಬಿದಿರೆಯ ಜಿ.ವಿ. ಪೈ ಚಾರಿಟೆಬಲ್ ಆಸ್ಪತ್ರೆಯ ದಾದಿಯರು, ಆರೋಗ್ಯ ಸಹಾಯಕಿಯರು ಸೇರಿ 25 ಮಂದಿಗೆ ಈ ಸೌಲಭ್ಯ ಒದಗಿಸಿದ್ದ ಅಭಯಚಂದ್ರ ಅವರು ಈ ಬಾರಿಯೂ ಅಷ್ಟೇ ಮಂದಿಗೆ ಈ ಉಚಿತ ಸೇವೆ ಒದಗಿಸಿದ್ದಾರೆ.
ಮೂಡುಬಿದಿರೆ ಹಾಗೂ ಪರಿಸರದಲ್ಲಿ ಆರೋಗ್ಯ ಸೇವೆಯ ಕರ್ತವ್ಯ ನಿರ್ವಹಿಸುವ ಈ ಮಂದಿ ಬಸ್ ಓಡಾಟವಿಲ್ಲದೆ ಸಂಕಷ್ಟ ಕ್ಕೀಡಾಗಿದ್ದು ಅವರಿಗೆಲ್ಲ ಈ ಸೌಕರ್ಯ ಬಹಳ ಪ್ರಯೋಜನಕಾರಿಯಾಗಿತ್ತು. ಪರ್ಯಾಯವಾಗಿ ಅದೆಷ್ಟೋ ರೋಗಿಗಳಿಗೂ ಉತ್ತಮ ಸೇವೆ ಲಭಿಸುವಂತಾಗಿತ್ತು.
ಮೂರು ಶಿಫ್ಟ್ ಗಳಲ್ಲಿ ಈ ಮಂದಿಯನ್ನು ಮನೆಗಳಿಂದ ಕರೆದುಕೊಂಡು ಬಂದು ವಾಪಾಸ್ ಬಿಡುವ ಪ್ರಕ್ರಿಯೆ ನಿರಂತರವಾಗಿ ನಡೆದಿತ್ತು. ಮೂಡುಬಿದಿರೆ, ಪಾಲಡ್ಕ, ಕಡಂದಲೆ, ಶಿರ್ತಾಡಿ, ಬಂಟ್ವಾಳ ತಾಲೂಕಿನ ವೇಣೂರು, ವಾಮದ ಪದವು ಹೀಗೆ ಹತ್ತಾರು ಕಡೆಗಳಿಂದ ಆರೋಗ್ಯ ಸಿಬ್ಬಂದಿಗಳನ್ನು ಕರೆದುಕೊಂಡು ಬರುವ, ಶಿಫ್ಟ್ ಮುಗಿದಾಕ್ಷಣ ಅವರನ್ನು ವಾಪಾಸು ಮನೆಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿಯ ಸೇವಾ ಪ್ರಕ್ರಿಯೆ ಇದಾಗಿತ್ತು.
ಸೋಮವಾರದಿಂದ ಖಾಸಗಿ ಬಸ್ಸುಗಳ ಓಡಾಟ ಮತ್ತೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ 25 ಮಂದಿ ಫಲಾನುಭವಿ ಆರೋಗ್ಯ ಸಿಬ್ಬಂದಿಗಳ ಪರವಾಗಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಉಪಸ್ಥಿತ ಸಿಬ್ಬಂದಿಗಳು ತಮಗೆ ಇದುವರೆಗಿನ ಎರಡೂವರೆ ತಿಂಗಳಲ್ಲಿ ಉಚಿತ ವಾಹನ ಸೇವೆ ನೀಡಿ ಉಪಕರಿಸಿದ ಅಭಯಚಂದ್ರ ಅವರಿಗೆ ಮನತುಂಬಿ ಕೃತಜ್ಞತೆ ಸಲ್ಲಿಸಿದರು.