ನವದೆಹಲಿ: ಮಧ್ಯಪ್ರದೇಶದ ಮೆಡಿಕಲ್ ಯೂನಿರ್ವಸಿಟಿಗೆ ಗೆಳೆಯನನ್ನು ಉಪ ಕುಲಪತಿಯನ್ನಾಗಿ ನೇಮಿಸುವಂತೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರಿಗೆ ತಾನು ಕೇಂದ್ರ ಸಚಿವ ಅಮಿತ್ ಶಾ ಎಂದು ಪೋಸ್ ಕೊಟ್ಟು ದೂರವಾಣಿ ಕರೆ ಮಾಡಿದ್ದ ಭಾರತೀಯ ವಾಯು ಸೇನೆಯ ಹಿರಿಯ ಅಧಿಕಾರಿ ಇದೀಗ ಮಧ್ಯಪ್ರದೇಶದ ಸ್ಪೆಷಲ್ ಟಾಸ್ಕ್ ಪೋರ್ಟ್ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.
ಭಾರತೀಯ ವಾಯುಪಡೆ(ಐಎಎಫ್)ಯ ವಿಂಗ್ ಕಮಾಂಡರ್ ಕುಲ್ ದೀಪ್ ಬಾಘೇಲಾ ಪ್ರಸ್ತುತ ದೆಹಲಿಯ ಐಎಎಫ್ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ತಾನು ಶಾ ಎಂದು ಗವರ್ನರ್ ಗೆ ದೂರವಾಣಿ ಕರೆ ಮಾಡಿದ ಬಾಘೇಲ್ ಹಾಗೂ ಶಾ ಅವರ ಅವರ ಖಾಸಗಿ ಕಾರ್ಯದರ್ಶಿ ಎಂದು ಸುಳ್ಳು ಹೇಳಿದ್ದ ಆತನ ಭೋಪಾಲ್ ಮೂಲದ ದಂತವೈದ್ಯ ಚಂದ್ರೇಶ್ ಕುಮಾರ್ ಶುಕ್ಲಾನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ ಟಿಎಫ್ ನ ಹೆಚ್ಚುವರಿ ಡೈರೆಕ್ಟರ್ ಜನರಲ್ ಪಿಟಿಐ ಜತೆ ಮಾತನಾಡುತ್ತ, ಜಬಾಲ್ಪುರ್ ಮೂಲದ ಮಧ್ಯಪ್ರದೇಶದ ಮೆಡಿಕಲ್ ಸೈನ್ಸ್ ಯೂನಿರ್ವಸಿಟಿಗೆ ಗೆಳೆಯ ಶುಕ್ಲಾನನ್ನು ಉಪ ಕುಲಪತಿಯನ್ನಾಗಿ ನೇಮಿಸುವಂತೆ ಶಿಫಾರಸು ಮಾಡಿ ಗವರ್ನರ್ ಗೆ ಭಾಘೇಲಾ ಕರೆ ಮಾಡಿದ್ದ ಎಂದು ವಿವರಿಸಿದ್ದಾರೆ.
ಶುಕ್ಲಾ ಮಧ್ಯಪ್ರದೇಶದ ಮೆಡಿಕಲ್ ಸೈನ್ಸ್ ಯೂನಿರ್ವಸಿಟಿಯ ಉಪ ಕುಲಪತಿ ಹುದ್ದೆಯ ಆಕಾಂಕ್ಷಿಯಾಗಿದ್ದ. ಅಲ್ಲದೇ ಉಪ ಕುಲಪತಿ ಹುದ್ದೆಗೆ ನೇಮಕಾತಿ ಆರಂಭಗೊಂಡಿತ್ತು. ತಾನು ಉಪಕುಲಪತಿಯಾಗಬೇಕೆಂಬ ಇಚ್ಛೆಯನ್ನು ಶುಕ್ಲಾ ಗೆಳೆಯ ಬಾಘೇಲಾ ಬಳಿ ವ್ಯಕ್ತಪಡಿಸಿದ್ದ. ಹೀಗಾಗಿ ಹಿರಿಯ ರಾಜಕೀಯ ಮುಖಂಡರ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಶಿಫಾರಸು ಮಾಡುವಂತೆ ಶುಕ್ಲಾ ವಿನಂತಿಸಿಕೊಂಡಿದ್ದ ಎಂದು ಎಡಿಜಿ ತಿಳಿಸಿದ್ದಾರೆ.
ಅದರಂತೆ ಇಬ್ಬರು ಸಂಚು ನಡೆಸಿ, ಶುಕ್ಲಾ ತಾನು ಕೇಂದ್ರ ಗೃಹ ಸಚಿವ ಶಾ ಖಾಸಗಿ ಕಾರ್ಯದರ್ಶಿ ಎಂದು ಹೇಳಿ ಗವರ್ನರ್ ಲಾಲ್ಜಿ ಟಂಡನ್ ಅವರಿಗೆ ಕರೆ ಮಾಡಿದ್ದು, ಬಳಿಕ ಬಾಘೇಲಾ ಅಮಿತ್ ಶಾ ಎಂದು ಹೇಳಿ ಮಾತನಾಡಿ, ಶುಕ್ಲಾ ಹೆಸರನ್ನು ಉಪಕುಲಪತಿಗೆ ಶಿಫಾರಸು ಮಾಡುವಂತೆ ಹೇಳಿದ್ದ ಎಂದು ವರದಿ ತಿಳಿಸಿದೆ.