ಹೊಸದಿಲ್ಲಿ : ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡ ಅವರು ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಇಂದು ಬುಧವಾರ ಹೇಳಿದೆ.
ಕೋಡ ಅವರಂತೆ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತ, ಮಾಜಿ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು ಅವರು ಕೂಡ ಅಪರಾಧಿಗಳೆಂದು ಸಿಬಿಐ ಕೋರ್ಟ್ ಹೇಳಿದೆ.
ನಾಳೆ ಗುರುವಾರ ಈ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ತೀರ್ಮಾನಿಸುವ ವಿಷಯದಲ್ಲಿ ವಾದ-ಪ್ರತಿವಾದ ನಡೆಯಲಿದೆ.
ಜಾರ್ಖಂಡ್‌ನಲ್ಲಿನ ಉತ್ತರ ರಾಜಹರ ಕಲ್ಲಿದ್ದಲು ನಿಕ್ಷೇಪವನ್ನು ಕೋಲ್ಕತ ಮೂಲಕ ವಿನಿ ಅಯರ್ನ್ ಆ್ಯಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್ (ವಿಐಎಸ್‌ಯುಎಲ್) ಕಂಪೆನಿಗೆ ನೀಡಿರುವ ವಿಷಯದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೇಸ್ ಇದಾಗಿದೆ.
ಈ ಕಲ್ಲಿದ್ದಲು ಹಗರಣದ ಇತರ ಆರೋಪಿಗಳೆಂದರೆ ಬಸಂತ್ ಭಟ್ಟಾಚಾರ್ಯ, ಬಿಪಿನ್ ಬಿಹಾರಿ ಸಿಂಗ್ (ಇಬ್ಬರೂ ಸರಕಾರಿ ಅಧಿಕಾರಿಗಳು), ವಿಸುಲ್‌ನ ನಿರ್ದೇಶಕ ವೈಭವ್ ತುಳಸಿಯಾನ್, ಕೋಡ ಅವರ ನಿಕಟವರ್ತಿ ವಿಜಯ್ ಜೋಷಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನವೀನ್ ಕುಮಾರ್ ತುಲಸಿಯಾನ್.
ಎಂಟು ಮಂದಿ ಆರೋಪಿಗಳು ಈ ಹಿಂದೆ ತಮಗೆ ಸಮನ್ಸ್ ಜಾರಿಯಾದುದನ್ನು ಅನುಸರಿಸಿ ಕೋರ್ಟಿಗೆ ಹಾಜರಾಗಿದ್ದು ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.