Advertisement

ಇಸ್ರೋ ಮಾಜಿ ವಿಜ್ಞಾನಿಗೆ ಕಿರುಕುಳ, ಕೇರಳ ಪೊಲೀಸರಿಗೆ 50 ಲಕ್ಷ ದಂಡ

02:32 PM Sep 14, 2018 | Team Udayavani |

ನವದೆಹಲಿ: ಸುಮಾರು 24 ವರ್ಷಗಳ ಹಿಂದೆ ಇಸ್ರೋ ವಿಜ್ಞಾನಿ ವಿರುದ್ಧ ಸುಳ್ಳು ಕಥೆ ಕಟ್ಟಿ, ಕೇರಳ ಪೊಲೀಸರು ಬಂಧಿಸಿ ಮಾನಸಿಕ ಹಿಂಸೆ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೋ ಮಾಜಿ ವಿಜ್ಞಾನಿಗೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

Advertisement

ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಅನಗತ್ಯವಾಗಿ ಬಂಧಿಸಿ, ಕಿರುಕುಳ ಕೊಟ್ಟು ಮಾನಸಿಕ ಹಿಂಸೆ ನೀಡಿರುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.

ನಾರಾಯಣನ್ ಅವರ ಬಂಧನದ ಕುರಿತಂತೆ ಕೇರಳ ಪೊಲೀಸ್ ಅಧಿಕಾರಿಗಳ ಪಾತ್ರವೇನು ಮತ್ತು ಯಾಕೆ ಎಂಬುದರ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಡಿಕೆ ಜೈನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ಕೇರಳ ಸರ್ಕಾರ ನೀಡಬೇಕಾಗಿರುವ ಪರಿಹಾರ ಮೊತ್ತದ ಹೆಚ್ಚಳದ ಬಗ್ಗೆ ವಾದ ಆಲಿಸಿದ ಬಳಿಕ ಸುಪ್ರೀಂಕೋರ್ಟ್ ಜೂನ್ ತಿಂಗಳಿನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.

1994ರಲ್ಲಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ವಿರುದ್ಧ ಗೂಢಚಾರಿಕೆ ಆರೋಪ ಹೊರಿಸಿ ಕೇರಳ ಪೊಲೀಸರು ಬಂಧಿಸಿದ್ದರು. 1996ರಲ್ಲಿ ಈ ಪ್ರಕರಣವನ್ನು ಕೇರಳ ಪೊಲೀಸರು ಸಿಬಿಐಗೆ ವರ್ಗಾಯಿಸಿತ್ತು. ಬಳಿಕ ನಂಬಿ ನಾರಾಯಣನ್ ವಿರುದ್ಧದ ಪ್ರಕರಣ ಆಧಾರ ರಹಿತ ಮತ್ತು ಪ್ರಕರಣ ಮುಕ್ತಾಯಗೊಳಿಸಬಹುದು ಎಂದು ಹೇಳಿತ್ತು. ಅಲ್ಲದೇ ಕೆಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಬಿಐ ಶಿಫಾರಸು ಮಾಡಿತ್ತು.

Advertisement

ತದನಂತರ ನಾರಾಯಣನ್ ಅವರು ಕೇರಳದ ಮೂರು ಮಾಜಿ ಪೊಲೀಸ್ ಅಧಿಕಾರಿಗಳಾದ ಎಡಿಜಿಪಿ ಸಿಬಿ ಮ್ಯಾಥ್ಯೂ, ಕೆಕೆ ಜೋಶುವಾ ಮತ್ತು ಎಸ್ ವಿಜಯನ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. 1998ರಲ್ಲಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ನಾರಾಯಣನ್ ಅವರು ನಿರಪರಾಧಿ ಎಂದು ತೀರ್ಪು ನೀಡಿತ್ತು.

ಪ್ರಾಥಮಿಕವಾಗಿ ಹೈಕೋರ್ಟ್ ಏಕಸದಸ್ಯ ಪೀಠ ನಡೆಸಿದ ವಿಚಾರಣೆಯಲ್ಲಿ ಸಿಬಿಐ ಶಿಫಾರಸಿನ ಆಧಾರದ ಮೇಲೆ 1994ರ ಇಸ್ರೋ ಗೂಢಚಾರಿಕೆ ಪ್ರಕರಣದಲ್ಲಿ ಮೂವರು ಕೇರಳ ಮಾಜಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತೀರ್ಪು ನೀಡಿತ್ತು. ಆದರೆ ಹೈಕೋರ್ಟ್ ದ್ವಿಸದಸ್ಯ ಪೀಠ ಪ್ರಕರಣದಲ್ಲಿ ಶಾಮೀಲಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದನ್ನು ತಳ್ಳಿಹಾಕಿತ್ತು. ನಂತರ ನಾರಾಯಣನ್ ಅವರು 2015ರಲ್ಲಿ ಮತ್ತೆ ಸುಪ್ರೀಂ ಮೆಟ್ಟಿಲೇರಿದ್ದರು.

ಆದರೆ 1998ರಲ್ಲಿ ಸುಪ್ರೀಂ ಪೀಠ ನಡೆಸಿದ ವಿಚಾರಣೆಯ ತೀರ್ಪಿನಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಶಿಫಾರಸು ಮಾಡಿಲ್ಲ. ಏತನ್ಮಧ್ಯೆ ಯಾರು ತನಿಖೆಯಲ್ಲಿ ಶಾಮೀಲಾಗಿದ್ದಾರೋ ಆ ಅಧಿಕಾರಿಗಳು ಮತ್ತು ಕೇರಳ ಸರ್ಕಾರ ಪರಿಹಾರ ಕೊಡುವಂತೆ ನಿರ್ದೇಶನ ನೀಡುವುದಾಗಿ ಆದೇಶದಲ್ಲಿ ತಿಳಿಸಿತ್ತು. ಸುಮಾರು 24 ವರ್ಷಗಳ ಸುದೀರ್ಘ ಕಾನೂನು ಸಮರದ ಬಳಿಕ ಇಸ್ರೋ ಮಾಜಿ ವಿಜ್ಞಾನಿ ನಾರಾಯಣನ್ ಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಸುಪ್ರೀಂ ತೀರ್ಪು ನೀಡುವ ಮೂಲಕ ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next