ಲಕ್ನೋ : ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಯುಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಪಕ್ಷ ಸೇರ್ಪಡೆಯ ಬಳಿಕ ಪ್ರತಿ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಅಸೀಮ್ ಅರುಣ್, “ಹಿಂದಿನ ಸರ್ಕಾರಗಳ ಅವಧಿಯಲ್ಲಿ, ಬಂಧನಕ್ಕೊಳಗಾದ ಅಪರಾಧಿಯನ್ನು ಬಿಡಲು ನನಗೆ ಕರೆಗಳು ಬರುತ್ತಿದ್ದವು. ಪಕ್ಷದ ಕಾರ್ಯಕರ್ತರು ಪೊಲೀಸ್ ಠಾಣೆಗೆ ಬಂದು ಕುಳಿತುಕೊಳ್ಳುತ್ತಿದ್ದರು. ಅವರು ಸಿಗ್ನಲ್ ನೀಡುತ್ತಿದ್ದರು, ಅನೇಕ ಬಾರಿ ಅಪರಾಧಿಯನ್ನು ಬಿಡುವಂತೆ ನಮಗೆ ಒತ್ತಡ ಹಾಕಲಾಗಿತ್ತು ಎಂದರು.
ಪೊಲೀಸ್ ಸೇವೆ ತೊರೆಯುವ ತನ್ನ ನಿರ್ಧಾರ ಹಠಾತ್ ಎಂದು ಒಪ್ಪಿಕೊಂಡ ಅವರು, ದೇಶದ ಜನರಿಗೆ ಉತ್ತಮ ಸೇವೆ ಸಲ್ಲಿಸಲು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದರು.
1994 ರ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಅಸೀಮ್ ಅರುಣ್ ಕಾನ್ಪುರ ಪೊಲೀಸ್ ಕಮಿಷನರ್ ಹುದ್ದೆಯಲ್ಲಿರುವಾಗಲೇ ವಿಆರ್‌ಎಸ್ ಪಡೆದಿದ್ದರು. ಆಗಲೇ ಅವರು ಬಿಜೆಪಿಗೆ ಸೇರುವುದು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿದ್ದವು, ಅದು ಈಗ ನಿಜವಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಶ್ರೇಣಿಯ ಅಧಿಕಾರಿಯಾಗಿದ್ದ 51 ರ ಹರೆಯದ ಅಸಿಮ್ ಅರುಣ್ ಅವರು ಈ ಹಿಂದೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ನೇತೃತ್ವ ವಹಿಸಿದ್ದರು.ಅಲಿಘರ್, ಗೋರಖ್‌ಪುರ ಮತ್ತು ಆಗ್ರಾದಂತಹ ಜಿಲ್ಲೆಗಳಲ್ಲಿ ಪೊಲೀಸ್ ಪಡೆಯನ್ನು ಮುನ್ನಡೆಸಿದ್ದರು.
ಐಸಿಸ್ ಉಗ್ರ ಸೈಫುಲ್ಲಾ ಹತ್ಯೆಯ ನೇತೃತ್ವ
2017ರಲ್ಲಿ ಲಕ್ನೋದಲ್ಲಿ 22 ವರ್ಷದ ಐಸಿಸ್ ಉಗ್ರ ಸೈಫುಲ್ಲಾ ಎನ್ಕೌಂಟರ್ ನ ನೇತೃತ್ವವನ್ನುಅಸಿಮ್ ಅರುಣ್ ವಹಿಸಿದ್ದರು. 12 ಗಂಟೆಗಳ ಕಾರ್ಯಾಚರಣೆಯ ನಂತರ ಲಕ್ನೋದ ಅಡಗುತಾಣದಲ್ಲಿ ಸೈಫುಲ್ಲಾನ್ನು ಕೊಲ್ಲಲಾಗಿತ್ತು. ಕಮಾಂಡೋಗಳು ಉಗ್ರನನ್ನು ಜೀವಂತವಾಗಿ ಸೆರೆಹಿಡಿಯಲು ಪ್ರಯತ್ನಿಸಿದರೂ,ಆತ ಶರಣಾಗಲು ನಿರಾಕರಿಸಿದ್ದ.
ಗಲಭೆಕೋರರನ್ನು ಹಿಡಿಯುವವರು ಬಿಜೆಪಿಗೆ
ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಕ್ರೀಡಾ ಮತ್ತು ಯುವಜನ ಸಚಿವ ಅನುರಾಗ್ ಠಾಕೂರ್, ಹಿಂಸಾಚಾರವನ್ನು ನಂಬುವವರು ಎಸ್‌ಪಿಗೆ ಸೇರುತ್ತಾರೆ ಆದರೆ ಪ್ರಾಮಾಣಿಕ ಅಧಿಕಾರಿಗಳು ಬಿಜೆಪಿಗೆ ಸೇರುತ್ತಾರೆ.ಸಮಾಜವಾದಿ ಪಕ್ಷವು ಗಲಭೆಕೋರರನ್ನು ಸ್ವಾಗತಿಸುತ್ತದೆ, ಗಲಭೆಕೋರರನ್ನು ಹಿಡಿಯುವವರನ್ನು ಬಿಜೆಪಿ ಸೇರಿಸುತ್ತದೆ. ಎಸ್ಪಿ ಅಭ್ಯರ್ಥಿಗಳು ಜೈಲಿನಲ್ಲಿ ಅಥವಾ ಜಾಮೀನಿನ ಮೇಲೆ ಹೊರಗಿದ್ದಾರೆ. ನಾವು ಇಲ್ಲಿ ನಿಷ್ಕಳಂಕ ಜನರನ್ನು ಮಾತ್ರ ಸ್ವಾಗತಿಸುತ್ತೇವೆ ಎಂಡಿದ್ದಾರೆ.