ಇಸ್ಲಾಮಾಬಾದ್: ಲಷ್ಕರ್-ಎ-ತೊಯ್ಬಾ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅವರನ್ನು ಪಾಕಿಸ್ತಾನದಲ್ಲಿ ಗುರುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿವರಗಳ ಪ್ರಕಾರ, ಅಕ್ರಮ್ ಗಾಜಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಅಕ್ರಮ್ ಖಾನ್, ಬಜೌರ್ ಜಿಲ್ಲೆಯಲ್ಲಿ ಅಪರಿಚಿತ ದಾಳಿಕೋರರಿಂದ ಗುಂಡಿಕ್ಕಿ ಕೊಲ್ಲಲ್ಪತ್ತಿದ್ದಾನೆ ಎಂದು ಹೇಳಲಾಗಿದೆ.
2018 ರಿಂದ 2020 ರವರೆಗೆ ಎಲ್ಇಟಿ ನೇಮಕಾತಿ ಸೆಲ್ ಅನ್ನು ಮುನ್ನಡೆಸಿದ್ದ ಖಾನ್, ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಾಷಣಗಳಿಗೆ ಹೆಸರುವಾಸಿಯಾಗಿದ್ದ. ಅಲ್ಲದೆ ಭಯೋತ್ಪಾದಕ ಗುಂಪಿನ ಪ್ರಸಿದ್ಧ ವ್ಯಕ್ತಿಯಾಗಿದ್ದು, ದೀರ್ಘಕಾಲದವರೆಗೆ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಖಾನ್ ಎಲ್‌ಇಟಿ ನೇಮಕಾತಿ ಸೆಲ್‌ಗೆ ನೇತೃತ್ವ ವಹಿಸಿದ್ದರು, ಈ ವೇಳೆ ಉಗ್ರ ಸಂಘಟನೆಗೆ ಬೇಕಾದ ಯುವಕರನ್ನು ಉದ್ಯೋಗದ ಹೆಸರಲ್ಲಿ ನೇಮಕ ಮಾಡಿಕೊಂಡು ಅವರಿಗೆ ಭಯೋತ್ಪಾದನೆ ಬಗ್ಗೆ ತರಬೇತಿ ಕೊಡುತ್ತಿದ್ದ ಎನ್ನಲಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಪಠಾಣ್‌ಕೋಟ್ ದಾಳಿಯ ಮಾಸ್ಟರ್ ಮೈಂಡ್ ಶಾಹಿದ್ ಲತೀಫ್‌ನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲತೀಫ್ ಪಾಕಿಸ್ತಾನದ ಗುಜ್ರಾನ್‌ವಾಲಾ ನಗರದಿಂದ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬರಾಗಿದ್ದರು ಮತ್ತು 2016 ರಲ್ಲಿ ಪಠಾಣ್‌ಕೋಟ್ ವಾಯುಪಡೆಯ ನಿಲ್ದಾಣಕ್ಕೆ ನುಸುಳಿದ್ದ ನಾಲ್ವರು ಭಯೋತ್ಪಾದಕರ ಹ್ಯಾಂಡ್ಲರ್ ಕೂಡ ಆಗಿದ್ದ.
ಇದನ್ನೂ ಓದಿ: Ministerial Dialogue: ದೆಹಲಿಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್